18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದುಕೊಳ್ಳಿ -ಮಂಡ್ಯ ಜಿಂ ಪಂ ಸಿಇಓ ದಿವ್ಯಪ್ರಭು

ಮಂಡ್ಯ, ಜೂ.08: ಬರುವ ದಿನಗಳಲ್ಲಿ ಕೋವಿಡ್-19 ಅಲೆಯನ್ನು ನಿಯಂತ್ರಿಸಿ, ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಮಂಡ್ಯ ತಾಲ್ಲೂಕು ಬೇವಿನಹಳ್ಳಿ ಹಾಗೂ ಕೊತ್ತತ್ತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೋವೀಡ್ ಲಸಿಕಾ ಕಾರ್ಯಕ್ರಮಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಗ್ರಾಮದಲ್ಲಿರುವ ಎಲ್ಲಾ 18 ವರ್ಷ ಮೇಲ್ಪಟ್ಟವರು, ಲಸಿಕೆ ಪಡೆದುಕೊಂಡರೆ ಗ್ರಾಮ ಚೆನ್ನಾಗಿ ಇರುತ್ತದೆ. ಗ್ರಾಮ ಚೆನ್ನಾಗಿದ್ದರೆ ಸಮಾಜ, ಸಮಾಜ ಚೆನ್ನಾಗಿದ್ದರೆ ನಮ್ಮ ದೇಶ ಆರೋಗ್ಯಕರವಾಗಿರುತ್ತದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ ವಸ್ತ್ರಮಠ್ ಅವರು ಮಾತನಾಡಿ, ವಿಶೇಷ ಚೇತನರು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಲಸಿಕೆ ಪಡೆದುಕೊಳ್ಳುವುದು ಕಷ್ಟವಾಗಬಹುದೆಂಬ ಉದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಚಿತ ವಾಹನ ವ್ಯವಸ್ಥೆ ಮಾಡಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಅಶ್ವಿನಿ ಅವರು ಮಾತನಾಡಿ, ಕೋವಿಡ್ ಲಸಿಕೆ ಸಂಬಂಧಿಸಿದಂತೆ ಯಾವುದೇ ಭಯ ಪಡದೆ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಾಕಾಧಿಕಾರಿ ಎ.ಬಿ ವೇಣು, ತಾಲ್ಲೂಕು ಯೋಜನಾಧಿಕಾರಿಗಳಾದ ಹೆಚ್. ಆರ್ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಆರೋಗ್ಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
*****