ಅನುದಿನ ಕವನ-೧೮೧, ಕವಿ:ಕುಮಾರ ಚಲವಾದಿ, ಹಾಸನ, ಹನಿಗವಿತೆಗಳು

🌿 ಮಾನವೀಯತೆ!🌿

ಮಾನವೀಯತೆ ಇರದ ಬದುಕಿಗೆ
ಅದೆಲ್ಲಿಯ ಅರ್ಥ?
ಮಾತಿನಲ್ಲಿಯೇ ಮನೆಕಟ್ಟುವವರು
ಬದುಕಿದ್ದರೂ ವ್ಯರ್ಥ!
ಬದುಕೇ ಆದರ್ಶವಾಗಿರಲಿ
ಇರಲಿ ಒಂದಿಷ್ಟು ಮೌಲ್ಯ!
ಎದುರು ಬಂದವರ ಹೆಗಲಮೇಲಿಡಿ
ಪ್ರೀತಿ, ಸ್ನೇಹದ ಶಲ್ಯ!

🌿ಪ್ರಕೃತಿ-ಪ್ರೀತಿ!🌿

ಮಳೆ,ಚಳಿ,ಬಿಸಿಲು ಹೆಚ್ಚಾಯಿತು ಎಂದು
ಹಳಿಯದಿರಿ ಪ್ರಕೃತಿಯನ್ನು!

ಪರಿಸರದ ರಕ್ಷಣೆಗಾಗಿ ಮುಡಿಪಾಗಿಡಿ
ನಿಮ್ಮೊಳಗಿರುವ ಪ್ರೀತಿಯನ್ನು!

🌿 ಮೊಸಳೆ ಕಣ್ಣೀರು!🌿

ಮೊಸಳೆ ಕಣ್ಣೀರು ಸುರಿಸದಿರಿ ಬಡವರ
ಜೋಪಡಿ ಗುಡಿಸಲುಗಳನ್ನು ನೋಡಿ!

ಸಾಧ್ಯವಾದರೆ ಅವರ ಹಸಿದ ಹೊಟ್ಟೆಗೆ
ನಿಮ್ಮ ಶ್ರಮದ ದುಡಿಮೆಯಲೊಂದಷ್ಟು ನೀಡಿ!

🌿 ಆಸ್ತಿ?🌿

ಅಪ್ಪನೊಂದಿಗೆ ಜಗಳವಾಡಿದ ಮಗ ತನಗೇನೂ ಮಾಡಿಯೇ ಇಲ್ಲವೆಂದು ಆಸ್ತಿ;

ಮಗ ಮರೆತೇಬಿಟ್ಟಿದ್ದ ಚಿಕ್ಕವನಿದ್ದಾಗ ಅಪ್ಪ ಹಸಿದಿದ್ದರೂ ಸಾಲಮಾಡಿ ತುತ್ತುಣಿಸಿದ ಪ್ರೀತಿ!

🌿 ಪ್ರೀತಿಯಿಂದ ಸಾಕಿದವರು!🌿

ಮಕ್ಕಳು ಚಿಂತೆಗಳಿಲ್ಲದೇ ಕುಣಿದು ಕುಪ್ಪಳಿಸಿದರು ಅಂದು, ತಂದೆ-ತಾಯಿಯ ಆಶ್ರಯದಲ್ಲಿ!
ದೊಡ್ಡವರಾಗಿ ವಿದೇಶಕ್ಕೆ ಹಾರಿದ್ದಾರೆ ಇಂದು, ಪ್ರೀತಿಯಿಂದ ಸಾಕಿದವರು ನೆಲೆಸಿದ್ದಾರೆ ವೃದ್ಧಾಶ್ರಮದಲ್ಲಿ!

-ಕುಮಾರ ಚಲವಾದಿ, ಹಾಸನ
🌿