ಅನುದಿನ ಕವನ-೧೬೩, ಕವಿ:ಡಾ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ , ಶಂಕರಘಟ್ಟ, ಕವನದ ಶೀರ್ಷಿಕೆ: ಅಭಿನವ ಅಂಬೇಡ್ಕರ್ ಸಿರಿಯೆ

 

ಅಭಿನವ ಅಂಬೇಡ್ಕರ್ ಸಿರಿಯೆ

ಸರ್ವೋದಯ ಸಮಾಜ ಕಟ್ಟಲು ಹುಟ್ಟಿ
ಹೊಲಮಾದಿಗರ ಹಾಡು ಕಟ್ಟಿ!
ಬುದ್ಧ-ಅಂಬೇಡ್ಕರ್ ಬೆಳಕ ಬೀರಿ
ಸಾವಿರಾರು ನದಿಗಳು ಸೇರಿ !
ಹೋರಾಟದ ಹಾದಿ ತೋರಿದಾತ
ಕಾವ್ಯದೊಳಗೆ ಇರುವಿನ ಅರಿವು ಬಿತ್ತಿದಾತ !
ಬಡವರ ಬರಿದಾದ ಬದುಕಿಗೆ ಕಣ್ಣೀರಿಟ್ಟು
ಸದನದಲ್ಲಿ ಸಂಕಷ್ಟಗಳ ತೆರೆದಿಟ್ಟು!!
ಆಳುವವರ ಒಲಮೆ ಗಳಿಸಿ
ನೊಂದು ಬೆಂದವರ ಬೆವರೊರೆಸಿ !
ದಲಿತೋದ್ಧಾರಕ್ಕೆ ದಾರಿ ತೋರಿಸಿದಾತ
ಬಲಿತರ ಮನವ ಪರಿವರ್ತಿಸಿದಾತ!
ಸಮಾನತೆಯ ಸಾಧಕ ಏಕಲವ್ಯ ನಾಟಕ ರಚಿಸಿ
ಆಳುವವರ ಅನ್ಯಾಯ ಅಹಂಕಾರವ ತೋರಿಸಿ !
ಎಲ್ಲರೊಳಗೆ ತುಂಬಿದೆ ಏಕಲವ್ಯ ಶಕ್ತಿ
ತೋರಿದೆ ಸರ್ವರೊಳಗಿನ ಧೀಶಕ್ತಿ!
ತೆರೆದಿಟ್ಟೆ ಊರುಕೇರಿಯ ಅಂತರ
ಬಿಚ್ಚಿಟ್ಟೆ ಅಂಧಾನುಕರಣೆಯ ಅನಾಚಾರ!
* ದಲಿತರು ಬರುವರು ದಾರಿಬಿಡಿ
ದಲಿತರ ಕೈಗೆ ರಾಜ್ಯ ಕೊಡಿ *
ಕೂಗಿ ಕೂಗಿ ದ ಕ್ರಾಂತಿಕಾರಿ ಕವಿಯೆ
ನೀನಾಗಿರುವೆ ಜನತೆಯ ಸಿರಿಯೆ!
ತಿಳಿವಿನ ತಿಳಿಹಾಸ್ಯ ಸಿಂಬಿ
ನೋವಿನ ಎಳೆಯ ತುಂಬಿ !
ಫಲಬಿಟ್ಟ ಬಾಳೆಯಂತೆ ಬಾಗಿ ಬೆಳೆದಾತ
ತೆಂಗಿನಂತೆ ಎತ್ತರೆತ್ತರ ಬೆಳೆದ ಹೃದಯವಂತ !
ಊರೂರು ಸುತ್ತಿ
ಅರಿತೆ ನೆತ್ತಿಯ ಕತ್ತಿ!
ಬಿರುಕಗಳಿಗೆ ಕರುಣೆಯ ಕಣಕ ತುಂಬಿ
ತೊಡಕುಗಳಿಗೆ ಮಾನವೀಯತೆಯ ಭಾವ ತುಂಬಿ!
ಬಿತ್ತಿದೆ ಇರುವಿನ ಅರಿವು
ಬೆಳೆದೆ ಸಮತೆಯ ಒಲವು !
ನಿಜಬದುಕಿನ ಎಚ್ಚರ ನೀಡಿದಾತ
ಎಲ್ಲರೊಂದಿಗೆ ಬೆರೆಯುವುದು ಕಲಿಸಿದಾತ!
ಇಲ್ಲದ ನೆಲೆಗೆ ಅಲೆದು ಅಲೆದು
ಸ್ಮಶಾನದೊಳಗೆ ನೆಲೆಯ ಸೆಲೆಯೊಡೆದು !
ಬೆಳಕನು ಹುಡುಕಿದ ಜ್ಞಾನ ನಿಧಿಯೆ
ಅಭಿನವ ಅಂಬೇಡ್ಕರ್ ಸಿರಿಯೆ!
ಬಲಿತ -ದಲಿತರ ಬೆಸುಗೆಯ ಸಿದ್ಧಲಿಂಗಯ್ಯ
ಕನ್ನಡನಾಡು ನುಡಿಯ ನಿಪುಣ ನೀನಯ್ಯ !
ಕಾವ್ಯದೊಳಗೆ ಅಡಗಿರುವೆ
ನಾಟಕದೊಳಗೆ ಬೆರೆತಿರುವೆ !
ಆತ್ಮಕತೆಯೊಳಗೆ ಅರಳಿರುವೆ
ವೈಚಾರಿಕತೆಯೊಳಗೆ ಬೆಳಗಿರುವೆ!
ಸಾಧಕರಿಗೆ ದಾರಿದೀಪ ನೀನಯ್ಯ
ಸರ್ವರಿಗೂ ನಂದಾದೀಪ ನೀನಯ್ಯ!
ಸಾವಿಲ್ಲದ ಸಾಹಿತ್ಯದೊಳಗೆ ನೆಲೆಯಾಗಿ
ಮಾಧುರ್ಯ ಬದುಕಿಗೆ ಸೆಲೆಯಾಗಿ!
ಎಲ್ಲರೂ ಹೃದಯದೊಳಗೆ ನೀ ಇರುವೆ
ಬಾನಿನೊಳಗೆ ಬೆಳದಿಂಗಳಾಗಿರುವೆ!
ನಿಮ್ಮ ಹೋರಾಟದ ಕ್ರಾಂತಿಗೆ ನಮನ ನಮನ
ನಿಮ್ಮ ಅಕ್ಷರದ ಅಕ್ಕರೆಯ ಕಾಂತಿಗೆ ನಮನ ನಮನ

-ಡಾ. ನೆಲ್ಲಿಕಟ್ಟೆ ಎಸ್ ಸಿದ್ದೇಶ್
ಎಂ. ಎ.,ಎಂ.ಇಡಿ.,ಪಿಎಚ್. ಡಿ.
ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕುವೆಂಪು ವಿವಿ, ಶಂಕರಘಟ್ಟ
—–

ಡಾ. ನೆಲ್ಲಿಕಟ್ಟೆ ಎಸ್ ಸಿದ್ದೇಶ್