ಇದು ಇಂದು ಎಲ್ಲರೂ ಓದಲೇಬೇಕಿರುವ ಕವಿತೆ. ನಮ್ಮವರು, ನೆರೆಹೊರೆಯವರಿಗೂ ತಿಳಿಸಲೇಬೇಕಿರುವ ಸಾಲುಗಳು. ಈಗ ಬಹುಪಾಲು ಜನರು ಸಾಯುತ್ತಿರುವುದು ರೋಗನಿರೋದಕ ಶಕ್ತಿಯ ಕೊರತೆಯಿಂದಲ್ಲ. ಆತ್ಮನಿರೋದಕ ಶಕ್ತಿಯ ಅಭಾವದಿಂದ. ನಾವು ಪರಸ್ಪರರಲ್ಲಿ ಒಳಗಿನ ಹೆದರಿಕೆಯನ್ನು ಓಡಿಸಿ, ಬದುಕಿನ ಭರವಸೆಯನ್ನು ಮೂಡಿಸಬೇಕಿದೆ. ಮೊದಲು ಟಿ.ವಿ.ಯಲ್ಲಿ ತೋರಿಸುವ ಸಾವುಗಳನ್ನು ಲೆಕ್ಕ ಹಾಕುವುದು ಬಿಟ್ಟು, ಅಂತಃಸ್ಥೈರ್ಯ ಗಟ್ಟಿ ಮಾಡಿಕೊಂಡು, ಸೂಕ್ತ ಜಾಗ್ರತೆಗಳೊಡನೆ ಮುನ್ನಡೆದಲ್ಲಿ ಯಾವ ಸೋಂಕು ನಮ್ಮನ್ನು ಸೋಲಿಸಲಾಗದು. ಸಾಯಿಸಲಾಗದು. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.’👇
ಆತ್ಮವಿಶ್ವಾಸವೇ ಶ್ರೀರಕ್ಷೆ.!
ದೇಹದ ಶ್ವಾಸ ಕುಂದಿದರೂ ಗೆಳೆಯ
ಕುಂದಬಾರದು ಎಂದು ಆತ್ಮವಿಶ್ವಾಸ
ಕಡಿಮೆಯಾದರೂ ಇಳೆಯ ವಿಶ್ವಾಸ
ಕುಗ್ಗಬಾರದು ನಮ್ಮೆದೆಯ ಚಿರಹಾಸ.!
ಸಾವಿಗೇಕೆ ಸುಖಾಸುಮ್ಮನೆ ಹೆದರಿಕೆ
ಬದುಕಲಿಕ್ಕೆ ಬೇಕಿಹುದು ಎದೆಗಾರಿಕೆ.!
ಗಟ್ಟಿಯಿದ್ದರೆ ಗುಂಡಿಗೆಯಲಿ ಸ್ಥೈರ್ಯ
ಮೃತ್ಯುವಿಗೂ ಮುಟ್ಟಲು ಅಧೈರ್ಯ.!
ಕೊರೋನಾ ಎಂಬುದು ಸೋಂಕಷ್ಟೆ
ಜೀವತೆಗೆವ ಮಹಾ ಖಾಯಿಲೆಯಲ್ಲ.!
ಕಾಯವ ಕಾಡಿಸಿ ನರಳಿಸಬಹುದಷ್ಟೆ
ಪ್ರಾಣಕೆ ಕುತ್ತು ತರುವ ರೋಗವಲ್ಲ.!
ಹತ್ತು ಹಲವು ಕಾರಣದಿ ಮರಣಿಸಿದ
ನೂರು ಮಂದಿಯ ನೆನೆವ ಬದಲು
ಸೋಂಕು ಗೆದ್ದು ನಗುತ ನಿಂತಿರುವ
ಕೋಟಿ ಜನರ ನೋಡು ಮೊದಲು.!
ಯುಗ ಯುಗಗಳಿಂದಲು ಈ ಜಗದಿ
ನಿಂತು ಹೋರಾಡಿ ಸತ್ತವರಿಗಿಂತಲೂ
ಹೆದರಿ ಚೀರಾಡಿ ಸತ್ತವರೇ ಹೆಚ್ಚು.!
ಮೃತ್ಯುವಿಗೂ ಹೇಡಿಗಳೇ ಅಚ್ಚುಮೆಚ್ಚು.!
ಎಂತೆಂತಹ ವಿಪ್ಪತ್ತು ವಿಪ್ಲವಗಳನೋ
ಎದುರಿಸಿ ಗೆದ್ದು ಬೀಗಿದೆ ಮನುಕುಲ
ಅಜಾತವಾಗುಳಿದಿದೆ ಜೀವಸಂಕುಲ
ಮತ್ತೇಕೆ ಅಂಜಿಕೆ ಆತಂಕ ವ್ಯಾಕುಲ?
ಏಳು ಎದ್ದೇಳು ನೀನೊಂದು ಚೈತನ್ಯ
ನಿನಗಿದೆ ವಿಧಾತನ ಪೂರ್ಣ ಕಾರುಣ್ಯ
ಸುಳ್ಳು ಪೊಳ್ಳು ವದಂತಿಗೆ ಸಡ್ಡುಹೊಡಿ
ದೃಢವಿಶ್ವಾಸದಿ ಧೃತಿಗೆಡದೆ ಮುಂದೆನಡಿ.!
-ಎ.ಎನ್.ರಮೇಶ್. ಗುಬ್ಬಿ.
*****