ಅನುದಿನ‌ಕವನ-೧೮೭, ಕವಯತ್ರಿ: ನೂರ್ ಜಹಾನ್, ಹೊಸಪೇಟೆ, ಕವನದ ಶೀರ್ಷಿಕೆ: ನಿವೇದನೆ

 

ನಿವೇದನೆ

ಅಂದು ನಿನ್ನನು ಕಂಡಾಗಲೆಲ್ಲಾ ಎದುರಿನಲ್ಲಿ
ನೂರು ಚೂರಿಗಳು ಚುಚ್ಚುತಿದ್ದವು ಹೃದಯದಲ್ಲಿ
ಇಂದು ಯಾಕೋ ನಿನ್ನನು ಕಂಡರೂ ಎದುರಿನಲ್ಲಿ
ಏನೂ ಆಗಲೇ ಇಲ್ಲ ಈ ಹೃದಯದಲ್ಲಿ

ನಿನ್ನನು ಕಂಡಾಗಲೆಲ್ಲಾ ನೂರು ನೆನಪು ಕಾಡುತಿದ್ದವು ನೂರು ನೋವು ಆಗುತಿದ್ದವು ಹೃದಯದಲ್ಲಿ
ಈಗ ಯಾಕೆ ಏನೂ ಅನಿಸುವುದೇ ಇಲ್ಲ
ನಿನ್ನನು ಎದುರಿಗೆ ಕಂಡರೂ ಹೃದಯದಲ್ಲಿ

ಅಂದು ಕಾತರಿಸುತ್ತಿದ್ದೆ ಕಾಣಲು ನಿನ್ನನು
ಮರೆತುಬಿಟ್ಟೆನೇ ಇಂದು ನಿನ್ನ ಪ್ರೀತಿಯನ್ನು
ನಿನ್ನನೇ ಕನಸುತಿದ್ದೆ ಈಗೇನಾಯಿತು ಗೊತ್ತೇ ಇಲ್ಲ
ನಿನ್ನ ನೆನಪೇ ನನಗೆ ಆಗುತ್ತಿಲ್ಲ

ಇದೇ ಜೀವನವಿರಬಹುದು
ನಿನ್ನ ಸಂತೋಷವೇ ಮನವು ಬಯಸುತಿರಬಹುದು
ಅದಕ್ಕೆ ನನ್ನ ದಾರಿ ನನಗೆ ನಿನ್ನ ದಾರಿ ನಿನಗೆ
ಎಂದು ಮನವು ಮಾರ್ಗವನು ಬದಲಿಸಿರಬಹುದು

ದಾರಿಯಲಿ ಎಂದಾದರೂ ನಾವು ಸಿಗಬಹುದು
ಭೇಟಿಯಾದಾಗ ಒಂದು ಮುಗುಳ್ನಗೆ ಬೀರಬಹುದು
ಇವು ಜೀವನದ ಕೊನೆಯ ದಿನಗಳು ಇರಬಹುದು
ದ್ವೇಷ ಮರೆತು ಸ್ನೇಹವ ಬಯಸಬಹುದು

ನಿನ್ನ ಜೀವನದಲ್ಲಿ ನೂರಾರು ವಸಂತಗಳು ಬರಲಿ
ಇದೇ ನಿನ್ನ ಗೆಳತಿಯ ಅಭಿನಂದನೆ
ನೀನು ಎಲ್ಲಿದ್ದರೂ ಸಂತೋಷವಾಗಿರು ಗೆಳೆಯನೇ
ಇದೇ ನಿನ್ನ ನೂರಾಳ ನಿವೇದನೆ

-ನೂರ್ ಜಹಾನ್, ಹೊಸಪೇಟೆ