ಅನುದಿನ ಕವನ-೧೩೪, ಕವಿ:ಕೊಟ್ರೇಶ್ ಅಕ್ಕಿ ಉಪನಾಯಕನಹಳ್ಳಿ, ಕವನದ ಶೀರ್ಷಿಕೆ:ಸುದ್ದಿಯ ಕವಿತೆ

ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಅಕ್ಕಿ ಕೊಟ್ರೇಶ್ ಅವರು ಉತ್ತಮ ಕವಿ ಎಂದು ಈವರೆಗೆ ರಚಿಸಿರುವ ಕವಿತೆಗಳಿಂದ ಹೆಸರು ಪಡೆದಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಕ್ಕ ಗ್ರಾಮ ಉಪನಾಯಕನಹಳ್ಳಿಯವರು.
ವಿದ್ಯಾರ್ಥಿ ದೆಸೆಯಿಂದಲೂ ಕವಿತೆಗಳನ್ನು ಬರೆಯುವ ಹವ್ಯಾಸವಿರುವ‌ ಕೊಟ್ರೇಶ್ ಅವರಿಗೆ ಈ ಕೊರೋನಾ ದುರಿತ ಕಾಲದಲ್ಲಿ ನೂರಾರು ಪ್ರಶ್ನೆಗಳು ಎದುರಾಗಿವೆ….ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದಾಗ ಮೂಡಿ ಬಂದ 3 ಕವಿತೆಗಳು ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಪಾತ್ರವಾಗಿವೆ.👇

ಸುದ್ದಿಯ ಕವಿತೆ-1

ಬೀಸುವ‌ ಗಾಳಿಯಲ್ಲಿ
ಏನಾದರು ವಿಷ ತುಂಬಿದೆಯ ?
ಇಲ್ಲ ಇಲ್ಲ ಗಾಳಿಯಲ್ಲಿ ವಿಷವಿಲ್ಲ
ಮೊಬೈಲ್ ನಿಂದ ಹರಡುವ
ಸಂದೇಶಗಳು ವಿಷಪೂರಿತವಾಗಿವೆ .
ಒಂದ ,ಎರಡ ಮನಸ್ಸು ಕೆಡಿಸಲು
ವ್ಯಾಟ್ಸಪ್,ಪೇಸ್ಬುಕ್,ಟಿಕ್ಟಾಕ್ ಆ್ಯಪ್ಗಳು
ಮನಸಿನ ಬೀದಿಯಲಿ ಸರತಿಯಲಿ ನಿಂತಿವೆ
ಕೆಲ ಸುದ್ದಿವಾಹಿನಿಗಳು ಬ್ರೇಕಿಂಗ್ ನ್ಯೂಸ್
ಎನ್ನುವ ಅಣು ಬಾಂಬ್‌ಗಳನ್ನು ಎಸೆಯುತ್ತವೆ
ಮನೆಗಳೆಲ್ಲ ಯುದ್ಧ ಭೂಮಿಗಳಾಗುತ್ತಿವೆ
ಕೊರೊನಾಕ್ಕೆ ಸಿಕ್ಕು ಸತ್ತವರ,ಸೋಂಕಿತರ
ಲೆಕ್ಕಚಾರ ಸಿಗಬಹುದು
ಸುಳ್ಳು ಸುದ್ದಿಗಳಿಗೆ ಮನಸ್ಸು ಕೊಟ್ಟು
ಜೀವಂತ ಶವಗಳಾಗುವವರ ಲೆಕ್ಕ !
ದೇವರೆ ಕೊಡಬೇಕು ,
ಕೊರೊನಾ ಜಾಗತಿಕ ವಿಪತ್ತು
ಸುಳ್ಳು ಸುದ್ದಿ ಜಗತ್ತಿಗೆ ಆಪತ್ತು.

ಕೊರೋನಾ -2

ನಗರಕ್ಕೆ ನಗರಗಳೆಲ್ಲ ಬಂದ್ ಆದವು
ಹಗಲು-ರಾತ್ರಿಗಳು ಈಗ ಒಂದಾದವು
ಬಡವ,ಶ್ರೀಮಂತ,ಜಾತಿ, ಧರ್ಮ, ವಯಸ್ಸು
ಯಾವುದನ್ನು ನೋಡುವುದಿಲ್ಲ ವೈರಸ್ಸು

ಅಭಿವೃದ್ಧಿ ಎಂದರೇನು ಹೇಳು ಮನುಜ
ಭೂಮಿಯ ಅಗೆದು ,ಬರಿದಾಗಿಸಿ ತೆಗೆದೆ ಖನಿಜ
ಈಗ ಸಂಭವಿಸಿದೆ ಜಾಗತಿಕ ವಿಪತ್ತು
ಅನ್ನ ಹೊರತು ,ತಿನ್ನಲು ಬರುವುದಿಲ್ಲ ನಿನ್ನ ಸಂಪತ್ತು

ಕಾಡು ಸುಟ್ಟು, ಸತ್ತವಲ್ಲ ವನ್ಯಮೃಗಗಳು ಲಕ್ಷ ಲಕ್ಷ
ಆಗ ಎಲ್ಲಿ ಹೋಗಿತ್ತು ನಿನ್ನ ಬುದ್ಧಿ , ಲಕ್ಷ್ಯ ?
ಜಗತ್ತೆ ನಡುಗಿದೆ ಒಂದೇ ಒಂದು ವೈರಸ್ಸಿಗೆ
ಇನ್ನ ಯಾವ ಲೆಕ್ಕ ನಾವು ಭಗವಂತನಿಗೆ

ಸೂಕ್ಷ್ಮಾಣು ಜೀವಿಯೊಂದು ಪ್ರಶ್ನೆ ಮಾಡಿದೆ?
ಈ ಭೂಮಿ ನಿನಗಷ್ಟೇ ಅಲ್ಲ ಎಂದು ಸಾರಿ ಹೇಳಿದೆ
ನೀ ಪಳಗಿಸಿರಬಹುದು ಕಣ್ಣಿಗೆ ಕಾಣುವ ಸಿಂಹ ,ಹುಲಿ
ಕೊರೊನಾದ ಭಯಕ್ಕೆ ನೀ ಈಗ ಬಿಲದಲ್ಲಿರುವ ಇಲಿ

ವಿದೇಶದಿಂದ ರೋಗ ಒತ್ತು ತಂದರು ಸಿರಿವಂತರು
ಮಹಾನಗರಗಳಿಂದ ರಸ್ತೆಗೆ ಬಂದವರು ಬಡವರು
ಇನ್ನು ಸಹೋದರರಂತೆ ಕೂಡಿ ಬದುಕಿ ಭುವಿಯಲಿ
ಇಲ್ಲದಿರೆ ಪ್ರಕೃತಿ ಮುನಿದು ಪರಪಂಚ ಅಳಿಯಲಿ.

ಪಠ್ಯದಲ್ಲಿ ಉಳಿದ ಪಾಠಗಳು-3

ಸಾಮಾಟ್ರ ಅಶೋಕ ರಣರಂಗದಿ
ರಕ್ತ ಹರಿಸಿ ಶಾಂತನಾಗಿದ್ದು
ದೊರೆ ಅಲೆಕ್ಸಾಂಡರ್ ಇಡಿ ವಿಶ್ವ
ಗೆಲ್ಲಲು ಹೊರಟು ಕೈ ಚೆಲ್ಲಿದ್ದು
ಸಕಾಲ ಐಸಿರಿಯ ತೊರೆದ
ಬುಧ್ಧ ಬೋದಿಯಡಿ ಕುಳಿತದ್ದು
ಈ ಜನರಿಗೆ ಬುದ್ಧಿ ಹೇಳಲು
ಹೋದ ಬಸವ ಐಕ್ಯವಾದದ್ದು
ಬಜಾರದಲ್ಲಿ ಮುತ್ತು ರತ್ನ ಮಾರಿದ್ದ
ರಾಯನ ಸಾಮ್ರಾಜ್ಯ ಹಾಳಾಗಿದ್ದು
ಊರಿಗೆ ಊರೇ ಪ್ಲೇಗ್ ಮಾರಿ
ಬಂದು ಮಸಣವಾಗಿದ್ದು
ಎಲ್ಲ ಪಾಠಗಳು ನೆನಪಾದವು
ಟಿವಿಯಲಿ ,ಕೊರೊನಾ ಅಬ್ಬರ
ಚೀನಾ-ಬಾರತ ಯುದ್ಧ ಸಿದ್ಧತೆ ,
ಇತ್ಯಾದಿ ,ಇತ್ಯಾದಿ ವರದಿಗಳ ಕಂಡು
ಪಾಠಗಳು ನಮಗೆ ಪಠ್ಯದಲ್ಲಿ ಉಳಿದವಲ್ಲ
ಎಂದು ಮಲಗಿದೆ ನೊಂದುಕೊಂಡು

-ಕೊಟ್ರೇಶ ಅಕ್ಕಿ
ಉಪನಾಯಕನಹಳ್ಳಿ
ಹಗರಿಬೊಮ್ಮನಹಳ್ಳಿ (ತಾ), ವಿಜಯನಗರ (ಜಿ)