ಕವಿ ಪರಿಚಯ:
ಡಾ. ಶರಣಪ್ಪ ಛಲವಾದಿಯವರು ಮೂಲತಃ ಹೋರಾಟಗಾರ, ಕವಿ ಲೇಖಕ, ಸಂಶೋಧಕರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಎಡದೊರೆ ನಾಡು, ದೋ ಆಬ್ಬ ಪ್ರದೇಶವೆಂದು ಕರೆಯಲ್ಪಡುವ ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇ ರಾಯಕುಂಪಿ ಎಂಬ ಪುಟ್ಟ ಗ್ರಾಮದ ದಲಿತ ಕುಟುಂಬದ ಬೂದೆಪ್ಪ ಭೀಮವ್ವ ಎಂಬ ದಂಪತಿಗಳ ಮಗನಾಗಿ 03-06-1983 ರಲ್ಲಿ ಜನಿಸಿದರು.
ಇವರು ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ದೇವದುರ್ಗದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. ನಂತರ ಪದವಿ ಪೂರ್ವ ಶಿಕ್ಷಣ ರಾಯಚೂರಿನ ಟಾಗೋರ್ ಮೆಮೋರಿಯಲ್ ಕಾಲೇಜನಲ್ಲಿ ಮತ್ತು ಪದವಿ ಶಿಕ್ಷಣವನ್ನು ದೇವದುರ್ಗದ ಸರಕಾರಿ ಪ್ರಥಮದರ್ಜೆ ಪದವಿ ಮಹಾ ವಿದ್ಯಾಲಯದಲ್ಲಿ ಪೂರೈಸಿದರು. ಉನ್ನತ ಶಿಕ್ಷಣವನ್ನು ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದಲ್ಲಿ ಎಂ. ಎ. ಕನ್ನಡ ಪದವಿ ಗಳಿಸಿದರು. ಅದೇ ವಿಶ್ವವಿದ್ಯಾಲಯದಲ್ಲಿ ಪಿ. ಎಚ್. ಡಿ ಪದವಿಯನ್ನು ‘ರಾಯಚೂರ ಜಿಲ್ಲೆಯ ದಲಿತ ಸಾಹಿತ್ಯ : ಒಂದು ಅಧ್ಯಯನ’ ಎಂಬ ಶೀರ್ಷಿಕೆಯಡಿಯಲ್ಲಿ ಸಂಶೋಧನೆ ಕೈಗೊಂಡು, ಈ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಪ್ರಸ್ತುತ ರಾಯಚೂರ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾದ್ಯಾಪಕ (ತಾತ್ಕಾಲಿಕ )ರಾಗಿ, ಸಹಾಯಕ ಸಂಶೋಧನಾ ಮಾರ್ಗದರ್ಶಕರಾಗಿ ಕನ್ನಡ ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತ – ಚಳವಳಿ ಪ್ರಭಾವದಲ್ಲಿ ಬೆಳೆದವರು. ಜತೆಗೆ ಕಾರ್ಲ್ ಮಾರ್ಕ್ಸ್ ತತ್ವಸಿದ್ಧಾಂತವನ್ನು ಅಧ್ಯಯನನ ಮಾಡಿದ್ದಾರೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದ ಹಲವಾರು ವಿಚಾರ ಸಂಕೀರಣಗಲ್ಲಿ ಇಪ್ಪತ್ತಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಹತ್ತು ಹಲವಾರು ಬೇರೆ ಬೇರೆ ಕಾಲೇಜುಗಳಲ್ಲಿ ಬೇರೆ ಬೇರೆ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದ್ದಾರೆ.
ಬಹುಮುಖ ಪ್ರತಿಭೆಯ ಡಾ. ಶರಣಪ್ಪ ಛಲವಾದಿ ಅವರು ಪ್ರಗತಿಪರ ಚಿಂತನೆ, ವೈಚಾರಿಕತೆಯ ಮೂಲಕ ತಮ್ಮ ಜೀವನದಲ್ಲಿ ಕಂಡುಂಡ ಅವಮಾನ, ನೋವುಗಳನ್ನು ಬರವಣಿಗೆ ಮೂಲಕ ಅಭಿವ್ಯಕ್ತಿಪಡಿಸಿದರ ಫಲವಾಗಿ ಬುದ್ಧ ಭೂಮಿ (ಕವನ ಸಂಕಲನ), ದಲಿತ ಸಾಹಿತ್ಯಾವಲೋಕನ ಕೃತಿಗಳು ಹೊರ ತಂದಿದ್ದಾರೆ. ಅವರ ಸಾಹಿತ್ಯ ಕೃಷಿಯನ್ನು ಪರಿಗಣಿಸಿ ಹಲವು ಸಂಘ ಸಂಸ್ಥೆಗಳು ಕೊಡುವ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ್ದಾರೆ. ಬುದ್ಧ ಭೂಮಿ ಕೃತಿಗೆ ವಿಶ್ವ ಕನ್ನಡಿಗರ ಸಂಸ್ಥೆ ಬೀದರ್ ಅವರಿಂದ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಬೆಂಗಳೂರು ಈ ಸಂಘದಿಂದ ಸಾಹಿತ್ಯ ಸೇವೆ ಪರಿಗಣಿಸಿ ರಾಷ್ಟ್ರೀಯ ಭೂಷಣ ರಾಜ್ಯ ಪ್ರಶಸ್ತಿ ದೊರೆತಿದೆ.
ಇವರ ಸಾಹಿತ್ಯ ಕೃಷಿ ಹೀಗೆ ಮುಂದುವರಿಯಲಿ ಎಂದು ಕರ್ನಾಟಕ ಕಹಳೆ ಡಾಟ್ ಕಾಮ್ (ಆನ್ ಲೈನ್ ಪತ್ರಿಕೆ) ಅಭಿನಂದಿಸಿ ಹಾರೈಸುತ್ತದೆ.
ಕವನ ಹುಟ್ಟಿತು ಹೀಗೆ:
ಯಾವದೇ ಕವಿ ಲೇಖಕನ ಬರವಣಿಗೆಗೆ ವಿಷಯ ವಸ್ತು ಅತ್ಯಗತ್ಯ. ಲಾಕ್ ಡೌನ್ ಸಂದರ್ಭದಲ್ಲಿ ಕನ್ನಡ ಜೀ ವಾಹಿನಿಯಿಂದ ಪ್ರಸಾರವಾಗುವ ಮಹಾ ನಾಯಕ ಧಾರವಾಹಿ ಡಾ. ಬಿ. ಆರ್ ಅಂಬೇಡ್ಕರ್ ಬದುಕಿನ ಯಶೋಗಾಥೆಯ ಕುರಿತು ಪ್ರಸಾರವಾಗುತ್ತಿರುವುದು ಮಾತ್ರವಲ್ಲ ಕೋಟಿ ಕನ್ನಡಿಗರ ಅಚ್ಚುಮೆಚ್ಚಿನ ಧಾರವಾಹಿಯಾಗಿದೆ.
ಧಾರಾವಾಹಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತಂದೆ ರಾಮಜಿ ಸಕ್ಪಾಲ್ ತಾಯಿ ಭೀಮಾಬಾಯಿ ಸಕ್ಪಾಲ್ ಅವರು ತಮ್ಮ ಮಕ್ಕಳಿಗೆ ಕೊಡುವ ಸಂಸ್ಕಾರ ಶಿಕ್ಷಣದ ಮಹತ್ವ ಇಂದಿನ ಪೀಳಿಗೆಗೆ ಆದರ್ಶ ಪ್ರಾಯವಾದುದ್ದು. ಹಾಗೆಯೇ ಮಾತೆ ಭೀಮಾಬಾಯಿ ಅವರು ಇಡಿ ತಮ್ಮ ಜೀವಿತ ಅವಧಿಯಲ್ಲಿ ನೋವು, ಅವಮಾನ, ಕಷ್ಟಗಳನ್ನೊತ್ತು ಸಂಸಾರದ ಜವಾಬ್ದಾರಿ ನಿಬಾಯಿಸಿದ ರೀತಿ ನಿಬ್ಬೆರಗಾಗುವಂತದ್ದು.
ಡಾ. ಅಂಬೇಡ್ಕರ್ ಜಗತ್ತಿನ ಶ್ರೇಷ್ಠ ಜ್ಞಾನಿಯಾಗುವಲ್ಲಿ ಅವರ ತಾಯಿ ಪಾತ್ರ ತುಂಬ ದೊಡ್ಡದು. ಜೀ ವಾಹಿನಿಯಲ್ಲಿ ಮಾತೆ ಭೀಮಾಬಾಯಿ ಅನಾರೋಗ್ಯದಿಂದ ತೀರಿ ಹೋಗುವ ಸಂದರ್ಭ, ಅವರ ಬದುಕಿನ ದಿನಗಳು ನೆನೆದು ದುಃಖಿತನಾಗಿದ್ದಾಗ ‘ಕಂಬನಿಯ ಕಡಲಾಗಿ’ ಕವಿತೆ ಮೂಡಿತು ಎಂದು ಕವಿ ಡಾ. ಶರಣಪ್ಪ ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ವಿವರಿಸುತ್ತಾರೆ.
ಇಂದಿನ “ಅನುದಿನಕವನ”ದ ಗೌರವಕ್ಕೆ ‘ಕಂಬನಿಯ ಕಡಲಾಗಿ’ ಪ್ರಕಟವಾಗಿದೆ.👇
(ಸಂಪಾದಕರು)
ಕಂಬನಿಯ ಕಡಲಾಗಿ
******
ಹೆತ್ತ ಮಕ್ಕಳ ಬಿಟ್ಟು ಮೋಹದ ಗಂಡನ
ತೊರೆದು ಮರಳಿ ಬಾರದೂರಿಗೆ
ಪಯಣ ಬೆಳಿಸಿದೆ ನನ್ನವ್ವ
ಮಮತೆಯ ಮಡಿಲು ಬರಿದಾಗಿದೆ ಒಡಲು
ಕರಳು ಕಂದಮ್ಮಗಳಿಗೆ ಕವಿದಿದೆ ಕಾರ್ಗತ್ತಲು
ಮುದ್ದಿನ ಕಂದಮ್ಮಗಳಿಗೆ ಮಮತೆಯ ತೋರಿ
ವಿದ್ಯಾ ಬುದ್ದಿಯ ಸಂಸ್ಕಾರ ಕೊಟ್ಟು
ರಾಮಜಿಯ ಮನದಂಗನೆಯಾಗಿ
ಸಿಪಾಯಿಯಿಂದ ಸುಭೇದಾರನಾಗಿ ನೋಡಿ
ಜಗದ ನೋವುಂಡು ಸಂಸಾರದ ನೌಕೆಗೆ
ನಾವಿಕಳಾದೆ ನನ್ನವ್ವ
ಹೋರಾಟದ ಬದುಕಿನ ಕ್ರಾಂತಿಯ ಕಿಡಿಗಳ
ಹೊತ್ತಿಸಿ ಸಮಾಜದ ಬೆಳಕು ನೀನಾದೆ
ನೊಂದು ಬೆಂದವರಿಗೆ ನೆರಳಾದೆ
ನೋವಿಗೆ ಮುಲಾಮು ಕೊಟ್ಟೆ
ಭೀಮನಿಗೆ ಶಕ್ತಿಯಾಗಿ ರಾಮಜೀ ಸಕ್ಪಾಲರಿಗೆ
ಯುಕ್ತಿಯಾಗಿ
ಬದುಕಿನ ಪಯಣ ಮುಗಿಸಿ ಮರೆಯಾದೆ
ನನ್ನವ್ವ
ಸಾವಿನಿಂದ ನೋವು ಮಡುಗಟ್ಟಿದೆ
ಮನಸು ಕಣ್ಣುಗಳು ಕಂಬನಿಯ ಕಡಲಾಗಿ
ಹರಿಯುತಿರಲೂ
ನೋವಲಿ ಕಾವ್ಯ ಮೂಡುತಿರಲೂ
ಸಾವಲ್ಲೂ ಸಂಭ್ರಮಿಸುವ ಶನಿ ಸಂತಾನದ
ಸನಾತನವಾದಿಗಳನ್ನು ಕಂಡು ನೆತ್ತರು
ಕುದಿಯುತಿರಲೂ
ನಿನ್ನ ಚಿತೆಯ ಒಂದೊಂದು ಕಿಡಿಗಳು
ಕ್ರಾಂತಿಯ ಕಿಡಿಗಳಾಗಿ ಹೊರ ಹೊಮ್ಮತಲಿವೆ
-ಡಾ. ಶರಣಪ್ಪ ಛಲವಾದಿ, ಹಿರೇರಾಯಕುಂಪಿ, ರಾಯಚೂರು(ಜಿ)