ರಾಯಚೂರು: ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತರ ಸರಪಳಿಯನ್ನು ಕಡಿದುಹಾಕಲು ರಾಜ್ಯ ಸರ್ಕಾರ ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದು, ಜನತೆಯ ಸಹಕಾರ ಅಗತ್ಯವಿದೆ ಎಂದು ಸಾರಿಗೆ ಖಾತೆ ಹೊಂದಿರುವ ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಹೇಳಿದರು.
ಶನಿವಾರ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ ಕುರಿತು ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿದ ಅವರು
ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ತಡೆಯಲು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ, ಸೋಂಕಿತರಾಗಿ ಈಗಾಗಲೇ ಮನೆಗಳಲ್ಲಿಯೇ ಐಸೋಲೇಷನ್‌ನಲ್ಲಿರುವವರನ್ನು ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸುವ್ಯವಸ್ಥಿತ ಕೋವಿಡ್ ಕೇರ್ ಕೇಂದ್ರಗಳಲ್ಲಿ ದಾಖಲಿಸಲು ಈಗಾಗಲೇ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ, ಅಲ್ಲಿ ಉಟೋಪಚಾರ, ಔಷದೋಪಚಾರ, ಚಿಕಿತ್ಸೆ ನೀಡಲಾಗುವುದು, ಒಂದು ವೇಳೆ ಈ ಉಚಿತ ಸೌಲಭ್ಯ ಪಡೆಯದೇ ತಾವೇ ಹಣ ಪಾವತಿಸಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯಬಯಸುವವರಿಗೆ ಜಿಲ್ಲೆಯ ಲಾಡ್ಜ್ ಗಳು ಅಥವಾ ಹೊಟೇಲ್‌ಗಳಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.
ರಾಯಚೂರು ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್‌ಗಳು ಹಾಗೂ ವೆಂಟಿಲೇಟರ್ ಗಳ ಕೊರತೆ ಇಲ್ಲ, ಈಗಾಗಲೇ ಜಿಲ್ಲೆಯಲ್ಲಿ ೨೪ ಟನ್ ಆಕ್ಸಿಜನ್ ಕೂಡ ಲಭ್ಯವಿದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನವನ್ನು ಪರಿಶೀಲಿಸಲು ಆಸ್ಪತ್ರೆಗೆ ಭೇಟಿ ನೀಡಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವದುರ್ಗದ ಶಾಸಕ ಕೆ.ಶಿವನಗೌಡ ನಾಯಕ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಕೆ.ಆರ್.ದುರಗೇಶ್, ರಿಮ್ಸ್ ಡೀನ್ ಬಸವರಾಜ ಪೀರಾಪೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಮುಖಂಡರಾದ ತ್ರಿವಿಕ್ರಮ ಜೋಷಿ ಸೇರಿದಂತೆ ಹಲವರು ಇದ್ದರು.
*****