ಎಸ್ ಎಸ್ ಎಲ್ ಸಿ ಪರೀಕ್ಷೆ ಗಳನ್ನು ತಕ್ಷಣ ರದ್ದು ಪಡಿಸಲು ಆಗ್ರಹಿಸಿ ರಾಜ್ಯಪಾಲರು, ಮುಖ್ಯಮಂತ್ರಿಗೆ ಪೋಷಕರ ನಿಯೋಗ ಮನವಿ

ಧಾರವಾಡ : ರಾಜ್ಯದಲ್ಲಿ ಪ್ರಸಕ್ತ ಸಾಲಿಗೆ ಒಟ್ಟು 8.71 ಲಕ್ಷ ಕ್ಕೂ ಅಧಿಕ
ಎಸ್ ಎಸ್ ಎಲ್ ಸಿ ಮಕ್ಕಳು ಹಾಗೂ ಅವರ ಪೋಷಕರ ಜೊತೆಗೆ ರಾಜ್ಯದ ಶಿಕ್ಷಣ ಸಚಿವ ಸುರೇಶಕುಮಾರ ಅವರು ಚೆಲ್ಲಾಟವಾಡದೆ ತಕ್ಷಣವೇ
ಪರೀಕ್ಷೆ ರದ್ದುಪಡಿಸಲು ಸೂಚಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಗ್ರಹಿಸಿದರು.
ಅವರು ಸೋಮವಾರ ಧಾರವಾಡದ ಅಪರ್ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಪೋಷಕರ ನಿಯೋಗದ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈಗಾಗಲೇ ದೇಶದೆಲ್ಲೆಡೆ
ಸಿಬಿಎಸ್ಸಿ ಪರೀಕ್ಷೆ ರದ್ದಾಗಿದೆ. ಅದೇ ರೀತಿ ದೇಶದ ಇತರೆ ಎಂಟು ರಾಜ್ಯದ ಪರೀಕ್ಷಾ ಮಂಡಳಿಗಳು ಕೂಡ ತಮ್ಮ ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಪಡಿಸಿದ್ದಾರೆ. ಇದೇ
ಮಾದರಿಯನ್ನು ನಮ್ಮ ರಾಜ್ಯದಲ್ಲಿ ಕೂಡ ಅನುಸರಿಸಬೇಕು ಎಂಬುದು ಪೋಷಕರ ಹಕ್ಕೊತ್ತಾಯವಾಗಿದೆ.
ಆದರೆ ಶಿಕ್ಷಣ ಸಚಿವರು, ದಿನಾಂಕ ನಿಗದಿ ಪಡಿಸುವುದರಲ್ಲಿಯೇ ಅನಗತ್ಯವಾಗಿ ಕಾಲಹರಣ ಮಾಡುತ್ತಿರುವುದು ಸರಿಯಾದ ಬೆಳವಣಿಗೆ ಅಲ್ಲ
ಶಿಕ್ಷಣ ಸಚಿವ ಸುರೇಶಕುಮಾರ ಈಗಲಾದರೂ, ತಮ್ಮ ನಿಲುವು ಪ್ರಕಟಿಸಬೇಕು.
ಯಾವುದೇ ಕಾರಣಕ್ಕೂ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನಡೆಸಕೂಡದು‌‌.ಅದರಲ್ಲೂ
ಪಾಲಕರ ಹೊಣೆ ಮೇಲೆ ಪರೀಕ್ಷೆ ಬರೆಸಲು ಮುಂದಾಗುವುದು ಸಮಂಜಸವಾದ ಬೆಳವಣಿಗೆ ಅಲ್ಲ ಎಂದರು.
ಕಳೆದ ಬಾರಿಯ ಪರಿಸ್ಥಿತಿಗೂ ಈ ಬಾರಿಯ ಪರಿಸ್ಥಿತಿಗೂ ಬಹಳಷ್ಟು ವ್ಯತ್ಯಾಸ ಇದೆ ಎಂಬುದನ್ನು ಅವರು ಅರಿತುಕೊಳ್ಳಬೇಕು‌
ಹಾವೇರಿಯಿಂದ ಬೀದರ, ಚಿಕ್ಕೋಡಿಯವರೆಗೆ 4.70 ಲಕ್ಷ ಮಕ್ಕಳಿದ್ದಾರೆ. ಧಾರವಾಡ ಜಿಲ್ಲೆಯಲ್ಲಿಯೇ ಸುಮಾರು 30 ಸಾವಿರ ಮಕ್ಕಳಿದ್ದಾರೆ. ನಮ್ಮ ಭಾಗದ ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಅವರ ಜೊತೆಗೆ ಯಾವುದೇ ಕಾರಣಕ್ಕೂ ಚೆಲ್ಲಾಟ ಸಲ್ಲದು ಎಂದು ಎಚ್ಚರಿಸಿದರು.
ಈಗಾಗಲೇ ಪಂಜಾಬ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಉತ್ತರಾಖಂಡ, ತೆಲಂಗಾಣ ಸರ್ಕಾರ ಸೇರಿದಂತೆ ದೇಶದ ಬಹುತೇಕ ರಾಜ್ಯದ ಸರ್ಕಾರ ಕೈ ಗೊಂಡ ಮಾದರಿಯಲ್ಲಿ ಈಗಾಗಲೇ ನಡೆಸಿರುವ ಆನ್ ಲೈನ್, ಆಫಲೈನ್ ಪರೀಕ್ಷೆ ಮಾದರಿಯ ಮೇಲೆ ವಿದ್ಯಾರ್ಥಿಗಳನ್ನು ಪಾಸು ಮಾಡಿ ಎಂದು ಪಿ.ಎಚ್.‌ನೀರಲಕೇರಿ ಸಲಹೆ ನೀಡಿದರು.
ಒಂದು ವೇಳೆ ಪರೀಕ್ಷೆ ಬರೆಯಲು ಬಯಸಿದ ಪೋಷಕರು ಹಾಗೂ ಮಕ್ಕಳಿಗೆ
ಸಿಬಿಎಸ್ಸಿ ಅನುಸರಿಸಿರುವ
ಸಪ್ಲಿಮೆಂಟರಿ ಮಾದರಿಯ ಪರೀಕ್ಷೆಯನ್ನು ಸಾಮಾನ್ಯ ಪರೀಕ್ಷೆ ಮಾದರಿಯಲ್ಲಿ ಬರೆಯಲು ಅವಕಾಶ ನೀಡಿ ಎಂದು ನೀರಲಕೇರಿ ಆಗ್ರಹಿಸಿದ್ದಾರೆ.
ಊಹಾಪೋಹಗಳಿಗೆ ಕಿವಿಗೊಡಬೇಡಿ ಎನ್ನುವ ಶಿಕ್ಷಣ ಸಚಿವರು ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡುವ ಪರಿಸ್ಥಿತಿ ನಿರ್ಮಾಣ ವಾಗಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು ‌
ಎ.14 ರಂದೇ ಕೇಂದ್ರೀಯ ವಿದ್ಯಾಲಯ ತೀರ್ಮಾನ ಕೈಗೊಂಡರೂ ,ಈವರೆಗೆ ರಾಜ್ಯದ ಶಿಕ್ಷಣ ಸಚಿವರು ಕೇವಲ ಪರೀಕ್ಷೆ ಮುಂದೂಡಲು ಸಮಯ ತೆಗೆದುಕೊಳ್ಳುತ್ತಿರುವುದು ಕೈ ಬಿಡಬೇಕು ಎಂದು ಅವರಿಗೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಸೂಚಿಸಬೇಕು ಎಂದು ಪಿ.ಎಚ್. ನೀರಲಕೇರಿ ಅಭಿಮತ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪೋಷಕರಾದ ಡಾ. ಸಂಜನಾ ನಾಯಕ್, ಸಿದ್ದಣ್ಣ ಕಂಬಾರ, ಪತ್ರಕರ್ತ ನಾಗರಾಜ ಕಿರಣಗಿ, ತಾನಾಜಿ ಶಿಂಧೆ
ರೂಪಾ ಹಿರೇಮಠ, ಗೀತಾ ತಳವಾರ, ಸುಜಾತಾ ಯಾದವಾಡ ಉಪಸ್ಥಿತರಿದ್ದರು.
*****