ಭ್ರಷ್ಟ ವ್ಯವಸ್ಥೆಗೆ ಧಿಕ್ಕಾರ
*****
ಈ ಭ್ರಷ್ಟ ವ್ಯವಸ್ಥೆಗೊಂದು ಧಿಕ್ಕಾರವಿರಲಿ
ನೊಂದವರಿಗೆ ಒಂದಿಷ್ಟು ಮಾನವೀಯತೆ ತೋರಲಿ
ಜೀವವೇ ಹೋಗುವ ಸಂದಿಗ್ಧತೆಯಲ್ಲಿ
ಜೀವ ಹಿಂಡುವ ಹಣದಾಹಿಗಳಿಗೆ
ಹಣಕ್ಕಿಂತ ಜೀವ ಮುಖ್ಯ ವೆಂದು ತಿಳಿದಿಲ್ಲವೇ
ಅನಾರೋಗ್ಯದ ವಿಷಮ ಪರಿಸ್ಥಿತಿಯಲ್ಲಿ
ದುಡ್ಡು ಮಾಡುವ ದಂಧೆ ಕೋರರೇ ನಿಮಗೆ
ಅಸಹಾಯಕರ ಆಕ್ರಂದನ ಕೇಳುತ್ತಿಲ್ಲವೇ
ಹಾದಿಬೀದಿಯಲ್ಲಿ ಹೆಣವಾಗುತ್ತಿವೆ ಅಮಾಯಕ ಜೀವಗಳು
ಎದೆಬಡಿದು ಗೋಳಿಡುತ್ತಿದ್ದರು ಅಸಹಾಯಕ ಜನಗಳು
ಕರುಣೆ ಇಲ್ಲದವರಿಗೆ ಕೇಳುತ್ತಿಲ್ಲ ಆ ಕೂಗು
ಆಳುವ ಸರ್ಕಾರಗಳು ಕೈಚೆಲ್ಲಿ ಕೂತಿರಲು
ಕಾಳಸಂತೆಯಲ್ಲಿ ಹದ್ದುಮೀರಿದೆ ದರ್ಪ ದಾಹಗಳು
ಹೇಸಿಗೆ ತರಿಸಿದೆ ಆಳುವವರ ನಾಚಿಕೆಗೇಡಿನ ಸೋಗು
ಹಣವಂತರ ನೋಡಿ ಬರುತ್ತಿಲ್ಲ ಕಾಯಿಲೆ
ಹಣದಾಹಿಗಳ ಜೇಬು ತುಂಬಬೇಕೆ ಈಗಲೇ
ನಿಮ್ಮೊಳಗಿನ ಮಾನವೀಯತೆ ಸತ್ತು ಹೋಯಿತೆ
ಬೆಂದವರ ನೋವಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿರುವ ನಿಮಗೆ
ನೊಂದವರ ಬಿಸಿಯುಸಿರ ಶಾಪ ತಟ್ಟದಿರದು
ಜನ ದಂಗೆ ಏಳುವ ಮೊದಲೇ ಎಚ್ಚೆತ್ತುಕೊಳ್ಳಿ
ಜನರಲ್ಲಿ ಇನ್ನು ನಂಬಿಕೆ ಉಳಿದಿಲ್ಲ
ಭ್ರಷ್ಟ ವ್ಯವಸ್ಥೆಯ ಮಟ್ಟ ಹಾಕಲಾಗುತ್ತಿಲ್ಲ
ದುಷ್ಟರ ಅಡಿಯಾಳಾಗಿದೆ ಅಧಿಕಾರ
ಮೇಲ್ನೋಟಕ್ಕೆ ಎಲ್ಲ ತಡೆಯುವ ಮಾತು
ಒಳಗೊಳಗೇ ಬೆಂಬಲಿಸುತ್ತಿದೆ ಕೂತು
ಅದರಿಂದ ಜನಗಳ ಜೀವಕ್ಕೆ ಸಂಚಕಾರ
-ಅಮು ಭಾವಜೀವಿ(ಅಪ್ಪಾಜಿ ಎ ಮುಸ್ಟೂರು)
*****