ಅನುದಿನ ಕವನ-೧೫೮ ಕವಿ:ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಕವನದ ಶೀರ್ಷಿಕೆ: ಸತ್ಯ ನುಡಿದಾಗ

ಸತ್ಯ ನುಡಿದಾಗ

ಬಾಳು ಬೆಳಗುವುದು ಸತ್ಯ ನುಡಿದಾಗ
ಹೂವು ಅರಳುವುದು ರವಿ ಮೂಡಿದಾಗ
ಪರಿಮಳ ಬೀರುವದು ಹೂವು ಅರಳಿದಾಗ.

ಪ್ರೀತಿ ಹುಟ್ಟುವುದು ಸತ್ಯ ನುಡಿದಾಗ
ಮೋಹ ಕಳೆವುದು ದುರಾಸೆ ಬಿಟ್ಟಾಗ
ಸ್ನೇಹ ಉಳಿವುದು ನಂಬಿಕೆಯಿಟ್ಟಾಗ.

ಅಜ್ಞಾನ ಅಳಿವುದು ಸತ್ಯ ನುಡಿದಾಗ
ಒಳ್ಳೆ ಮಾರ್ಗಸಿಗುವುದು ಮನಸಿದ್ದಾಗ
ಬದುಕು ದಡ ಸೇರುವುದು ಸರಿದಾರಿ ಸಿಕ್ಕಾಗ.

ದುಃಖ ಕಳೆವುದು ಸತ್ಯ ನುಡಿದಾಗ
ನೆಮ್ಮದಿ ನೆಲೆಸುವುದು ಮನದಾಗ
ಕಣ್ಣು ತೆರೆಸುವುದು ಕಷ್ಟ ಬಂದಾಗ.

ಪಾಪ ಕಳೆವುದು ಸತ್ಯ ನುಡಿದಾಗ
ಅಂತರಂಗ ಬೆಳಗುವುದು ಅಜ್ಞಾನ ಅಳಿದಾಗ
ಕರುಣೆ ಮೂಡುವುದು ಮನಸು ಕರಗಿದಾಗ.

ಪುಣ್ಯ ಬರುವುದು ಸತ್ಯ ನುಡಿದಾಗ
ಕಷ್ಟ ಕಳೆವುದು ಕಾಯಕ ಮಾಡಿದಾಗ
ಬದುಕು ಹಸನಾಗುವದು ಭಕ್ತಿ ಮೂಡಿದಾಗ.

ತನು ಶುದ್ಧಿ ಆಗುವುದು ಸತ್ಯ ನುಡಿದಾಗ
ಮನ ಶುದ್ಧಿಯಾಗುವುದು ಕೋಪ ಬಿಟ್ಟಾಗ
ಧನ ಶುದ್ಧಿಯಾಗುವುದು ದಾನ ಮಾಡಿದಾಗ.

ಮೋಹ ಅಳಿವುದು ಸತ್ಯ ನುಡಿದಾಗ
ಪ್ರೀತಿ ಹುಟ್ಟುವುದು ಹೃದಯದಾಗ
ವಿಶ್ವಾಸ ಮೂಡುವುದು ಸಂಸಾರದಾಗ.

ನಿತ್ಯಫಲ ನೀಡುವುದು ಸತ್ಯನುಡಿದಾಗ
ಭಕ್ತಿ ಮೂಡುವುದು ಅಂತರಂಗದಾಗ
ಜನ್ಮ ಸಾರ್ಥಕವಾಗುವುದು ಜಗದಾಗ.

ಜ್ಞಾನ ಅಂಕುರಿಸುವುದು ಸತ್ಯ ನುಡಿದಾಗ
ಗುರಿ ಮುಟ್ಟುವುದು ಸಾಧನೆ ಮಾಡಿದಾಗ
ನೆಮ್ಮದಿ ನೆಲೆಸುವುದು ದುಡಿದು ತಿಂದಾಗ.

-ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ.       

ಸಹ ಪ್ರಾಧ್ಯಾಪಕರು ಸರಕಾರಿ ಪದವಿ ಕಾಲೇಜು,    ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಯಾದಗಿರಿ &
ಜಿಲ್ಲಾಧ್ಯಕ್ಷರು, ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ