ಮೇ 31ರವರೆಗೆ ಬಳ್ಳಾರಿ-ವಿಜಯನಗರ ಜಿಲ್ಲೆ ಸಂಪೂರ್ಣ ಲಾಕ್‍ಡೌನ್: ಕೆಲ ಚಟುವಟಿಕೆಗಳಿಗೆ ಮಾತ್ರ ಅನುಮತಿ ಜಿಲ್ಲಾಧಿಕಾರಿ ಮಾಲಪಾಟಿ

ಬಳ್ಳಾರಿ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಾದ್ಯಾಂತ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೇ 24ರ ಬೆಳಗ್ಗೆ 6ರಿಂದ ಮೇ 31ರ ಬೆಳಗ್ಗೆ 6ರವರೆಗೆ ಸಾರ್ವಜನಿಕರ ಅನಗತ್ಯ ಓಡಾಟವನ್ನು ನಿರ್ಬಂಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ಹಿನ್ನೆಲೆಯಲ್ಲಿ ಮೇ 24 ಮತ್ತು 25ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.
ಕಿರಾಣಿ ಅಂಗಡಿಗಳು ದಿನಸಿ, ಹಣ್ಣು, ತರಕಾರಿಗಳು, ಮದ್ಯದ ಅಂಗಡಿಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು ಮಾತ್ರ ನಿರ್ವಹಿಸತಕ್ಕದ್ದು. ಈ ಅಂಗಡಿಗಳು ಸಾರ್ವಜನಿಕರ ಸಾಮಾಜಿಕ ಅಂತರವನ್ನು ಕಾಪಾಡುವ ಹಿತದೃಷ್ಟಿಯಿಂದ ಸಾಲಿನಲ್ಲಿ ಖರೀದಿಸಲು ಕೋವಿಡ್-19 ನಿಯಮಗಳಂತೆ ಗುರುತುಗಳನ್ನು ಹಾಕುವುದು ಮತ್ತು ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟಾಗಿ ಪಾಲಿಸಲು ಹೊರಡಿಸಲಾಗಿರುವ ಆದೇಶದಲ್ಲಿ ತಿಳಿಸಲಾಗಿದೆ ಎಂದರು.
ಈ ಸ್ಥಳಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ*: ಮೇ 24 ಮತ್ತು 25ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಬಳ್ಳಾರಿ ನಗರದಲ್ಲಿ ಈದ್ಗಾ ಮೈದಾನ, ಐ.ಟಿ.ಐ. ಕಾಲೇಜು ಮೈದಾನ, ಎನ್.ಸಿ.ಸಿ. ಮೈದಾನ,. ಸೆಂಟ್ ಜಾನ್ಸ್ ಕಾಲೇಜು ಮೈದಾನ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಮೈದಾನ,ಜಿಲ್ಲಾ ಕ್ರೀಡಾಂಗ, ಶ್ರೀರಾಂಪುರ ಕಾಲೋನಿಯ ಸರ್ಕಾರಿ ಶಾಲೆಯ ಹತ್ತಿರ ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಡಿಸಿ ಮಾಲಪಾಟಿ ಅವರು ವಿವರಿಸಿದರು.
ಹೊಸಪೇಟೆನಗರದ ಟಿಬಿ ಡ್ಯಾಂ ಮೈದಾನ, ವಿ.ಎನ್.ಸಿ. ಮೈದಾನ, ದೀಪಾಯನ ಶಾಲೆಯ ಹತ್ತಿರ ಇರುವ ಮೈದಾನ,ಎಂ.ಜೆ. ನಗರ ಪಾನಿ ಪೂರಿ ಮೈದಾನ, ಪಾಟೀಲ್ ಹೈ ಸ್ಕೂಲ್ ಮೈದಾನ, ಬಾಲಾ ಟಾಕೀಸ್‍ನ ಪಕ್ಕದಲ್ಲಿರುವ ಮೈದಾನದಲ್ಲಿ,ಸಿರಗುಪ್ಪದಲ್ಲಿ ಹೈಸ್ಕೂಲ್ ಮೈದಾನ, ಕುರುಗೋಡುವಿನಲ್ಲಿ ಎಪಿಎಂಸಿ ಮೈದಾನ, ಕಂಪ್ಲಿ ಪಟ್ಟಣದಲ್ಲಿ ಷಮೀಯಾ ಚಾಂದ್ ಜೂನಿಯರ್ ಕಾಲೇಜು ಮೈದಾನ,ಸಂಡೂರಿನಲ್ಲಿ ಯಶವಂತ ವಿಹಾರ ಮೈದಾನ, ಹಗರಿಬೊಮ್ಮನಹಳ್ಳಿಯಲ್ಲಿ ಕಾಲೇಜು ಮೈದಾನ, ಕೂಡ್ಲಿಗಿಯಲ್ಲಿ ತಾಲೂಕು ಕಚೇರಿ ಎದುರುಗಡೆ ಇರುವ ಮೈದಾನ,ಕೊಟ್ಟೂರಿನಲ್ಲಿ ಮರಿ ಕೊಟ್ಟೂರೇಶ್ವರ ದೇವಸ್ಥಾನ ಹತ್ತಿರವಿರುವ ಮೈದಾನ, ಹರಪನಳ್ಳಿ ತಾಲೂಕು ಕ್ರೀಡಾಂಗಣ, ಹಡಗಲಿ ತಾಲೂಕು ಕ್ರೀಡಾಂಗಣದಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಬಳ್ಳಾರಿ ನಗರದ ಬೆಂಗಳೂರು ರಸ್ತೆಯು ಸಂಪೂರ್ಣವಾಗಿ ಸಾರ್ವಜನಿಕರ ಸಂಚಾರವನ್ನು ನಿಷೇಧಿಸಲಾಗಿರುತ್ತದೆ. ಈ ರಸ್ತೆಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡುತ್ತಿರುವವರು ನಿಗಧಿಪಡಿಸಲಾದ ಸ್ಥಳಗಳಲ್ಲಿ ಮಾತ್ರ ಮಾರಾಟ ಮಾಡಲು ಅನುಮತಿಸಲಾಗಿದೆ ಎಂದು ಮಾಲಪಾಟಿ ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಓ ನಂದಿನಿ‌ ಉಪಸ್ಥಿತರಿದ್ದರು.
*****