ಅನುದಿನ ಕವನ-೧೪೦, ಕವಿ: ಶಂಕುಸುತ ಮಹಾದೇವ ರಾಯಚೂರು, ಕವನದ ಶೀರ್ಷಿಕೆ: ಒಂಟಿ ಜೀವನ

ಒಂಟಿ ಜೀವನ
*****
ಹುಚ್ಚು ಖೋಡಿ ಮನವಿದು
ಬಿಸಿಲು ಕುದುರೆಯ ಏರಿದೆ
ಅತ್ತ ಇತ್ತ ಸುತ್ತಮುತ್ತಲಿದು
ಕುಣಿದು ಕುಪ್ಪಳಿಸಿ ಸಾಗಿದೆ.

ಮಾತು ಕೇಳದೆ ಮುನ್ನಡೆದಿದೆ
ತಾಳ ತಪ್ಪಿ ಕುಣಿದು ನಡೆದಿದೆ
ಮಾಡಬೇಕೇನೋ ತಿಳಿಯದೆ
ಮನಸ್ಸು ಮೌನಕೆ ಶರಣಾಗಿದೆ.

ಒಮ್ಮೊಮ್ಮೆ ಒಂದೊಂದು ಚಿಂತೆ
ಮನಕ್ಕಾವರಿಸಿ ಮನ ಕೊಲ್ಲುತ್ತಿದೆ
ಬೆಂಕಿಯಲಿ ಬೇಯುತಲಿ ನಿಶ್ಚಿಂತೆ
ಜೀವನದಿ ಮಾಯವಾಗಿ ಹೋಗಿದೆ.

ಅರಳಿದ ಸುಂದರ ಹೂವುಗಳು
ಬೇಸರವ ಕಳೆಯಲು ಸೋತಿವೆ
ಹರಿವಾ ಜೋಗ ಜಲಧಾರೆಗಳು
ಖುಷಿಯ ಕೊಡಲು ಪರದಾಡಿವೆ.

ನಮ್ಮವರೆಂಬ ಅನುಬಂಧಗಳು
ಸತ್ತು ಮಸಣವ ಸೇರಿ ಬಿಟ್ಟಿವೆ
ನಾನು ನನ್ನದೆಂಬ ಜಂಭಗಳು
ಮೆರೆದು ಕತ್ತು ಹಿಸುಕಿ ಕೊಂದಿವೆ.

-✍️ ಶಂಕುಸುತ ಮಹಾದೇವ, ರಾಯಚೂರು 

*****