ಹೊಳಲ್ಕೆರೆ: ಜನರ ದನಿಯ ಕವಿ, ಚಳವಳಿ ಸಂಘಟನೆಗಳ ಕವಿ, ಕನ್ನಡದ ಅಸ್ಮಿತೆಯ ಕವಿ, ತನಗಾಗಿ ಕವಿತೆಯಲ್ಲ ಜನರಿಗಾಗಿ ಕವಿತೆಯೆಂದು ಸಾರಿದ ಕವಿ ದಿ. ಜನಕವಿ ಡಾ.ಸಿದ್ಧಲಿಂಗಯ್ಯರವರು ಎಂದು ಪ್ರೊ. ಅಂಜಿನಪ್ಪ ಚಳ್ಳಕೆರೆ ಅವರು ಹೇಳಿದರು.
ಹೊಳಲ್ಕೆರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಕ್ಕಳ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಈಚೆಗೆ ಅಂತರ್ಜಾಲ ಗೂಗಲ್ ಮೀಟ್ ಮೂಲಕ ಹಮ್ಮಿಕೊಂಡಿದ್ದ “ಡಾ.ಸಿದ್ಧಲಿಂಗಯ್ಯ : ಕನ್ನಡ ಭಾಷೆಯ ಹೊಂಬೆಳಕು” ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಸಿದ್ಧಲಿಂಗಯ್ಯ ಅವರು ಕೇವಲ ದಲಿತರ ಭಾವಬನಿಯಾಗಿರಲಿಲ್ಲ, ತುಳಿತಕ್ಕೊಳಗಾದ ಎಲ್ಲ ಸಮುದಾಯದ ಜನರ ಪ್ರತಿಧ್ವನಿಯಾಗಿದ್ದರು, ಪ್ರತಿನಿಧಿಯಾಗಿದ್ದರು. ಕಾವ್ಯದ ಮೂಲಕ ಕೆಚ್ಚು ರೊಚ್ಚಿನ ಹೃದಯಾಂತರಾಳದ ಭಾವನೆಗಳ ಹಸಿಹಸಿಯಾಗಿ ಹೊರಹಾಕಿ ಕನ್ನಡ ಸಾಹಿತ್ಯದಿ ತಳಸಮುದಾಯದ ಜೀವನ ಚಿತ್ರಣ ನೀಡಿ ಜೀವಂತ ದಂತಕತೆಯಾದವರು ಎಂದು ಶ್ಲಾಘಿಸಿದರು.
ಪ್ರಭುತ್ವದ ಪರವಿದ್ದರೆ ಕವಿಯಾಗಲು ಸಾಧ್ಯವಿಲ್ಲ ಜನರ ಪರವಿದ್ದವರು ಮಾತ್ರ ನಿಜ ಕವಿ ಅಂತಹ ಕವಿ ಸಿದ್ಧಲಿಂಗಯ್ಯರವರು ಎಂದು ತಿಳಿಸಿದರು.
ಕವಿಗಳ ಒಡನಾಡಿ ಪ್ರಾಧ್ಯಾಪಕ ಡಾ.ಶಿವರಾಜ ಬ್ಯಾಡರಹಳ್ಳಿ ಅವರು ಮಾತನಾಡಿ, ಡಾ.ಸಿದ್ಧಲಿಂಗಯ್ಯ ಅವರ ಕಾವ್ಯ ಕತೆ ಮಾತಿನ ಮೂಲಕ ಅಷ್ಟೆ ಅಲ್ಲ ನೊಂದವರ ಅಸಹಾಯಕರ ಕಷ್ಟಗಳಿಗೆ ತಮ್ಮ ತನು ಮನ ಧನದ ಮೂಲಕ ಸೇವೆ ಮಾಡಿ ಸಾವಿರಾರು ಜನರ ಬಾಳ ಬೆಳಕಾಗಿದ್ದಾರೆ. ನಾವೆಲ್ಲ ಅವರ ವ್ಯಕ್ತಿತ್ವದ ಪಂಜಿನ ದಾರಿಯಲ್ಲಿ ನಡೆದು ಬದುಕು ಕಟ್ಟಿಕೊಂಡಂತಹವರು. ಭಾಷೆಯ ಬೆಳವಣಿಗೆಗೆ ಅವರ ಸಾಹಿತ್ಯ ಹೇಗೆ ಹೊಸ ದಾರಿ ನಿರ್ಮಿಸಿತೋ ಹಾಗೆಯೇ ದುರ್ಬಲರ ಜೀವನ ಸಶಕ್ತೀಕರಣಕ್ಕೂ ದಿಕ್ಕು ದೆಸೆ ತೋರಿದವರು ಎಂದರು.
ಸ್ಮಶಾನದಿ ಕುಳಿತು ಕವಿತೆ ಬರೆದು ಉಪ್ಪರಿಗೆಯ ಕ್ಷಣಿಕತೆಯ ಸಾರಿದವರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಹೊಳಲ್ಕೆರೆ ಅಧ್ಯಕ್ಷ ಲೋಕೇಶ್ ಅವರು, ಕನ್ನಡ ಭಾಷೆ ಸಾವಿರಾರು ಕವಿಗಳ ಮೂಲಕ ತನ್ನ ಜೀವಂತಿಕೆಯನ್ನು ತೋರಿಸುತ್ತಿದೆ. ಕವಿಗಳು ಸಮಾಜದ ಮಾರ್ಗದರ್ಶಕರು. ಸಿದ್ಧಲಿಂಗಯ್ಯನವರ ಸಾಹಿತ್ಯ ಹಾಗು ಬದುಕು ಕನ್ನಡಿಗರೆಲ್ಲರಿಗು ಆದರ್ಶಪ್ರಾಯವಾದುದು ಎಂದು ತಿಳಿಸಿದರು.
ಕವಿಗಳಾದ ಚಂದ್ರಶೇಖರ ತಾಳ್ಯ ಇವರ ಅನುಪಸ್ಥಿತಿಯಲ್ಲಿ ಅವರ ಮತ್ತು ಸಿದ್ಧಲಿಂಗಯ್ಯರ ಗೆಳೆತನದ ಒಡನಾಟದ ಸಂದೇಶದ ನುಡಿನಮನವನ್ನು ಮಹೇಂದ್ರಪ್ಪ ಶಿಕ್ಷಕರು ವಾಚನ ಮಾಡಿದರು.
ಕಾವ್ಯ ನಮನದಲ್ಲಿ ನಾಡಿನ ಖ್ಯಾತ ಕವಿಗಳಾದ ತಾಳ್ಯದ ವೇದಮೂರ್ತಿ, ಮೋದೂರು ತೇಜ, ಆನಂದಕುಮಾರ್ ಹೆಚ್, ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟು, ರೇಣುಕಾ ಚಿತ್ರದುರ್ಗ, ದಾಮಿನಿ ರಂಗಸ್ವಾಮಿ, ಮನುಶ್ರೀ ರಂಗಸ್ವಾಮಿ, ಲಕ್ಷ್ಮೀಕಾಂತ ಮಿರಜ್ಕರ್, ಡಿ.ಶಿವರಾಜ್, ಉಮೇಶ್ ಬಾಬು, ಷಫೀವುಲ್ಲಾ, ಗುರುಲಿಂಗೇಶ್ ಇಳಕಲ್, ಡಾ. ವಿರೂಪಾಕ್ಷ, ವೆಂಕಟರಮಣ ಭಾಗವಹಿಸಿ ಡಾ.ಸಿದ್ಧಲಿಂಗಯ್ಯ ಅವರ ಕಾವ್ಯ ವಾಚಿಸುವ ಮೂಲಕ, ಹಾಡುವ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿದರು.
ಆನ್‌ಲೈನ್ ಕಾರ್ಯಕ್ರಮದಲ್ಲಿ ನಾಗರಾಜ ಸಿರಿಗೆರೆ, ಕಾಗಿನೆಲೆ ಮಠದ ಕಾರ್ಯದರ್ಶಿ ಜಗನ್ನಾಥ್ ರೇಗಣ್ಣನವರು, ಉಪನ್ಯಾಸಕರಾದ ನುಲೇನೂರು ಬಸವರಾಜಪ್ಪ, ಉಡುಪಿ ಮೀನಾ ಶೆಟ್ಟಿ, ಕ.ರಾ.ಪ್ರಾ.ಶಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಜಿ.ಎ.ದೇವರಾಜಯ್ಯ, ರಾಜ್ಯ ಸಹ ಕಾರ್ಯದರ್ಶಿ ಕೆ.ಎಸ್.ನಿಜಲಿಂಗಪ್ಪ, ಅಧ್ಯಕ್ಷರಾದ ಜಿ.ಎಂ. ಶಿವಪ್ಪ, ಕಾರ್ಯದರ್ಶಿ ಮಂಜುನಾಥ್ .ಎಂ, ಖಜಾಂಚಿ ಸತೀಶ್ ಟಿ.ಎಸ್. ಉಪಾಧ್ಯಕ್ಷರಾದ ನೇತ್ರ ಹೊಳಲ್ಕೆರೆ ತಾಲ್ಲೋಕು ಮತ್ತು ಚಿತ್ರದುರ್ಗ ಜಿಲ್ಲೆಯ ಸಾಹಿತ್ಯ ಶ್ರೋತೃಗಳಲ್ಲದೆ ನಾಡಿನಾದ್ಯಂತ ನೂರಕ್ಕು ಹೆಚ್ಚು ಸಹೃದಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಫೇಸ್ ಬುಕ್ ಮೂಲಕ ನೇರ ಪ್ರಸಾರವನ್ನು ಸಹೃದಯ ಸಾಹಿತ್ಯ ಬಂಧುಗಳು ವೀಕ್ಷಿಸಿದರು.
ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟುರವರು ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ’ ಎಂಬ ಕ್ರಾಂತಿ ಗೀತೆ ಹಾಡಿದರು. . ಕಸಾಪ ಕಾರ್ಯದರ್ಶಿ ಜಿ.ಆರ್.ಬಸವರಾಜಪ್ಪ ಸ್ವಾಗತಿಸಿದರು. ಸಹ ಶಿಕ್ಷಕರಾದ ಶಿಲ್ಪಶ್ರೀ .ಎನ್. ಮತ್ತು ಸುಧಾ ಟಿ.ಜೆ. ಅತಿಥಿಗಳನ್ನು ಪರಿಚಯಿಸಿದರು. ಹೋಬಳಿ ಕಸಾಪ ಅಧ್ಯಕ್ಷ ಬಿ.ದುರ್ಗ ವಂದಿಸಿದರು. ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ, ಅಧ್ಯಾಪಕ, ಕವಿ ಟಿ.ಪಿ.ಉಮೇಶ್ ಮತ್ತು ಯು.ಮಹೇಶ್ ನಿರ್ವಹಿಸಿದರು.
(ವರದಿ: ಟಿ.ಪಿ.ಉಮೇಶ್, ಅಧ್ಯಕ್ಷರು, ಮಸಾಪ ಹೊಳಲ್ಕೆರೆ)
*****