ಕನ್ನಡದ ಬೆಳಕು
(ಅಗಲಿದ ಮಹಾ ಚೇತನ ಡಾ. ಸಿದ್ದಲಿಂಗಯ್ಯ ಅವರ ಸ್ಮರಣೆಗಾಗಿ)
ದುಂಡು ದುಂಡಾದ ಸುಂದರಾಂಗ|
ಬೆಳೆದು ನಿಂತುಕೊಂಡ ಮನದಂಗ|
ನಿರಂತರವು ಹೋರಾಟದಾ ಸಂಗ|
ಕಣ್ಣಲಿರಿಸೆ ಮದನ ಮೋಹನಾಂಗ||
ನೋವ ನುಂಗೀ ನೊಂದವರ ಕಂಡ|
ಅವರು ನಲುಗುವುದಾ ಮನಗಂಡ|
ಸಾವದಾನದಲಿ ಅವಮಾನವುಂಡ|
ದೇವರ ಲೀಲೆಯನೆ ಬಿತ್ತರಗೊಂಡ||
ಮನೆಯ ಶುದ್ಧಿಗೆ ಮಾತಂಗಿ ಕರೆದೆ|
ಆನೆಯ ಬಲದ ಜನರ ಎಚ್ಚರಿಸಿದೆ|
ಮನೆತೊರೆದು ಏಕಾಂತ ಬಯಸಿದೆ|
ನೆನೆಯುತ ಮಹಾಮನೆ ನೋಡಿದೆ||
ಮಂದವಾದ ಮಂದೀನ ನೋಡಲು|
ಅಂದದಲಿರುವ ಜನಗಳ ಬೆರೆಸಲು|
ಮಂದಹಾಸದ ಮಮತೆ ತೋರಲು|
ಬಂಧನಾ ಸಂಕೋಲೆ ಮುರಿಯಲು||
ತುಕ್ಕು ಹಿಡಿದ ಲೇಖನಿ ಝಳಪಿಸಿದೆ|
ಮಂಜು ಮುಸುಕಿಗೆ ಕಿರಣ ನೀನಾದೆ|
ಅಂಜದಲೆ ಶಕುತಿಯನೂ ತೋರಿದೆ|
ಜಂಜಾಟ ಕಳೆ ಕೀಳಲೂ ಎಚ್ಚರಿಸಿದೆ||
ಬಂಡತನದಾ ಗಂಡೆದೆ ನೋಡಿದರು|
ಅಂಡಲೆವನಲ್ಲೆಂದೆ ದೂರ ಸರಿದರು|
ಕಂಡರೂ ಕಾಣದಂತಿರತೊಡಗಿದರು|
ದಲಿತ ಕವಿಯೆಂದೆ ದೂರವಿರಿಸಿದರು||
ತಂಡದ ನಾಯಕನಾಗಿಯೇ ಮೆರೆದೆ|
ಧಮನಿತರೇಳ್ಗೆಗೇ ಅಕ್ಷರಕ್ರಾಂತಿಗೈದೆ|
ಅಮರ ಚರಿತೆಯನೆ ಹೊರ ಹಾಕಿದೆ|
ಸಿದ್ದರಿಗೇ ಸಿದ್ಧವಾಗೆ ಬೆಳೆದೂ ನಿಂತೆ||
ವಿದೇಶವ ಸುತ್ತಿ ಕೋಶವ ಓದಿದನು|
ನಮ್ಮೂರ ದಾರಿಯಾ ಧೀರನಾದನು|
ನಾಡದೇವಿಯಾ ಮರಿಮಗನಾದನು|
ನಾಡಿಗೆ ಹಿರಿಯನಾಗಿಯೆ ಮೆರೆದನು|
-ಜೀವಿ
(ಡಾ.ಗೋವಿಂದ)
ಕನ್ನಡ ವಿಶ್ವವಿದ್ಯಾಲಯ, ಹಂಪಿ
*****
ಜೀವಿ(ಡಾ.ಗೋವಿಂದ)