ಅನುದಿನ ಕವನ-೧೫೨, ಕವಿ:ನಾಗತಿಹಳ್ಳಿ ರಮೇಶ್, ಬೆಂಗಳೂರು, ಕವನದ ಶೀರ್ಷಿಕೆ: ಘಮಲು

ಘಮಲು
………
ಹೂವನು ಮುಚ್ಚಿಡಬಹುದು
ಕಂಪನು ಬಚ್ಚಿಡಬಹುದೆ?
ಮುತ್ತನು ಮುಚ್ಚಿಡಬಹುದು
ನಾಚಿಕೆ ಬಚ್ಚಿಡಬಹುದೆ?
ದೀಪವ ಮುಚ್ಚಿಡಬಹುದು
ಸೂರ್ಯನ ಬಚ್ಚಿಡಬಹುದೆ?

ಆನೆಯ ಪಳಗಿಸಬಹುದು
ಅಂಕುಶದ ಮೊನೆಯಲ್ಲಿ
ಹಕ್ಕಿಯ ಬಂದಿಸಬಹುದು
ಪಂಜರದ ನೆರಳಲ್ಲಿ
ಮಾನವನಾ ಬಗ್ಗಿಸಬಹುದು
ಆಸೆಯ ಇಕ್ಕಳದಲ್ಲಿ

ಇರುವೆಗೆ ಖೆಡ್ಡಾ ತೋಡಿದರೆ
ಹೆರಿಗೆ ಮನೆಯಾಗಿತ್ತು
ಇರುವೆಗೆ ಪಂಜರವ ಇಟ್ಟರೆ
ಬಯಲ ಗೂಡಾಗಿತ್ತು
ಇರುವೆಗೆ ಇಕ್ಕಳವ ಹಿಡಿದರೆ
ಹರಿವ ನೀರಾಗಿತ್ತು

ಸಾವೆಂಬ ನೆನಪು
ಉಳ್ಳವರ ಉರುಳು
ಈ ಇರುವೆ ಕಾಣದು
ಆ ಸಾವ ನೆರಳು
ಸಾವೆಂಬ ಬಾಗಿಲ ಆಚೆಯಿಂದೀಚೆಗೆ
ಸಾವೆಂಬ ಹೊಸಿಲ ಈಚೆಯಿಂದಾಚೆಗೆ
ಆಚೆಯಿಂದೀಚೆಗೆ
ಈಚೆಯಿಂಲಾಚೆಗೆ
ಸೂಜಿಕಣ್ಣೊಳಗೆ ದಾರ ಪೋಣಿಸಿದಂತೆ

ಆ ದಾರದೊಳಗೆ
ತಾಳೆ ತಾವರೆ ತುಂಬೆ ಮಲ್ಲಿಗ ಸಂಪಿಗೆ
ಹೊನ್ನಂಬರ ಕನಕಾಂಬರ ಕೇದಿಗೆ ಸೇವಂತಿಗೆ
ಬೇಲಿ ಮೇಲಿನ ಹೂವು
ಘಮಲು ಘಮಲು ಘಮಲು
ಬದುಕೇ ಘಮಲು

-ನಾಗತಿಹಳ್ಳಿ ರಮೇಶ್
ಬೆಂಗಳೂರು
*****

ನಾಗತಿಹಳ್ಳಿ ರಮೇಶ್
ಬೆಂಗಳೂರು