ಹೊಸಪೇಟೆ( ವಿಜನಯಗನರ): ಪ್ರವಾಸೋದ್ಯಮದ ಅಭಿವೃದ್ದಿಯ ದೃಷ್ಟಿಯಿಂದ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್ ಆವರಣದ 250 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್, ತ್ರಿ ಸ್ಟಾರ್ ಹೋಟೆಲ್, ವಸತಿ ನಿಲಯ ಹಾಗೂ ಹೆಲಿಕ್ಯಾಪ್ಟರ್ ಲ್ಯಾಂಡ್ ಏರಿಯಾ ಒಳಗೊಂಡಂತೆ ಸರ್ವತೋಮುಖ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಪರಿಸರ ಮತ್ತು ಜೀವಿ ಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಹೇಳಿದರು.
ಕಮಲಾಪುರ ಪಟ್ಟಣದ ಮಯೂರ ಭುವನೇಶ್ವರಿ ಹೋಟೆಲ್‍ನಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಜೊತೆಗೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬರುವ ವಿದ್ಯಾರ್ಥಿಗಳು ಉಳಿದಿಕೊಳ್ಳಲು ಒಂದು ವಸತಿ ನಿಲಯವನ್ನು ಜಿಯೋಲಾಜಿಕಲ್ ಪಾರ್ಕ್ ಆವರಣದಲ್ಲಿ ನಿರ್ಮಿಸಲಾಗುವುದು. 1 ಸಾವಿರ ಶಾಲಾ-ಕಾಲೇಜು ಮಕ್ಕಳು ಉಳಿದುಕೊಳ್ಳಲು ಒಂದು ಸುಸಜ್ಜಿತವಾದ ವಸತಿ ನಿಲಯವನ್ನು ಪ್ರಾರಂಭಿಸಲಾಗುತ್ತದೆ. ಇದು ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಮತ್ತೊಂದು ಹಂಪಿಯ ನಿರ್ಮಾಣ ಅಸಾಧ್ಯ, ಪ್ರಸ್ತುತ ಇರುವ ಐತಿಹಾಸಿಕ ತಾಣವನ್ನು ರಕ್ಷಣೆ ಮತ್ತು ಅಭಿವೃದ್ಧಿ ಪಡಿಸುವ ಕೆಲಸ ಮಾಡಲಾಗುತ್ತದೆ ಎಂದರು. ಹಂಪಿಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತದೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ ಸಚಿವರು,
ಬೆಟ್ಟಕ್ಕೆ ರೋಪ್ ವೇ ನಿರ್ಮಾಣ, ರಸ್ತೆಗಳ ಅಭಿವೃದ್ಧಿ,ಮೂಲಭೂತ ಸೌಲಭ್ಯ ಒಳಗೊಂಡಂತೆ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ 500 ಕೋಟಿ ವೆಚ್ಚ ಮಾಡಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ, ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಇದ್ದರು.
*****