ಭೌತಿಕವಾಗಿ ಅಗಲಿರುವ ಪ್ರಸಿದ್ದ ಕವಿ ಡಾ. ಸಿದ್ಧಲಿಂಗಯ್ಯ ಅವರು ತಮ್ಮ ಸಾಹಿತ್ಯದ ಮೂಲಕ ಲಕ್ಷಾಂತರ ಕೋಟಿ ಜನರ ಮನದಲ್ಲಿ ಎಂದಿಗೂ ಅಜರಾಮರ. ಇವರ ಅಕಾಲಿಕ ಸಾವಿಗೆ ದೇಶವೇ ಕಂಬನಿ ಮಿಡಿಯುತ್ತಿದೆ.
ಡಾ.ಸಿದ್ದಲಿಂಗಯ್ಯ ಅವರ ಸಾಹಿತ್ಯ ಸಿನಿಮಾ ಹಾಡುಗಳಾಗಿ ಜನಪ್ರಿಯವಾಗಿರುವಂತೆ ರಂಗ ಗೀತೆಗಳಾಗಿಯೂ ಗಮನ ಸೆಳೆದಿದ್ದವು.
ಬಂಗಾಳಿ ಭಾಷೆಯ ಉತ್ಪಲ್ ದತ್ತ ಅವರ ಸೂರ್ಯ ಶಿಕಾರಿ ನಾಟಕವನ್ನು ಮಾಜಿ ಉಪಮುಖ್ಯಮಂತ್ರಿ, ರಂಗಕರ್ಮಿ ದಿ.ಎಂ ಪಿ ಪ್ರಕಾಶ್ ಅವರು ಕನ್ನಡಕ್ಕೆ ಭಾಷಾಂತರಿಸಿ ಹೂವಿನಹಡಗಲಿಯ ರಂಗಭಾರತಿ ಮತ್ತಿತರ ಸಂಸ್ಥೆಗಳ ಮೂಲಕ ಹಲವು ರಂಗ ಪ್ರದರ್ಶನಗಳು ಯಶಸ್ವಿಯಾಗಿವೆ.
ಸೂರ್ಯ ಶಿಕಾರಿ ನಾಟಕಕ್ಕೆ ಎಂ.ಪಿ ಪ್ರಕಾಶ್ ಅವರು ಡಾ.ಸಿದ್ದಲಿಂಗಯ್ಯ ಅವರ ನಾಲ್ಕು ಹಾಡುಗಳನ್ನು ಬಳಸಿಕೊಂಡಿದ್ದರು. ಈ ಹಾಡುಗಳನ್ನು ಪ್ರತಿಭಾವಂತ ಗಾಯಕ ಹೂವಿನ ಹಡಗಲಿಯ ಪ್ರಕಾಶ್ ಜೈನ್ ಆಕರ್ಷಕವಾಗಿ ಹಾಡಿದ್ದರು. ಕು. ಮಾಲಾ ಮತ್ತು ಎನ್ ಜೆ ಮಂಜುನಾಥ್ ಅವರು ಸಹಗಾಯಕರಾಗಿದ್ದರು.
ಹಿರಿಯ ರಂಗ ನಿರ್ದೇಶಕ ಮಾಲತೇಶ ಬಡಿಗೇರ ಹಾಗೂ ಹಿರಿಯ ಸಂಗೀತ ನಿರ್ದೇಶಕ, ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅವರು ಸೂರ್ಯ ಶಿಕಾರಿ ನಾಟಕವನ್ನು ನಿರ್ದೇಶಿಸಿದ್ದಾರೆ.
ರಂಗಭೂಮಿಗೂ ತಮ್ಮ ಕೊಡುಗೆ ನೀಡಿರುವ ಡಾ.ಸಿದ್ದಲಿಂಗಯ್ಯ ಅವರಿಗೆ ಅವರ ಸೂರ್ಯಶಿಕಾರಿ ರಂಗ ಗೀತೆಯ ಮೂಲಕ ಹಿರಿಯ ಗಾಯಕ ಪ್ರಕಾಶ್ ಜೈನ್ ಅವರ ಜತೆ ಕರ್ನಾಟಕ ಕಹಳೆ ಡಾಟ್ ಕಾಮ್ ಕೂಡಾ ನಮನ ಸಲ್ಲಿಸುತ್ತಿದೆ.
(ಸಂಪಾದಕರು)
*****
ಸಾಹಿತ್ಯ:ಡಾ.ಸಿದ್ಧಲಿಂಗಯ್ಯ
ಗಾಯನ: ಪ್ರಕಾಶ್ ಜೈನ್, ಹೂವಿನ ಹಡಗಲಿ
ಸಹಗಾಯನ: ಕು.ಮಾಲಾ, ಎನ್ ಜೆ ಮಂಜುನಾಥ್
ನಾಟಕ:ಸೂರ್ಯ ಶಿಕಾರಿ
ನಾಟಕಕಾರ: ಉತ್ಪಲ್ ದತ್
ಕನ್ನಡ ಅನುವಾದ: ಎಂ.ಪಿ ಪ್ರಕಾಶ್
*****
ಸೂರ್ಯ ಶಿಕಾರಿ ನಾಟಕದಲ್ಲಿ ಅಳವಡಿಸಿಕೊಂಡಿದ್ದ ರಂಗಗೀತೆ👇
ಅರಸನ ಅರಮನೆ ಮೆಟ್ಟಿಲುನಾವು
ಸಾಲು ಸಾಲು ತೊಲೆಕಂಬಗಳು
ನಮ್ಮ ಕರುಳನ ಕಿತ್ತು ತೋರಣಕಟ್ಟಿ
ರಕ್ತದ ಓಕುಳಿ ಆಡುವರು
ನಮ್ಮ ಹೊಲದಲ್ಲಿ ನಗುತ ನಿಂತ ಬೆಳೆ
ನಮ್ಮ ಒಡಲಿಗಲ್ಲ
ನಾವು ಕಟ್ಟಿದ ಭವ್ಯ ಮಹಲುಗಳು
ನಮ್ಮ ನೆರಳಿಗಲ್ಲ
ಕಾಡಿಗೆ ನಾಡಿಗೆ ಕಡಲ ನೀರಿಗೆ
ಅಧಿಪತಿ ನಮ್ಮಯ ಅರಸ
ಹೆಂಡತಿ ಮಕ್ಕಳು ಮುಂದಿನ ಪೀಳಿಗೆ
ಎಲ್ಲಕು ಒಡೆಯನು ಅರಸ
ಮಾರಾಟಕ್ಕಿದೆ ನಮ್ಮಯ ದೇಹ
ಹಣವುಳ್ಳವರ ಸಂತೆಯಲಿ
ಮನಸು ಹೃದಯಗಳು ಮಣ್ಣನು ಸೇರಿವೆ
ಅರಣ್ಯನ್ಯಾಯದ ಅಡಿಯಲ್ಲಿ
ಸುರಸುಂದರಿಯರ ಅಂಗದ ಅರಸ
ಅಂಗುಲ ಅಂಗುಲ ಬೇಟೆ ಆಡಿದ
ಪ್ರಾಣಿ ಮನುಷ್ಯರ ಸೊಲ್ಲನ್ನಡಗಿಸಿ
ಸೂರ್ಯ ಶಿಕಾರಿಗೆ ಸಜ್ಜಾದ…
-ಡಾ.ಸಿದ್ಧಲಿಂಗಯ್ಯ
ಪ್ರಸಿದ್ಧ ಕವಿಗಳು, ಬೆಂಗಳೂರು
*****
👆ಹಿರಿಯ ಗಾಯಕ ಪ್ರಕಾಶ್ ಜೈನ್
ಪ್ರಕಾಶ್ ಜೈನ್ ಅವರು ಹಾಡಿರುವ ರಂಗ ಗೀತೆ….🖕