*ಕೋವಿಡ್-19 ಮತ್ತು ಮಾಧ್ಯಮಗಳ ಜವಾಬ್ದಾರಿ*
-ಡಾ.ಅಮ್ಮಸಂದ್ರ ಸುರೇಶ್, ಮೈಸೂರು
ಭಾರತದಲ್ಲಿ ಕೋವಿಡ್-19 ಎರಡನೇ ಅಲೆ ಕಳೆದ ತಿಂಗಳಿನಿಂದ ವ್ಯಾಪಕವಾಗಿ ಉಲ್ಪಣಗೊಂಡಿತು. ಇದಕ್ಕೆ ಹೆಚ್ಚಿನವರು ಸರ್ಕಾರಗಳನ್ನು ದೂಷಿಸುತ್ತಿದ್ದಾರೆ. ಆದರೆ ಸರ್ಕಾರಗಳು ತೆಗೆದುಕೊಳ್ಳಬೇಕಾದಷ್ಟೆ ಜವಾಬ್ದಾರಿಯನ್ನು ಮಾಧ್ಯಮಗಳು ಕೂಡ ತೆಗೆದುಕೊಳ್ಳಬೇಕಾಗಿತ್ತು. ಅವುಗಳು ಇದರಲ್ಲಿ ಸಂಪೂರ್ಣವಾಗಿ ಸೋತಿವೆ. ಪತ್ರಿಕೆಗಳು ಕೇವಲ ಸಾವುಗಳನ್ನು ವರದಿ ಮಾಡ ಹೊರಟರೆ ಟಿವಿ ಮಾಧ್ಯಮ ಬರಿ ಸ್ಮಶಾನ ಮತ್ತು ಸಾವಿನ ಚಿತ್ರಗಳನ್ನು ನಿರಂತರವಾಗಿ ಪ್ರಸಾರ ಮಾಡುವ ಮೂಲಕ ಓದುಗರ ಮತ್ತು ವೀಕ್ಷಕರ ಮನೋಸ್ಥ್ಯೆರ್ಯವನ್ನೆ ಹುದುಗಿಸಿಬಿಟ್ಟವು. ಯಾವ ಮಾಧ್ಯಮಗಳು ಜನರಿಗೆ ಕೊರೊನಾ ಕುರಿತು ವಿವರಗಳನ್ನು, ಮುನ್ನೆಚ್ಚರಿಕೆ ಕ್ರಮಗಳನ್ನು, ಮಾನಸಿಕ ಧ್ಯೆರ್ಯವನ್ನು ತುಂಬ ಬೇಕಾಗಿತ್ತೋ ಅದೇ ಮಾಧ್ಯಮಗಳು ಕೇವಲ ಸಾವು-ನೋವು, ಸ್ಮಶಾನಗಳನ್ನು ಮೃತ ದೇಹಗಳನ್ನು ಸುಡುವ ದೃಶ್ಯಗಳನ್ನು ತೋರಿಸುವ ಮೂಲಕ ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಮುಂದಾಗಿದ್ದು ದುರಂತವೇ ಸರಿ.
ಕುಸಿಯುತ್ತಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಅದಕ್ಕೆ ಸರಕಾರಗಳು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು? ಎಂಬುದರ ಕುರಿತು ಸರ್ಕಾರಗಳಿಗೆ ಮಾರ್ಗದರ್ಶನ ಮಾಡುವಲ್ಲಿ ಮಾಧ್ಯಮಗಳು ಸಂಪೂರ್ಣಾವಾಗಿ ವಿಫಲವಾಗಿವೆ. ಆಕ್ಸಿಜನ್ ಕೊರತೆ, ಬೆಡ್ ದಂಧೆ, ರೆಮಿಡಿಸಿವರ್ ಇಂಜೆಕ್ಷನ್ ಗಳ ಕಾಳಸಂತೆಯಲ್ಲಿ ಮಾರಾಟ ಇವುಗಳ ಕುರಿತು ಎಷ್ಟು ಪತ್ರಿಕೆಗಳು ಮತ್ತು ಎಷ್ಟು ಟಿವಿ ಮಾಧ್ಯಮಗಳು ತನಿಖಾ ವರದಿಗೆ ಮುಂದಾಗಿವೆ? ಕೇವಲ ಸಾರ್ವಜನಿಕರು ದೂರಿದ್ದನ್ನು, ಜನಪ್ರತಿನಿಧಿಗಳು ಹೇಳಿದ್ದನ್ನು ವರದಿ ಮಾಡುವುದಷ್ಟೇ ತಮ್ಮ ಜವಾಬ್ದಾರಿ ಎಂಬಂತೆ ನಡೆದುಕೊಳ್ಳುವುದು ಮಾಧ್ಯಮಗಳಿಗೆ ಶೋಭೆ ತರುವುದಿಲ್ಲ.
ಕೊರೊನಾ ಸೋಂಕಿತರೊಬ್ಬರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತರಾದಾಗ, ಆಸ್ಪತ್ರೆ ವಿದಿಸಿದ ಬಾರಿ ಮೊತ್ತದ ಬಿಲ್ ಪಾವತಿಸಲು ವಿಫಲರಾದಾಗ ಮತ್ತು ಬಿಲ್ ಪಾವತಿಸದೆ ಮೃತ ದೇಹವನ್ನು ನೀಡಲು ನಿರಾಕರಿಸಿದಾಗ ಮೃತಳ ಪತಿ ಮೃತ ದೇಹವನ್ನೇ ಬಿಟ್ಟು ಊರಿಗೆ ಹೊರಟ ಸುದ್ದಿಯನ್ನು ಮಾತ್ರ ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಮಾಧ್ಯಮಗಳ ಕರ್ತವ್ಯ ಮುಗಿಯಿತೇ? ಈ ರೀತಿಯ ಪರಿಸ್ಥಿತಿಗೆ ಯಾರು ಕಾರಣ? ಸಂಬಂಧಿಸಿದ ಆಸ್ಪತ್ರೆಯ ಆಡಳಿತಾಧಿಕಾರಿ ಅಥವಾ ವೈದ್ಯರನ್ನು ಮಾಧ್ಯಮಗಳು ಸಂದರ್ಶಿಸಿ ಈ ಕುರಿತು ಮೃತಳ ಸಂಬಂಧಿಗೆ ನ್ಯಾಯ ಒದಗಿಸಲು ಏಕೆ ಮುಂದಾಗಲಿಲ್ಲ? ಕೇವಲ ನಡೆದಿದ್ದನ್ನು ವರದಿ ಮಾಡಿದರಷ್ಟೆ ತಮ್ಮ ಕೆಲಸ ಮುಗಿಯಿತು ಎಂಬ ಮನೋಭಾವವನ್ನು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಬಿಡಬೇಕಾಗಿರುವುದು ಇಂದಿನ ಅಗತ್ಯವಾಗದೆ. ಸುದ್ದಿಯ ಅಥವಾ ಘಟನೆಯನ್ನು ಹಿಂಬಾಲಿಸುವುದ ಮತ್ತು ಆನಂತರ ನಡೆಯುವ ವಿಚಾರವನ್ನು ಜನರಿಗೆ ತಿಳಿಸಬೇಕಾಗಿರುವುದು ಮಾಧ್ಯಮಗಳ ಜವಾಬ್ದಾರಿಯಾಗಿದೆ.
ಮಾಧ್ಯಮಗಳು ಸುದ್ದಿಯನ್ನು ವರದಿ ಮಾಡಿದರಷ್ಟೆ ಸಾಲದು. ಸುದ್ದಿಯ ಹಿಂದಿನ ಘಟನೆಗಳ ಕುರಿತು ವಿಶ್ಲೇಷಣೆ ಮಾಡುವುದು, ಆಳವಾದ ಅಧ್ಯಯನ ಮಾಡುವುದು. ತನಿಖೆ ನಡೆಸುವುದು, ಸುದ್ದಿಯನ್ನು ಹಿಂಬಾಲಿಸುವುದೂ ಕೂಡ ಮಾಧ್ಯಮಗಳ ಕೆಲಸವಾಗಿದೆ. ಘಟನೆಯನ್ನು ವರದಿ ಮಾಡಲು ಇಂದು ಸಾಮಾಜಿಕ ಮಾಧ್ಯಮಗಳು ಮಂಚೂಣಿಯಲ್ಲಿವೆ. ಕೇವಲ ಅದನ್ನೆ ಸಾಂಸ್ಥಿಕ ಮಾಧ್ಯಮಗಳು ಮಾಡುವುದರಲ್ಲಿ ಅರ್ಥವಿಲ್ಲ.
ಇತ್ತಿಚೆಗೆ ಮಾಧ್ಯಮಗಳ ಸುದ್ದಿ ಅಥವಾ ಘಟನೆಗಳನ್ನು ಹಿಂಬಾಲಿಸುವುದನ್ನೇ (ಫೋಲೋ ಅಪ್) ಬಿಟ್ಟು ಬಿಟ್ಟಿವೆ. ಇದನ್ನೆ ಕೋವಿಡ್-19ರ ಮೊದಲನೆ ಅಲೆಯ ನಂತರ ಮಾಧ್ಯಮಗಳು ಮಾಡಿದವು. ಕೊರೊನಾ ಮೊದಲನೆಯ ಅಲೆ ತಣ್ಣಗಾದ ಬಳಿಕ ಮಾಧ್ಯಮಗಳು ಎಲ್ಲವನ್ನೂ ಮರೆತುಬಿಟ್ಟವು. ತಜ್ಞರುಗಳು ಸರ್ಕಾರಕ್ಕೆ ನೀಡಿದ ವರದಿಗಳು ಎಲ್ಲಾ ಮಾಧ್ಯಮ ಸಂಸ್ಥೆಗಳು ತಮ್ಮ ಟೇಬಲ್ಲಿನ ಖಾನೆಯಲ್ಲಿ ಜೋಪಾನವಾಗಿ ಕಾಪಾಡಿಕೊಂಡಿದ್ದರು. ಆದರೆ ಎರಡನೇ ಅಲೆಯ ಕುರಿತು ಸಾರ್ವಜನಿಕರನ್ನು ಮತ್ತು ಸರ್ಕಾರಗಳನ್ನು ಎಚ್ಚರಿಸುವಲ್ಲಿ ಮಾಧ್ಯಮಗಳು ಸಂಪೂರ್ಣವಾಗಿ ವಿಫಲವಾದವು. ಚುನಾವಣಾ ಆಯೋಗ ಕೆಲವು ರಾಜ್ಯಗಳ ಚುನಾವಣೆಗಳನ್ನು ಮತ್ತು ಉಪ ಚುನಾವಣೆಗಳ ದಿನಾಂಕಗಳನ್ನು ಘೋಷಿಸಿದಾಗ ಮತ್ತು ಮಾಧ್ಯಮಗಳಿಗೆ ಕೊರೊನಾ ಎರಡನೇ ಅಲೆಯ ಕುರಿತಾದ ಎಚ್ಚರಿಕೆಯ ಕುರಿತು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡುವ ಕೆಲಸವನ್ನು ಮಾಡಲೇ ಇಲ್ಲ.
ಚುನಾವಣಾ ಪ್ರಚಾರಗಳ ಸಂದರ್ಭದಲ್ಲೂ, ಸಾರ್ವಜನಿಕರು ಚುನಾವಣಾ ಪ್ರಚಾರ ಸಮಾರಂಭಗಳಲ್ಲಿ ಗುಂಪು ಗಂಪಾಗಿ ಸೇರುವುದನ್ನು ಮತ್ತು ರಾಜಕೀಯ ಪಕ್ಷಗಳು ಮುಖಂಡರು ಮಾಡಿದ ಭಾಷಣಗಳನ್ನು ವರದಿ ಮಾಡಿದ ಮಾಧ್ಯಮಗಳು ಈ ರೀತಿ ಗುಂಪು ಸೇರುವುದರಿಂದ ಕೊರೊನಾ ಎರಡನೇ ಅಲೆಗೆ ಮತ್ತಷ್ಟು ಪುಷ್ಟಿ ಸಿಗಲಿದೆ ಎಂಬುದನ್ನು ವಿವರಿಸಿ ಸಾರ್ವಜನಿಕರಿಗೆ ಸಲಹೆ ನೀಡುವ ಹಾಗು ರಾಜಕೀಯ ಪಕ್ಷಗಳಿಗೆ ಮತ್ತು ರಾಜಕೀಯ ಮುಖಂಡರುಗಳಿಗೆ ಈ ಕುರಿತು ಮಾರ್ಗದರ್ಶನ ಮಾಡುವಲ್ಲಿ ಎಡವಿದವು. ಮಾಧ್ಯಮಗಳ ಈ ನಿರ್ಲಕ್ಷ್ಯವೂ ಕೂಡ ಕೋವಿಡ್-19ರ ಇಂದಿನ ವ್ಯಾಪಕ ಹರಡುವಿಕೆಗೆ ಒಂದು ಕಾರಣವಾಗಿದೆ.
ಮೊದಲನೆಯ ಅಲೆಯಲ್ಲಿ ಸರ್ಕಾರ ಲಾಕ್ ಡೌನ್ ನಂತಹ ಕಠಿಣ ಕ್ರಮಗಳನ್ನು ತೆಗೆದುಕೊಂಡಾಗ ಹೆಚ್ಚಿನ ಮಾಧ್ಯಮಗಳು ಕೇವಲ ಆರ್ಥಿಕ ಸಂಕಷ್ಟಗಳ ಕುರಿತು ಹೆಚ್ಚಿನ ವರದಿಗಳನ್ನು ಮಾಡಿದವೇ ಹೊರತು ಜನ ಸಾಮಾನ್ಯರ ಜೀವ ಮತ್ತು ಜೀವನದ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಟಿ ಆರ್ ಪಿ ಹೆಚ್ಚಿಸಿಕೊಳ್ಳುವ ಬರದಲ್ಲಿ ಅದರಿಂದ ಆಗುತ್ತಿರುವ ಅವಾಂತರಗಳನ್ನು ದೃಶ್ಯ ಮಾಧ್ಯಮಗಳು ಪರಿಗಣಿಸುತ್ತಿಲ್ಲ. ಅವುಗಳು ಕೇವಲ ಬ್ರೇಕಿಂಗ್ ನ್ಯೂಸ್ ನೀಡಿದರಷ್ಟೇ ಸಾಲದು ದೃಶ್ಯ ಮಾಧ್ಯಮಗಳ ಪತ್ರಕರ್ತರು ತಮ್ಮ ಕ್ಯಾಮಾರಾ ಕಣ್ಣುಗಳನ್ನು ಜನ ಸಾಮಾನ್ಯರಿಗೆ ನ್ಯಾಯ ಒದಗಿಸಲು ಬಳಸಬೇಕು. ಕೇವಲ ಕೋರೊನಾದಿಂದ ಮೃತರಾದವರನ್ನು ಹೊತ್ತು ಸ್ಮಶಾನಗಳಲ್ಲಿ ಸಾಲು ನಿಂತಿರುವ ಆ್ಯಂಬುಲೆನ್ಸ್ ಗಳನ್ನು ತೋರಿಸಿದರೆ ಸಾಲದು. ಕೋವಿಡ್-19ರ ಹೆಸರಿನಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಬೆಡ್ ಮತ್ತು ಆಕ್ಸಿಜನ್ ದಂಧೆಗಳ ಕಡೆಗೂ ತಮ್ಮ ಕ್ಯಾಮರಾ ಕಣ್ಣುಗಳನ್ನು ತಿರುಗಿಸಬೇಕು.
ಎಷ್ಟು ಟಿವಿ ವಾಹಿನಿಗಳು ಕೊರೊನಾದಿಂದ ಉಂಟಾಗಿರುವ ಮೂಲಭೂತ ಸಮಸ್ಯೆಗಳನ್ನು ಪ್ರತಿಬಿಂಬಿಸಿವೆ? ಕೋರೊನಾ ಹೆಸರಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಬಯಲಿಗೆಳೆದಿವೆ? ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಮಾರ್ಗದರ್ಶನ ಮಾಡಿವೆ? ಎಂಬುದನ್ನು ಸಮಾಜ ಗಮನಿಸುತ್ತಲೇ ಬಂದಿದೆ. ಕೇವಲ ಮಾಸ್ಕ್ ಹಾಕಿ, ಸ್ಯಾನಿಟೈಸರ್ ಸಿಂಪಡಿಸಿಕೊಳ್ಳಿ ಅಥವಾ ದೈಹಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳುವುದಷ್ಟೆ ಮಾಧ್ಯಮಗಳ ಜವಾಬ್ದಾರಿಯಲ್ಲ. ಭೀತಿ ಹರಡುವುದನ್ನು ನಿಲ್ಲಿಸಬೇಕು. ಸರಕಾರ ಕೊರೊನಾ ತಡೆಗೆ ‘ಕರ್ಫ್ಯೂ’ ವಿಧಿಸಿದಾಗ ಅದನ್ನು ತಮಗಿಷ್ಟ ಬಂದಂತೆ ಮಾಧ್ಯಮಗಳು ‘ಜನತಾ ಕರ್ಫ್ಯೂ’ ಎಂದು ತಮ್ಮದೇ ಆದ ವ್ಯಾಖ್ಯಾನ ಮಾಡುತ್ತಿವೆ. ಸರಕಾರದ ಆದೇಶದಲ್ಲಿ ಜನತಾ ಕರ್ಫ್ಯೂ ಎಂಬ ಪದವನ್ನೇ ಬಳಸಿಲ್ಲ. ಮಾಧ್ಯಮಗಳು ಈ ರೀತಿಯ ಅಸಮಂಜಸ ಪದಗಳನ್ನು ಉಪಯೋಗಿಸುವುದನ್ನು ನಿಲ್ಲಿಸುವುದು ಸೂಕ್ತ.
ಕೊರೊನಾ ಕುರಿತು ಮುಖ್ಯಮಂತ್ರಿಗಳು ಅಥವಾ ಪ್ರಧಾನ ಮಂತ್ರಿಗಳು ಏನಾದರೂ ಸುದ್ದಿಗೋಷ್ಠಿ ನಡೆಸುವ ಮೊದಲು ಅಥವಾ ಜನತೆಯನ್ನು ಉದ್ದೇಶಿಸಿ ಮಾತನಾಡುವ ಮುನ್ನ ದೃಶ್ಯ ಮಾಧ್ಯಮಗಳು ತಾವೇ ಎಲ್ಲವನ್ನೂ ಕಲ್ಪಿಸಿಕೊಂಡು ಬೆಳಗ್ಗೆಯಿಂದ ಸಂಜೆವರೆಗೂ ಹೀಗೆ ಹೇಳಬಹುದು, ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು, ಎನೆಲ್ಲಾ ಸಲಹೆಗಳನ್ನು ನೀಡಬಹುದು? ಮುಂತಾದ ವಿಚಾರಗಳನ್ನು ಕಲ್ಪಿಸಿಕೊಂಡು ಭವಿಷ್ಯ ಹೇಳುವವರಂತೆ ಹೇಳಿದ್ದನ್ನೆ ಹೇಳುವ ಮೂಲಕ ವೀಕ್ಷಕರ ತಲೆಕೆಡಿಸುವುದು ಎಷ್ಟು ಸರಿ? ರಾಷ್ಟ್ರಪತಿಗಳು ಅಥವಾ ಪ್ರಧಾನಿಗಳು ಸ್ವಾತಂತ್ರ್ಯ ದಿನ ಅಥವಾ ಗಣರಾಜ್ಯೋತ್ಸವಗಳ ಮುನ್ನಾ ದಿನ ದೇಶವನ್ನು ಉದ್ದೇಶಿಸಿ ಮಾತನಾಡುವ ಭಾಷಣದ ಪ್ರತಿಯನ್ನು ಮಾಧ್ಯಮ ಸಂಸ್ಥೆಗಳಿಗೆ ಮೊದಲೆ ಕಳುಹಿಸಿಕೊಡುವ ವಾಡಿಕೆ ನಮ್ಮಲಿದೆ. ಆದರೆ ಅದನ್ನು ಅವರ ಭಾಷಣದ ನಂತರವೇ ಮಾಧ್ಯಮಗಳು ವರದಿ ಮಾಡಬೇಕೆಂಬ ಷರತ್ತು ವಿಧಿಸಲಾಗಿರುತ್ತದೆ. ಆದರೆ ಮಾಧ್ಯಮಗಳು ಮುಖ್ಯಮಂತ್ರಿಗಳು ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ ಎಂಬುದರಿಂದ ಹಿಡಿದು ಅವರು ಏನೆಲ್ಲಾ ಮಾತನಾಡಬಹುದು ಎಂದು ಕಲ್ಪಿಸಿಕೊಂಡು ಭವಿಷ್ಯ ಹೇಳುವ ಜೊತೆಗೆ ಸುದ್ದಿಗೋಷ್ಠಿಯನ್ನು ರದ್ದು ಮಾಡಿದ್ದನ್ನು, ಸುದ್ದಿಗೋಷ್ಠಿಯನ್ನು ಮರು ನಿಗದಿ ಮಾಡಿದ್ದನ್ನು ಬಹಳ ಮುಖ್ಯವಾದ ವಿಷಯಗಳಂತೆ ಬಿತ್ತರ ಮಾಡಿದ್ದನ್ನು ಎಲ್ಲರೂ ವೀಕ್ಷಿಸಿದ್ದಾರೆ. ಸುದ್ದಿಗೋಷ್ಠಿ ಕರೆದ, ಮರು ನಿಗದಿ ಮಾಡಿದ ವಿಷಯಗಳು ಮಾಧ್ಯಮಗಳ ಸಿಬ್ಬಂದಿಗಳಿಗಷ್ಟೆ ಗೊತ್ತಾದರೆ ಸಾಕು. ಅದನ್ನು ಕಟ್ಟಿಕೊಂಡು ಸಾಮಾನ್ಯ ಜನಕ್ಕೆ ಏನಾಗಬೇಕು? ಜನರಿಗೆ ಬೇಕಾಗಿರುವುದು ಮುಖ್ಯಮಂತ್ರಿಗಳು ಏನು ಹೇಳುತ್ತಾರೆ? ಎಂಬುದು ಮಾಧ್ಯಮಗಳು ಅಷ್ಟನ್ನು ಹೇಳಿದರಷ್ಟೆ ಸಾಕು. ಮಿಕ್ಕಿದ್ದೆಲ್ಲಾ ಅನಗತ್ಯವಾದ ವಿಚಾರ.
# # #
-ಡಾ.ಅಮ್ಮಸಂದ್ರ ಸುರೇಶ್
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346
*****