ಕೋವಿಡ್ ನಿಯಂತ್ರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಸೇವೆ ಅಪಾರ:ಡಾ.ಅನಿಲಕುಮಾರ್ ಪ್ರಶಂಸೆ

ಬಳ್ಳಾರಿ: ಕೋವಿಡ್ ನಿಯಂತ್ರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಸೇವೆ ಅಪಾರ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅನಿಲಕುಮಾರ್ ಪ್ರಶಂಸಿಸಿದರು.
ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮ ಪ್ರತಿನಿಧಿಗಳಿಗೆ ಲಸಿಕಾ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ನಿಯಂತ್ರಣದಲ್ಲಿ ಯಾವುದೇ ರೀತಿಯ ಫಲಾಫೇಕ್ಷೆ ಇಲ್ಲದೆ ಸೇವೆಸಲ್ಲಿಸುತ್ತಿರುವ ಮಾಧ್ಯಮ  ಪ್ರತಿನಿಧಿಗಳ ಕಾರ್ಯ ಅನನ್ಯ ಮತ್ತು ಪ್ರಶಂಸಾರ್ಹವಾಗಿದೆ ಎಂದು ಶ್ಲಾಘಿಸಿದರು.
ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್ ನಿಯಂತ್ರಣದಲ್ಲಿ ಬಳ್ಳಾರಿ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದಾರೆ. ಫ್ರಂಟ್‌ಲೈನ್ ವಾರಿಯರ್ಸ್ ಗಳೆಂದು ಸರಕಾರ ಘೋಷಿಸಿ ಲಸಿಕೆ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಕೋವಿಡ್ ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಮಾತನಾಡಿ ಫ್ರಂಟ್‌ಲೈನ್ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಏಕಕಾಲಕ್ಕೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 280 ಜನರಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ. ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಮಾತನಾಡಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಮಹ್ಮದ್ ಶಕೀಬ್ ಅಲಿ,ಹಿರಿಯ ಶುಶ್ರೂಷಕಿ ಕವಿತಾ, ಆರೋಗ್ಯ ಸಿಬ್ಬಂದಿಗಳಾದ ಮಲ್ಲಿಕಾರ್ಜುನ,ರಾಘವೇಂದ್ರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಲಸಿಕೆ ಹಾಕಿದರು.
ಜಿಲ್ಲೆಯಲ್ಲಿ ಗುರುವಾರ 200ಕ್ಕೂ ಹೆಚ್ಚು ಮಾಧ್ಯಮ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗಿದೆ
ಪತ್ರಕರ್ತರು ಹಾಗೂ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಸರಕಾರ ಫ್ರಂಟ್‌ಲೈನ್ ವಾರಿಯರ್ಸ್ ಗಳೆಂದು ಪರಿಗಣಿಸಿ ಕೋವಿಡ್ ಲಸಿಕೆ ನೀಡಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾಡಳಿತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ‌ ಆಯೋಜಿಸಲಾಗಿದೆ.
ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಮಾದ್ಯಮ‌ ಪ್ರತಿನಿಧಿಗಳಿಗೆ ಬಳ್ಳಾರಿ ಪತ್ರಿಕಾಭವನ ಹಾಗೂ ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಏಕಕಾಲಕ್ಕೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
*****