ವಿಶ್ವಜ್ಞಾನಿ ಡಾ. ಅಂಬೇಡ್ಕರ್ ಅವರಿಗೆ ವಿಶಿಷ್ಟ ಗೌರವ: ತನ್ನಲ್ಲಿ ಕಲಿತ ವಿದ್ಯಾರ್ಥಿಯನ್ನು ತಾನೇ ಗೌರವಿಸಿದ ಲಂಡನ್ ನ ಗ್ರೇಸ್ ಇನ್ ಕಾಲೇಜು

ಲಂಡನ್: ಬಾಬಾಸಾಹೇಬ್ ಅಂಬೇಡ್ಕರರು ಬ್ಯಾರಿಸ್ಟರ್ ಪದವಿ(ಬಾರ್- ಅಟ್- ಲಾ) ಪಡೆದ ಲಂಡನ್ ನ ಗ್ರೇಸ್ ಇನ್ ಕಾಲೇಜು ತನ್ನ ಪ್ರೀತಿಯ ಪ್ರತಿಭಾವಂತ‌ ವಿದ್ಯಾರ್ಥಿಗೆ ವಿಶಿಷ್ಟ ಗೌರವ ಸಲ್ಲಿಸಿದೆ.
ಬುಧವಾರ(ಜೂ.30) ಬ್ರಿಟನ್ ಸಂಸತ್ ಸದಸ್ಯ ಲಾರ್ಡ್ ಡೇವಿಡ್ ಆಲ್ಟನ್ ಅವರು, ಕಾಲೇಜಿನ ಒಂದು ಹಾಲ್ ಗೆ ಬಾಬಾಸಾಹೇಬ್ ಅಂಬೇಡ್ಕರರ ಹೆಸರು ಮತ್ತು ಆ ಕೊಠಡಿಯಲ್ಲಿ ಅವರ ಭಾವಚಿತ್ರವನ್ನು ಅನಾವರಣಗೊಳಿಸುವುದರ ಮೂಲಕ ಬಾಬಾಸಾಹೇಬರಿಗೆ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ ಲಾರ್ಡ್ ಡೇವಿಡ್ ಆಲ್ಟನ್ “ಬಾಬಾಸಾಹೇಬ್ ಅಂಬೇಡ್ಕರರ ಬದುಕು ನ್ಯಾಯ, ಸಮಾನತೆ ಮತ್ತು ವಿಮೋಚನೆಯ ಕುತೂಹಲಕಾರಿ ಚರಿತ್ರೆಯಾಗಿದೆ. ಅವರ ಜೀವನ ಕತೆಯು ಕೋಟ್ಯಂತರ ಶೋಷಿತ ಸಮುದಾಯಗಳ, ಸಮಾಜದ ಅಂಚಿಗೆ ತಳ್ಳಲ್ಪಟ್ಟ ಜನರಿಗೆ ಈಗಲೂ ಭರವಸೆಯಾಗಿದೆ ಸ್ಫೂರ್ತಿಯ ಸೆಲೆಯಾಗಿದೆ. ಈ ನಿಟ್ಟಿನಲ್ಲಿ ಕಾಲೇಜಿನ ಒಂದು ಕೊಠಡಿಯನ್ನು ಅವರ ಹೆಸರಿಗೆ ಸಮರ್ಪಿಸಿ ಅಲ್ಲಿ ಬಾಬಾಸಾಹೇಬರ ಭಾವಚಿತ್ರ ಅನಾವರಣ ಗೊಳಿಸುವ ಗ್ರೇಸ್ ಇನ್ ಕಾಲೇಜಿನ ಈ ನಿರ್ಧಾರ ಹೊಸ ಪೀಳಿಗೆಗೆ ಅಂಬೇಡ್ಕರರ ಚಿಂತನೆಗಳನ್ನು ಕೊಂಡೊಯ್ಯುವ ಒಂದು ನಡೆಯಾಗಿದೆ” ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರರ ವಂಶಸ್ಥೆ ಸುಜಾತ ಅಂಬೇಡ್ಕರ್ ಅವರ ಅನುಯಾಯಿಯಾದ ಸಂತೋಷ್ ದಾಸ್ ಮತ್ತಿತರರಿದ್ದರು‌.

(ಮಾಹಿತಿ: ರಘೋತ್ತಮ ಹೊ.ಬ, ಮೈಸೂರು)

*****