ಹಿರಿಯ ಕವಿ ಟಿ. ಕೆ ಗಂಗಾಧರ ಪತ್ತಾರ ಅವರು ೫೦ ವರ್ಷಗಳ ಹಿಂದೆ ೧೯೭೦ರಲ್ಲಿ ಪಿಯುಸಿ ಓದುತ್ತಿದ್ದಾಗ ರಚಿಸಿದ ಕವಿತೆ. ಇದರ ಪ್ರತಿಸಾಲಿನ ಮೊದಲಕ್ಷರ ಮೇಲಿನಿಂದ ಕೆಳಕ್ಕೆ ಕ….ಕಾ….ಕಿ…..ಕೀ……..ಕಂ…ಕ: ಬರುತ್ತವೆ.
ಕ..ಕಾ.. ಬಳ್ಳಿಯಲ್ಲಿ ಕನ್ನಡ ಕವನ ಕುಸುಮ
~~~~~~~~~~~~~~~~~~~~
ಕನ್ನಡಾಂಬೆಯೆ ಅನ್ನಪೂರ್ಣೆಯೆ
ಕಾಯೆ ನಿನ್ನಯ ಸುತರನು
ಕಿವಿಯು ಸವಿಯಲಿ ನಿರುತ ನಿನ್ನಯ
ಕೀರ್ತಿ ಗಾನದ ಸುಧೆಯನು
ಕುಲದ ಭೇದವ ತೊಡೆದು ಕರುಣಿಸು
ಕೂಡಿ ಬಾಳುವ ಮತಿಯನು
ಕೆಟ್ಟ ಯೋಚನೆ ಬಿಡಿಸು ವಂಚನೆ
ಕೇಡಿತನ ಅವಗುಣವನು
ಕೈಗೆ ಶಕ್ತಿಯ ಮನಕೆ ಯುಕ್ತಿಯ
ಕೊಟ್ಟು ಕೆಲಸಕೆ ಹೆಚ್ಚಿಸು
ಕೋಪ ಮತ್ಸರ ಅಳಿದು, ಬುದ್ಧಿಯ-
ಕೌಶಲತೆಯನು ಹೆಚ್ಚಿಸು
ಕಂಗೆಡದೆ ಮುನ್ನಡೆವ ಬಲ ಕೊಡು
ಕ:ಪದಾರ್ಥವ ತೊಲಗಿಸು
ಕನ್ನಡದ ಜನಪದದ ಕೀರುತಿ
ಕಹಳೆ ಎಲ್ಲೆಡೆ ಮೊಳಗಿಸು
-ಟಿ.ಕೆ.ಗಂಗಾಧರ ಪತ್ತಾರ, ಬಳ್ಳಾರಿ
~~~~~~~~~~~~~~~~~~~