ಕರ್ನಾಟಕ ಕಹಳೆ ಡಾಟ್ ಕಾಮ್’ ನ ವಿಶೇಷ, ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 150 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ.
ಈ ನೂರಾ ಐವತ್ತು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ ಖುಷಿ ನಮ್ಮದು.
ಇಂದಿನ 150ನೇ “ಅನುದಿನ ಕವನ”ದ ಗೌರವಕ್ಕೆ ‘ಪ್ರೇಮಕವಿ*ಎಂದು ತಮ್ಮ ಪ್ರೀತಿ ಪಾತ್ರರಿಂದ ಕರೆಸಿಕೊಳ್ಳುವ ನಾಡಿನ ಹಿರಿಯ ಪೊಲೀಸ್ ಅಧಿಕಾರಿ(ಐಜಿಪಿ), ಮನಂ ಕಾವ್ಯನಾಮದಲ್ಲಿ ಸಾಹಿತ್ಯ ರಚಿಸುತ್ತಿರುವ ಶ್ರೀ ಮಳವಳ್ಳಿ ನಂಜುಂಡಸ್ವಾಮಿ ಐಪಿಎಸ್ (ಮನಂ) ಅವರ ‘ ನನ್ನ ಕಾವ್ಯ ಕನ್ನಿಕೆ ಯಾರು? ಕವಿತೆ ಪಾತ್ರವಾಗಿದೆ.
(ಸಂಪಾದಕರು:ಕರ್ನಾಟಕ ಕಹಳೆ ಡಾಟ್ ಕಾಮ್)👇
ನನ್ನ ಕಾವ್ಯ ಕನ್ನಿಕೆ ಯಾರು?
ನನ್ನ ಕಾವ್ಯ ಕನ್ನಿಕೆ ಯಾರು?
ನನ್ನ ಕವಿತೆಗಳ ಓದುವವಳಲ್ಲ,
ನನ್ನ ಕವಿತೆಗಳ ಕೊಂಡಾಡುವವಳಲ್ಲ,
ನನ್ನ ಕವಿತೆಗಳ ಮೆರೆಸುವವಳಲ್ಲ,
ನನ್ನ ಕವಿತೆಗಳಲ್ಲಿ ತನ್ನ ಹೆಸರು ಕಂಡವಳಲ್ಲ,
ನನ್ನ ಕವಿತೆಗಳನ್ನು ತನಗಾಗಿ ಬರೆಯಲಾಗಿದೆ ಎನ್ನುವವಳಲ್ಲ,
ನನ್ನ ಕವಿತೆಗಳ ಕಂತೆ ಹಿಡಿದು ಓಡಾಡುವವಳಲ್ಲ.
ನನ್ನ ಕಾವ್ಯ ಕನ್ನಿಕೆ ಯಾರು?
ನನ್ನ ಕಾವ್ಯಕನ್ನಿಕೆ ನನ್ನಕಾವ್ಯದ ರೂಪ,
ನನ್ನ ಕಾವ್ಯಕನ್ನಿಕೆ ನನ್ನಕಾವ್ಯಕ್ಕೆ ಕಾರಣ,
ನನ್ನ ಕಾವ್ಯಕನ್ನಿಕೆ ನನ್ನಕಾವ್ಯದ ಹುಟ್ಟಿನ ಗುಟ್ಟು,
ನನ್ನ ಕಾವ್ಯಕನ್ನಿಕೆ ನನ್ನಕಾವ್ಯದ ಪದಪದಗಳಲ್ಲೂ ಉಸಿರಾದವಳು,
ನನ್ನ ಕಾವ್ಯಕನ್ನಿಕೆ ನನ್ನ ಕಾವ್ಯಲೋಕದಲ್ಲಿ ಪ್ರಕಟವಾದವಳು,
ನನ್ನ ಕಾವ್ಯಕನ್ನಿಕೆ ನನ್ನಕಾವ್ಯದ ಹೊರಗೆ ಮರೆಯಾದವಳು.
ನನ್ನ ಕಾವ್ಯ ಕನ್ನಿಕೆ ಯಾರು?
ನನ್ನ ಕಾವ್ಯ ಮೂಡಲು ಮೂಡಣ ದಿಕ್ಕಾದವಳು,
ನನ್ನ ಕಾವ್ಯದ ಒಡಲ ಹೊಕ್ಕು ಅದರ ಹೂರಣವಾದವಳು,
ನನ್ನ ಕಾವ್ಯ ಸವಿಯುವವರೊಳು ನವರಸಗಳ ಉಕ್ಕಿಸುವವಳು,
ನನ್ನ ಕಾವ್ಯಕ್ಕಾಗಿ ತನ್ನ ತನು-ಮನಗಳ ಧಾರೆ ಎರೆದವಳು,
ನನ್ನ ಕಾವ್ಯದಲ್ಲಿ ತನ್ನ ತಾನು ಕಾಣುತ್ತಾ ನಲಿವವಳು,
ನನ್ನ ಕಾವ್ಯದೊಳು ತನ್ನ ತಾನು ಕಾಣುತ್ತಾ ಧನ್ಯಳಾಗುವವಳು.
– ಮನಂ,
ಬೆಂಗಳೂರು
*****