‘ಕುಲದಲ್ಲಿ ಕೀಳ್ಯಾವುದೋ’ ಹಾಡಿಗೆ ಹೆಜ್ಜೆ ಹಾಕಿದ ಹಬೊ ಹಳ್ಳಿ ತಾಲೂಕು ಆಡಳಿತ, ಸಂಭ್ರಮಿಸಿದ ಕೋವಿದ್ ಸೋಂಕಿತರು

ಹಗರಿಬೊಮ್ಮನಹಳ್ಳಿ: “ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ ….”
ಸತ್ಯ ಹರಿಶ್ಚಂದ್ರ ಚಿತ್ರದ ಈ ಜನಪ್ರಿಯ ಹಾಡಿಗೆ ಇಡೀ ತಾಲೂಕು ಆಡಳಿತವೇ ಹೆಜ್ಜೆ ಹಾಕಿತು…
ಹೌದು…ಶುಕ್ರವಾರ ಸಂಜೆ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಕೋವಿದ್ ಕೇರ್ ಸೆಂಟರ್ ನಲ್ಲಿ ತಹಸೀಲ್ದಾರ್ ಶರಣಮ್ಮ, ತಾಪಂ ಇಓ. ಹಾಲಸಿದ್ದಪ್ಪ ಪೂಜೇರಿ,  ತೋಟಗಾರಿಕೆಯ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ಜಿ. ಪರಮೇಶ್ವರಪ್ಪ, ಬಿಇಓ ಶೇಖರಪ್ಪ ಹೊರಪೇಟೆ, ತಾಲೂಕು ವೈದ್ಯಾಧಿಕಾರಿ ಡಾ. ಎಂ. ಶಿವರಾಜ್, ಕೋವಿಡ್ ನೋಡಲ್ ಅಧಿಕಾರಿ ಡಾ. ಮೋಹನ್, ವೈದ್ಯಾಧಿಕಾರಿ ಡಾ. ರಘುವೀರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್ ಸೇರಿದಂತೆ ಹಲವು ಅಧಿಕಾರಿ, ಸಿಬ್ಬಂದಿಗಳು ಕುಣಿದು ಸಂಭ್ರಮಿಸಿದರು.

ಕೇಂದ್ರದಲ್ಲಿರುವ ಕೋವಿದ್ ಸೋಂಕಿತರಿಗೆ ಮನರಂಜನೆ ಮೂಲಕ ಧೈರ್ಯ ತುಂಬಲು ಆಯೋಜಿಸಿದ್ದ ಸಂಗೀತ ಸಂಜೆ, ಹಾಸ್ಯ ಕಾರ್ಯಕ್ರಮ ಯಶಸ್ವಿಯಾಯಿತು.
ವಲಭಾಪುರ ಮುರಾರ್ಜಿ ದೇಸಾಯಿ ಶಾಲೆಯ ಸಂಗೀತ ಶಿಕ್ಷಕಿ ಶಾರದ ಕೊಪ್ಪಳ, ಗಾಯಕ ಯುವರಾಜ ಗೌಡ ಅವರ ಭಾವಗೀತೆ, ಜನಪದ ಗೀತೆ, ಸುಗಮ ಸಂಗೀತಕ್ಕೆ ಸಭಿಕರು ಮಾರು ಹೋದರು. ಮೊರಿಗೇರಿಯ ಸಿ.ಕೊಟ್ರೇಶ್ ಅವರು ತಬಲ ಸಾಥ್ ನೀಡಿದರು.
ಖ್ಯಾತ ಹಾಸ್ಯ ಭಾಷಣಕಾರ ಕೋಗಳಿ ಕೊಟ್ರೇಶ್ ಅವರ ಹಾಸ್ಯ ಚಟಾಕಿಗೆ ಮನಸೋತು ಮನದುಂಬಿ ನಕ್ಕರು.
ಅಧಿಕಾರಿಗಳು ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ ಖುಷಿಯಾಗಿ ಸೋಂಕಿತರು ಕುಣಿದು ಕುಪ್ಪಳಿಸುತ್ತಿದ್ದರು.
ವಿಶೇಷವೆಂದರೆ ಎಪ್ಪತ್ತೈದು ವರ್ಷದ ಅಜ್ಜಿಯೂ ಹಾಡಿಗೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

ಸಂಗೀತ, ಹಾಸ್ಯ ಕಾರ್ಯಕ್ರಮ ನೀಡಿದ ಶಾರದ ಕೊಪ್ಪಳ, ಯುವರಾಜ ಗೌಡ, ಕೋಗಳಿ ಕೊಟ್ರೇಶ್ ಮತ್ತು ಸಿ. ಕೊಟ್ರೇಶ್ ಅವರನ್ನು ತಾಲೂಕು ಆಡಳಿತ ಸನ್ಮಾನಿಸಿ ಗೌರವಿಸಿತು.
*****