ಅನುದಿನ ಕವನ-೧೮೨, ಕವಿ: ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಕವನದ ಶೀರ್ಷಿಕೆ: ಬುದ್ಧನಾಗಲು ಸಿದ್ದನಾಗು

ಬುದ್ಧನಾಗಲು ಸಿದ್ದನಾಗು

ನೊಂದು-ಬೆಂದವರ ಆರ್ತನಾದವ ಕೇಳಿ
ಅಶಾಂತಿ-ಅಶಿಸ್ತಿನ ಅಗ್ನಿನರ್ತನವ ಕಂಡ
ಶಾಕ್ಯಮುನಿ ಶಾಂತಿಯತ್ತ ಸಾಗಿದ||
ದುಷ್ಟನು ಶಿಷ್ಟನಾಗುವ
ಶಿಷ್ಟನು-ಶಿವನತ್ತ ಸಾಗುವ
ಸತ್ಪಥವ ಹುಡುಕ ತೊಡಗಿದ||
ಚಟ್ಟವನ್ನು ಕಂಡು ಚಡಪಡಿಸಿ
ರೋಗಿಯ ಕಂಡು ವಿರಾಗಿಯಾಗಿ
ಮೋಹದ ದಾಹವನ್ನು ದಹಿಸಲು ಮುಂದಾದ||
ಪ್ರಜಾಪ್ರೇಮಿ ಸಿದ್ದಾರ್ಥನ ಕಂಡ ಕ್ರೂರಿ ತಂಡ
ಮತ್ಸರದೊಳಗೆ ಬೇಯುತಿತ್ತು
ರಕ್ಕಸರ ರಂಪಾಟದ ಸುಳಿಗೆ ಸಿಲುಕಿದ ಸಿದ್ದಾರ್ಥ
ಬದುಕಿನ ಅರ್ಥ ಅರಿಯಲು ಮುಂದಾದ||
ಅರಮನೆಯ ಆಡಂಬರಕೆ ವಿದಾಯ ಹೇಳಿದ ಸಿದ್ದಾರ್ಥ
ಗೋಸುಂಬೆಯಂಥ ಬದುಕಿನರ್ಥವನು
ಮೆಲುಕು ಹಾಕುತ್ತಾ ಕೆದುಕತೊಡಗಿದ||
ದುರಾಸೆಯ ದುರ್ಗತಿಗೆ
ದುರ್ಬುದ್ಧಿಯ ದುರಂತಕ್ಕೆ
`ಆಸೆ’ ಎಂಬುದನ್ನು ದೃಢೀಕರಿಸಿದ||
ಅಂಗುಲಿಮಾಲನನ್ನು ಆನಂದಮಾಲನಾಗಿಸಿ
ಗೋತಮಿಯ ಗೋಳನ್ನು
ಹೋಳು ಹೋಳಾಗಿಸಿ ಬಾಳ ಬೆಳಗಿಸಿದ||
ಆಸೆಯ ಆರ್ಭಟ-ಅನಾಹುತವನ್ನು
ಅರಿವಿನ ಮೂಲಕ ಅರುಹಿದ ಬುದ್ದ
ಅಜ್ಞಾನ ಜಗಕ್ಕೆ ಬುದ್ಧಿ ಕಲಿಸಿದಾತ||
ನಿನ್ನ ತ್ಯಾಗಕ್ಕೆ ನಮೋ ನಮೋ
ನಿನ್ನ ಸಾಧನೆ ಸಿದ್ಧಿಗೆ ನಮೋ ನಮೋ
ನೀ ಮಾಡಿದ ಮನಪರಿವರ್ತನೆಗೆ ನಮೋ ನಮೋ||
ಕಲ್ಲು ಹೃದಯ ಕರಗಿಸಿ
ಮುಳ್ಳು ಹೂವಾಗಿಸಿ
ಮುದವನ್ನು ಮುಗಿಲು ಮುಟ್ಟಿಸಿದಾತನೇ
ನಿನ್ನ ಕಾರ್ಯ ಸಿದ್ಧಿಗೆ ನಮೋ ನಮೋ||
ಸಿದ್ದಾರ್ಥನ ತಿಳಿದು, ತಿಳಿವಿಗೆ ಸಿದ್ದನಾಗು
ಬುದ್ಧಬೋಧ ಅರಿತು, ತಾಪ-ಪಾಪ ಮರೆತು
ಬುದ್ಧನಾಗಲು ಸಿದ್ಧನಾಗು.. … … … … ||

-ಡಾ. ನೆಲ್ಲಿಕಟ್ಟೆ ಎಸ್.ಸಿದ್ದೇಶ್
ಎಂ.ಎ.,ಎಂ.ಇಡಿ., ಪಿಜಿಡಿಜೆ.,ಪಿಎಚ್.ಡಿ.
ಸಹಾಯಕ ಪ್ರಾಧ್ಯಾಪಕರು
ಕನ್ನಡಭಾರತಿ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
ಜ್ಞಾನಸಹ್ಯಾದ್ರಿ, ಶಂಕರಘಟ್ಟ-577451
,*****

ಡಾ. ನೆಲ್ಲಿಕಟ್ಟೆ ಎಸ್.ಸಿದ್ದೇಶ್