“ವಿಶ್ವ ಅಪ್ಪಂದಿರ ದಿನದ ಶುಭಕಾಮನೆಗಳೊಂದಿಗೆ.. ಒಪ್ಪಿಸಿಕೊಳ್ಳಿ ಈ ಕಾವ್ಯಪ್ರಣತೆ..”
ಇದು ಕವಿತೆಯಲ್ಲ.. ಕುಟುಂಬದ ಸುರಕ್ಷೆ-ಸೌಖ್ಯಕ್ಕಾಗಿ ಕರ್ಪೂರದಂತೆ ಉರಿಯುತ್ತಿದ್ದರೂ ನಮ್ಮೆಲ್ಲರ ಕಂಗಳಿಗೆ ಅವ್ಯಕ್ತವಾಗಿಯೇ ಉಳಿದುಬಿಡುವ ಅಪ್ಪನೆಂಬ ದೈವತ್ವದ ಅನಾವರಣದ ಅಕ್ಷರ ಪ್ರಣತೆ. ಅನುಕ್ಷಣ ಅಂಬರವಾಗಿ ಪ್ರತಿಮನೆ ಮನೆಯ ಕಾಪಿಟ್ಟು ಕಾಯುತಿರುವ ಲೋಕದ ಸಮಸ್ತ ತಂದೆಯರಿಗೆ ಅರ್ಪಣೆ ಈ ಕವಿತೆ.” -ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇
ಅಪ್ಪನೆಂದೂ ಅವ್ಯಕ್ತ.!
ತನ್ನೆಲ್ಲ ಸುಖಗಳನು ತೆತ್ತು
ದುಡಿವನು ಮೂರು ಹೊತ್ತು
ಸದಾ ಕೊಡುವುದಷ್ಟೆ ಗೊತ್ತು
ಅಪ್ಪ ಬೇಡುವುದಿಲ್ಲ ಯಾವತ್ತು.!
ಅಪ್ಪನ ಭವ್ಯ ಹೆಗಲೆಂದರೆ
ಸದಾ ಭದ್ರತೆಯ ಸುಭದ್ರನೆಲೆ.!
ಅಪ್ಪನ ದಿವ್ಯ ಕಂಗಳೆಂದರೆ
ಸಾಧನೆಗಳಿಗೆ ಸ್ಫೂರ್ತಿಸೆಲೆ.!
ಕಠಿಣ ಚಿಪ್ಪಿನೊಳಗಿರುವ
ಅಪೂರ್ವ ಸ್ವಾತಿಮುತ್ತಿನಂತೆ
ಅಪ್ಪನ ಬೈಗುಳದೊಳಗಿಹುದು
ಅಂತರಾಳದ ಅನನ್ಯ ಪ್ರೀತಿ.!
ನೋವು ಆಘಾತಗಳಿಗೆ ಅತ್ತು
ಅಮ್ಮ ಹಗುರಾಗಿ ಬಿಡುತ್ತಾಳೆ
ಅಪ್ಪ ಒಳಗೊಳಗೇ ಕೊರಗಿ
ಕುಗ್ಗಿ ಕನಲಿ ಕೃಶವಾಗುತ್ತಾನೆ.!
ಹರಿಸುವ ಬೆವರನ್ನಾಗಲೀ
ಒಳಗಿನ ನಿಟ್ಟುಸಿರನ್ನಾಗಲೀ
ತೋರದೆ ನಿತ್ಯ ಕಾಯುತ್ತಾನೆ.
ನೊಂದರು ಮೇಲೆ ನಗುತ್ತಾನೆ.!
ಮಗನ ಬೈಕು, ಮಗಳ ಮೊಬೈಲು
ಬೇಡಿಕೆಗಳಿಗಾಗಿಯೇ ದುಡಿಯುತ್ತ
ಹರಿದ ಬನಿಯನ್ನು, ಚಪ್ಪಲಿಗಳಲ್ಲೇ
ದಿನಗಳನು ದೂಕಿ ಬಿಡುತ್ತಾನೆ.!
ಮನೆ ಮಕ್ಕಳಿಗಾಗಿ ಶ್ರಮಿಸುತ್ತ
ಹಾಗೇ ಜೀವ ಸವೆಸಿಬಿಡುತ್ತಾನೆ.!
ಸತಿಸುತರ ಮುಂದೆ ಬಿಟ್ಟು ತಾನು
ಹಿಂದೆಯೇ ಉಳಿದು ಬಿಡುತ್ತಾನೆ.!
-ಎ.ಎನ್.ರಮೇಶ್. ಗುಬ್ಬಿ.
*****