ಇಂದು (ಜು.10) ಸಂಶೋಧಕ, ಅತ್ತುತ್ತಮ ಸಂಘಟಕ, ಉಪನ್ಯಾಸಕ,ಸಾಹಿತಿ, ವಾಗ್ಮಿ ಡಾ. ಅರ್ಜುನ ಗೊಳಸಂಗಿ ಅವರ ಹುಟ್ಟುಹಬ್ಬ. ದಸಾಪ ಸಂಘಟನೆ ಹಾಗೂ ಜನಪರ ಚಿಂತನೆಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತರಾಗಿರುವ ಡಾ.ಗೊಳಸಂಗಿ ಅವರ ಕುರಿತು ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಸದಾಶಿವ ದೊಡ್ಡಮನಿ ಅವರು ಮತ್ತಷ್ಟು ಬೆಳಕು ಚೆಲ್ಲಿದ್ದಾರೆ…..
ಡಾ. ಅರ್ಜುನ ಗೊಳಸಂಗಿ ಅವರ ಹುಟ್ಟುಹಬ್ಬದ ನಿಮಿತ್ತ ಈ ಲೇಖನವನ್ನು ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಕೂಡಾ ಹರ್ಷಿಸುತ್ತಿದೆ.
(ಸಂಪಾದಕರು: karnatakakahale.com)👇
‘ಸಾಲೀ ಮಾಮಾ’ ಡಾ. ಅರ್ಜುನ ಗೊಳಸಂಗಿ
ನಮ್ಮ ಮನೆಯಲ್ಲಿ ಮೊಟ್ಟಮೊದಲು ಶಾಲೆ ಕಲಿತವರೆಂದರೆ ‘ಸಾಲೀ ಮಾಮಾ’ ಒಬ್ಬರೆ. ಹಾಗಾಗಿ ನನಗೆ ಮಾತ್ರವಲ್ಲ; ನನ್ನ ಅಕ್ಕ, ತಮ್ಮ, ತಂಗಿ ಎಲ್ಲರಿಗೂ ಮನೆಯಲ್ಲಿ ‘ಸಾಲೀ ಮಾಮಾ’ ಎಂದೇ ಹೇಳಿ ಕೊಟ್ಟಿದ್ದರು. ನಾವೆಲ್ಲರೂ ಅವರನ್ನು ಹಾಗೆಯೇ ಕರೆಯುತ್ತಿದ್ದೇವು ‘ಸಾಲಿ ಮಾಮಾ’ ಎಂದರೆ ಬೇರಾರೂ ಅಲ್ಲ, ಅವರು ನನ್ನ ಅವ್ವನ ತಮ್ಮ. ಐದು ಜನ ಹೆಣ್ಣು, ನಾಲ್ಕು ಜನ ಗಂಡು ಮಕ್ಕಳಲ್ಲಿ ಸರಸ್ವತಿ ಒಲಿದಿದ್ದೆಂದರೆ ಅವರೊಬ್ಬರಿಗೆ ಮಾತ್ರ. ಹಾಗಾಗಿ ಮನೆಯವರಿಗೆಲ್ಲ ಅವರ ಮೇಲೆ ವಿಶೇಷ ಪ್ರೀತಿ, ಕಾಳಜಿ ಇತ್ತು. ಅವರೂ ಅಷ್ಟೇ . ಮನೆಯವರೆಲ್ಲರನ್ನು ಕಣ್ಣ ಗೊಂಬೆಯ ಹಾಗೆ ನೋಡಿಕೊಳ್ಳುತ್ತಿದ್ದರು. ಅವರ ತಂದೆ ಅಂದರೆ ನಮ್ಮ ಮುತ್ಯಾ ಅವರಿಗೆ ಅರ್ಜುನ ಎಂದು ಹೆಸರಿಟ್ಟಿದ್ದರು. ಅಪ್ಪ, ಅವ್ವರ ಮುದ್ದಿನ ಮಗನೂ ಅವರಾಗಿದ್ದರು. ಹೆಸರಿಗೆ ತಕ್ಕ ಹಾಗೆ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಹಾಗೆಯೇ ಬೆಳೆದರು. ಆ ಕುರಿತು ಮತ್ತೊಮ್ಮೆ ಬರೆಯುತ್ತೇನೆ. ನಾನು ಎರಡನೆಯ ತರಗತಿಗೆ ನಮ್ಮೂರಿನಿಂದ ನನ್ನ ತಾಯಿಯ ತವರು ಮನೆ ಗೊಳಸಂಗಿಗೆ ಬಂದಾಗ ಅವರು ಸಿಂದಗಿಯ ಕಾಲೇಜೊಂದರಲ್ಲಿ ಪದವಿ ಶಿಕ್ಷಣವನ್ನು ಓದುತ್ತಿದ್ದರು.
ಈಗಿನ ಹಾಗೆ ಆಗ ಮೊಬೈಲ್ ಗಳ ಹಾವಳಿ ಇರಲಿಲ್ಲ. ಕ್ಷೇಮ, ಸಮಾಚಾರ ರವಾನೆಗೆ ಪತ್ರಗಳೇ ಅಧಿಕೃತ ಸುದ್ದಿಗಾರರಾಗಿದ್ದರು. ವಾರಕ್ಕೊಂದು ಪತ್ರವನ್ನು ಅವರು ತಪ್ಪದೇ ಬರೆಯುತ್ತಿದ್ದರು. ಅದು ಬರೀ ಪತ್ರ ರೂಪದ ಕಾಗದ ಮಾತ್ರವಾಗಿರುತ್ತಿರಲಿಲ್ಲ.
ಹೃದಯ ಮಿಡಿತವಾಗಿರುತ್ತಿತ್ತು. ಎಲ್ಲರನ್ನೂ ಎಲ್ಲವನ್ನು ಮಗ್ಗುಲಲ್ಲಿ ಕುಳಿತು ಆಪ್ತವಾಗಿ ಕೇಳಿದಂತಿರುತಿತ್ತು. ಸುಖ, ದುಃಖವನ್ನು ಹಂಚಿಕೊಂಡ ಹಾಗಿರುತ್ತಿತ್ತು. ನನ್ನ ತಂದೆ ಆಗಾಗ ನಮ್ಮ ಊರ ದೊಡ್ಡಪ್ಪಗೌಡ್ರು ಹೇಳಿದ್ದ ಒಂದು ಮಾತು ಹೇಳುತ್ತಿದ್ದರು. ಅದೇನಂದ್ರ “ನಮ್ಮ ಅರ್ಜುನನ ಟಪಾಲ ಬಂತಂದ್ರ ಸಾಕು, ಕಟ್ಟೀಗಿ ಕುಂತಿದ್ದ ನಮ್ಮ ಊರ ಗೌಡ್ರಾದ ದೊಡ್ಡಪ್ಪಗೌಡ್ರು, ಕುಂತಲ್ಲಿಯಿಂದಲೇ ಏಯ್ ತುಕ್ಕಾ! ಯಾರದೋ ಅದು ಟಪಾಲ, ಅರ್ಜುನ ಬರದಾನೇನೋ! ತೋಗೊಂಡು ಬಾ ಇಲ್ಲಿ ನಾ ಒಂದಿಷ್ಟು ಓದಿ ಕೊಡ್ತೀನಿ”. ಅಂತ ಕರೆದು ಅಂತರ್ದೇಶಿ ಪತ್ರಾನ ಸ್ವತಃ ತಾನ ಒಡೆದು ಒಂದಲ್ಲ ಎರಡು-ಮೂರು ಸಲ ಹೊಳ್ಳೆಮುಳ್ಳೆ ಓದಿ, “ಏನ್ ಚಂದ ಬರದಾನೋ ಅರ್ಜುನ ಟಪಾಲನ, ಓದಿ ಹೊಟ್ಟಿ ತುಂಬದಾಂಗ್ಹ ಆತು ನೋಡಪಾ… ಯಾವಾಗ ಬರ್ತಾನೋ ಅಂವ, ಬಂದಾಗ ನನ್ಗ ತುಸು ಭೇಟಿ ಮಾಡಿಸೋ, ಒಂದ ನಾಕು ಮಾತ ಮಾತಾಡ್ತೀನಿ” ಎಂದು ಬಾಯಿ ತುಂಬಾ ಮಾತಾಡುತ್ತಿದ್ದರು. ಅವರು ನಮ್ಮ ಊರ ಗೌಡ್ರು ಆದ್ರೂ ಶಾಲೆ ಕಲಿತ ಒಬ್ಬ ದಲಿತ ವಿದ್ಯಾರ್ಥಿ ಮೇಲೆ ಇಟ್ಟ ಪ್ರೀತಿ,ಗೌರವ ಇತರರಿಗೆ ಮಾದರಿಯಾಗುವಂತಿದೆ. ಸಾಲಿ ಮಾಮಾ ಬರೆದ ಎಲ್ಲಾ ಪತ್ರಗಳನ್ನು ನಮ್ಮೂರಲ್ಲಾಗಲಿ , ನಮ್ಮ ತಾಯಿ ತವರಮನೆಯಲ್ಲಾಗಲಿ ಅವುಗಳನ್ನು ನಮ್ಮ ಗುಡಿಸಿಲಿನಲ್ಲಿ ತೂಗಿ ಹಾಕಿದ ಒಂದ ತಂತಿಗೆ ಬಳೆಗಳ ಹಾಗೆ ಅನುಕ್ರಮವಾಗಿ ಹಾಕುತ್ತಿದ್ದೇವು. ಮೂರು ನಾಲ್ಕು ವರ್ಷದ ಪತ್ರಗಳನ್ನು ಹಾಗೆಯೇ ಸಂಗ್ರಹಿಸಿ ಇಡುತ್ತಿದ್ದೇವು. ಅವೆಲ್ಲ ಹೊಗೆ ಹತ್ತಿ ಕಪ್ಪು, ಕಪ್ಪಾದಾಗ ಅವುಗಳನ್ನು ಬೇರೆ ಕಡೆ ತೆಗೆದು ಇಡುತ್ತಿದ್ದೇವು. ಸಾಲಿ ಮಾಮಾ ಇಂಥಾ ದಿನ, ತಾರೀಖಿಗೆ ಊರಿಗೆ ಬರುತ್ತೇನೆ ಎಂದು ಪತ್ರ ಬರೆದರೆ ಸಾಕು, ಒಂದೊಂದು ದಿನಗಳನ್ನು ಎಣಿಸುತ್ತ ಅವರು ಬರುವ ದಿನಾ ಮಾತ್ರ ಮನೆ ಮಂದಿಯೆಲ್ಲ ಅತ್ಯಂತ ಸಂತೋಷದಿಂದ ಅಷ್ಟೇ ಕಾತರತೆಯಿಂದ ಅವರು ಬರುವ ದಾರಿ ಎಡೆಗೆ ನೋಡುತ್ತ ನಿಲ್ಲುತ್ತಿದ್ದೇವು. ದೂರ ದೂರದಲ್ಲಿ ಯಾರೋ ನಡೆದು ಬರುತ್ತಿದ್ದರೂ ನಾವು ಅವರನ್ನು ಸಾಲಿ ಮಾಮಾ ಎಂದೇ ಭಾವಿಸುತ್ತಿದ್ದೇವು. ಹಾಗೆ ಭಾವಿಸಿ ಕೆಲ ಸಲ ಅವರೆದುರು ಓಡಿ ಹೋದಾಗ ಅವರು ಸಾಲಿ ಮಾಮಾ ಆಗಿರದೇ ಬೇರೆ ಯಾರೋ ಆಗಿರುತ್ತಿದ್ದರು. ಆಗ ನಮಗೆ ಬೇಸರವೆಂದರೆ ತುಂಬಾ ಬೇಸರ, ಕೆಲವೊಮ್ಮೆ ಅಳುವೂ ಬಂದು ಬಿಡುತ್ತಿತ್ತು. ಕಣ್ಣೀರು ಒರೆಸಿಕೊಂಡು ಅನಿವಾರ್ಯವಾಗಿ ಮನೆ ಕಡೆ ಹೆಜ್ಜೆ ಹಾಕುತ್ತಿದ್ದೇವು. ಕೆಲವೊಮ್ಮೆ ಕಾದು ಕಾದು ಬೇಸರವಾಗಿ ಮನೆಯೊಳಗೆ ಬಂದು ಕುಳಿತಾಗ, ಕೆಲವೊಮ್ಮೆ ಮಲಗಿದಾಗ ಸುಟಕೇಸ್ ಹಿಡಿದು ಮನೆ ಮುಂದೆ ನಿಂತು ಕರೆದಾಗಲಂತೂ ಆಶ್ಚರ್ಯ, ಸಂತೋಷ ಎರಡೂ ಒಟ್ಟಿಗೆ ಉಂಟಾಗುತ್ತಿದ್ದವು. ಸಾಲಿ ಮಾಮಾ ಬಂದಾಗ ಮನೆಯಲ್ಲಿ ಏನೋ ಒಂದು ತರಹದ ಸೊಗಸು! ನಮ್ಮ ಆಯೀ ಅಂತೂ ಸಾಲಿಮಾಮಾ ಬರ್ತಾನ ಅಂತ ಗೊತ್ತ ಆದ್ರ ಸಾಕು ! ಹೊಲ, ಹೊಲ ತಿರುಗಾಡಿ ರಾಜಗೀರ, ಕಿರಸಗಲ್ಲೆ, ಮೆಂತೆ, ಹತ್ತರಕಿ, ಹಾಲಿ ಪಲ್ಯ ಇತ್ತ್ಯಾದಿ ಪಲ್ಯಗಳನ್ನು ತಂದು ತಾಳಿಸಿ ಇಟ್ಟು ಮಗ ಬರುವ ದಾರಿಯನ್ನು ನೋಡುತ್ತ ಕುಳಿತುಕೊಳ್ಳುತ್ತಿದ್ದಳು. ಸಾಲಿ ಮಾಮಾ ಬರುವವರೆಗೂ ಕಾದು, ಆತ ಬಂದ ಮೇಲೆಯೇ ಅವನ ಜತೆಗೆ ಮನೆಯವರೆಲ್ಲ ಕುಳಿತು ಊಟ ಮಾಡುತ್ತಿದ್ದೇವು. ಸಾಲಿ ಮಾಮಾನಿಗೆ ಪಲ್ಯವೆಂದರೆ ಬಹಳ ಪ್ರೀತಿ. ಪಲ್ಯ ಇದ್ದರೆ ಒಂದು ರೊಟ್ಟಿ ಹೆಚ್ಚಿಗೆ ಉಣ್ಣುತ್ತಿದ್ದ. ಊಟಕ್ಕಿಂತ ಮಾತೇ ಹೆಚ್ಚಾಗಿರುತ್ತಿದ್ದವು. ಅವರ ಮಾತುಗಳನ್ನು ಕೇಳುತ್ತ ಕುಳಿತರೇ ನಾವೂ ಅವರ ಕಾಲೇಜು, ಕಾರ್ಯಕ್ರಮಗಳನ್ನು ಕಂಡಂತೆ ಅನುಭವವಾಗುತ್ತಿತ್ತು.
ಸಾಲಿ ಮಾಮಾ ಪದವಿ ಶಿಕ್ಷಣ ಮುಗಿಸಿ,ವಿದ್ಯಾನಗರಿ ಧಾರವಾಡಕ್ಕೆ ಎಂ.ಎ. ಕಲಿಯಲು ಹೋದರು. ನಾನಾಗ ಏಳನೆಯ ಅಥವಾ ಎಂಟನೆಯ ತರಗತಿಯೋ ಓದುತ್ತಿದ್ದೆ. ಅವರು ವರ್ಷದಲ್ಲಿ ಮೂರೋ- ನಾಲ್ಕೋ ಸಲ ಊರಿಗೆ ಬರುತ್ತಿದ್ದರು. ಹಾಗೆ ಬಂದಾಗ ಒಂದು ವಾರೋ, ಹದಿನೈದು ದಿನಾನೋ ಊರಲ್ಲಿ ಇರುತ್ತಿದ್ದರು. ಆಗ ನನ್ನ ನಿಜವಾದ ಪಾಠ ಶಾಲೆ ಪ್ರಾರಂಭವಾಗುತ್ತಿತ್ತು. ನಾನು ಓದಿನಲ್ಲಿ ತುಂಬಾ ಹಿಂದೆ ಇದ್ದೆ. ಅದಕ್ಕೆ ಕಾರಣವೂ ಸಾಕಷ್ಟಿದ್ದವು. ಮೊದಲನೆಯದಾಗಿ ಹೇಳಬೇಕೆಂದರೆ ನಾನು ಅಷ್ಟಾಗಿ ಅಭ್ಯಾಸ ಮಾಡುತ್ತಿರಲಿಲ್ಲ .ಹೊಟ್ಟೆಗೆ ಊಟ ಬಿದ್ದರೆ ಸಾಕು! ಕುಂಭಕರ್ಣನ ಹಾಗೆ ಮಲಗಿ ಬಿಡುತ್ತಿದ್ದೆ. ಎರಡನೆಯ ಕಾರಣ ಹೇಳಬೇಕೆಂದರೆ ನಾನು ಮಾಂವದಿರ ಮನೆಯಲ್ಲಿ ಇದ್ದೆ . ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಮೇಲಾಗಿ ವಯಸ್ಸಿನಿಂದ ನಾನು ಸಣ್ಣವನಾದರೂ ದೊಡ್ಡವರಷ್ಟು ಕೆಲಸ ಮಾಡುತ್ತಿದ್ದೆ! ಕೆಲಸವೆಂದರೆ … ಕೆಲಸ ! ನಸುಕಿನಲ್ಲಿ ಏಳುವುದು, ಎತ್ತು-ಎಮ್ಮೆ-ಆಡುಗಳ ಹೆಂಡೆ-ಕಸ ಮಾಡುವುದು, ಬಾವಿ ಇಳಿದು ಹತ್ತು-ಹನ್ನೆರಡು ಕೊಡ ನೀರು ತರುವುದು, ವಾಸ್ತವವಾಗಿ ಹೇಳಬೇಕೆಂದರೆ ನನಗೆ ಕೊಡವೇ ಎತ್ತುತ್ತಿರಲಿಲ್ಲ, ಹರ ಸಾಹಸ ಮಾಡಿ ಕೊಡವನ್ನು ಎತ್ತಿಕೊಳ್ಳುತ್ತಿದ್ದೆ, ಕೆಲವೊಮ್ಮೆ ಜೋಲಿ ಸಾಲಲಾರದೆ ಬಾವಿಯಲ್ಲಿ ಬಿದ್ದದ್ದೂ ಉಂಟು. ಆದರೆ ಈಜು ಬರುತ್ತಿದ್ದುದರಿಂದ ಅಪಾಯವೇನು ಆಗುತ್ತಿರಲಿಲ್ಲ. ಆಮೇಲೆ ಹೊಲ-ಹೊಲ ತಿರುಗಾಡಿ ದನಕರುಗಳುಗಳಿಗೆ ಮೇವು (ಹುಲ್ಲು) ಮಾಡಿ ತರುವುದು-ಇತ್ಯಾದಿ ಕೆಲಸಗಳು. ಅವೆಲ್ಲವನ್ನು ಮುಗಿಸಿ, ಅವಸರ-ಅವಸರವಾಗಿ ಮಾರಿನೋ ಮೈಯನ್ನೋ ತೊಳೆದುಕೊಂಡು, ಒಂದಿಷ್ಟು ಉಂಡು ವಾಯರ್ ಚೀಲ (ಸಂತೆಗೆ ಒಯ್ಯುವ ಚೀಲ) ಅಂದ್ರೆ ನಮ್ಮ ಶಾಲೆ ಬ್ಯಾಗ ಬೆನ್ನಿಗೇರಿಸಿ, ತಲೆ ಮೇಲೆ ನಾಲ್ಕೈದು ಸೊಲಗಿ ಜೋಳನೋ, ಗೋಧಿನೋ ಹೊತ್ತು, ಮೂರ್ನಾಲ್ಕು ಕಿ. ಮೀ. ಗೊಳಸಂಗಿಗೆ ನಡೆದು ಶಾಲೆಗೆ ಹೋಗಬೇಕಾಗುತ್ತಿತ್ತು . ಹಾಗೆಯೇ ಧಾನ್ಯದ ಗಂಟನ್ನು ಗಿರಣಿಯಲ್ಲಿ ಇಟ್ಟು, ಬರುವಾಗ ಬೀಸಿಕೊಂಡು ಬರಬೇಕಾಗುತ್ತಿತ್ತು. ಮನೆಗೆ ಬರುವುದರೊಳಗೆ ಹೊತ್ತು ಮುಳುಗಿ ಹೋಗುತ್ತಿತ್ತು. ಬಂದ ಮೇಲೆ ಮತ್ತೆ
ನೀರು-ನಿಡಿ ಇತ್ಯಾದಿ ಕೆಲಸಗಳು! ಈ ಕೆಲಸಗಳು ಮುಗಿದ ಮೇಲೆ ನನ್ನ ಓದು! ಓದಬೇಕು ಎನ್ನುವುದಲ್ಲಿ ಊಟದ ಸಮಯ! ಕೆಲಸ ! ಮೇಲಾಗಿ ತಿರುಗಾಟ! ಊಟ ಬಿದ್ದ ತಕ್ಷಣ ಕಣ್ಣಿಗೆ ನಿದ್ದೆ! ನಾನು ಬೇಡವೆಂದರೂ ನಿದ್ರಾದೇವತೆ ಕಣ್ಣ ರಂಗಶಾಲೆಯಲ್ಲಿ ತಕಾ ತಕ್ಕ! ಕುಣಿಯ್ಯುತ್ತಿದ್ದಳು. ಕಣ್ಣು ಬಿಟ್ಟಾಗ ಕಣ್ಣ ಮುಂದೆ ಅದೇ ದೈನಂದಿನ ಕೆಲಸಗಳು ಪ್ರತ್ಯಕ್ಷವಾಗುತ್ತಿದ್ದವು. ಹೀಗಾಗಿ ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸರಿಯಾದ ಬೇಸ್ ಬೀಳಲೇ ಇಲ್ಲ. ಆದರೆ ಸಾಲಿ ಮಾಮಾ ಬಂದಾಗ ಮಾತ್ರ ಮನೆಯೇ ಶಾಲೆಯಾಗಿರುತ್ತಿತ್ತು. ಹೇಳಿಕೊಟ್ಟ ಅಭ್ಯಾಸ ಮಾಡದ್ದಿದ್ದರೆ, ಮಗ್ಗಿ ಕಂಠಪಾಠ ಮಾಡದಿದ್ದರೆ ಸಾಲಿ ಮಾಮಾನ ಬಡೆತದ ರುಚಿ ನೋಡಬೇಕಾಗುತ್ತಿತ್ತು. ನನಗೆ ಸರಿಯಾಗಿ ಮಗ್ಗಿಯನ್ನೇ ಅನ್ನಲು ಬರುತ್ತಿಲಿಲ್ಲ. ಅದೆಲ್ಲರ ಸರಾಗ ಕಲಿಕೆ ಸಾಲಿ ಮಾಮಾನ ಪಾಠ ಶಾಲೆಯಲ್ಲಿ ಉಂಟಾಗುತ್ತಿತ್ತು. ಸಾಲಿ ಮಾಮಾ ಹೊರಗಡೆ ಹೋದಾಗ, ಅವನು ಬರುವುದರೊಳಗೆ ಆಯಿ ನನಗೆ ಹೊಟ್ಟೆ ತುಂಬ ಉಣಿಸಿ, ಓದಲು ಕಳುಹಿಸುತ್ತಿದ್ದಳು. ಸಾಲಿ ಮಾಮಾ ಬಂದು, ಊಟಕ್ಕೆ ಕರೆದರೆ ನಾನು ಒಲ್ಲೆ! ಎಂದು ಅಷ್ಟೇ ಹೇಳತ್ತಿದ್ದೆ. ಪಾಠಶಾಲೆಯ ಕಲಿಕೆ ಎಷ್ಟೇ ಕಠಿಣವಾದರೂ ಸರಿ… ನಾನು ಊಟ ಒಲ್ಲೆ ಅಂದಾಗ ಸಾಲಿ ಮಾಮಾ ತನ್ನ ಜತೆಗೇ ಕರೆದುಕೊಂಡು ಊಟ ಮಾಡುತ್ತಿದ್ದ. ಅವನ ಸಾತ್ವಿಕ ಕೋಪ ನನ್ನ ದುಃಖವನ್ನು ಶಮನ ಮಾಡುತ್ತಿತ್ತು. “ಅವನು ಹೊಡೆದಾಗ ಮೂಡಿದ ಬಾಸುಂಡೆಗಳು ಈಗ ಅಳುಕಿ ಹೋಗಿವೆ, ಅವನು ಕಲಿಸಿಕೊಟ್ಟ ಬದುಕಿನ ಪಾಠಗಳು ನನಗಿಂದು ಕೈ ಹಿಡಿದು ನಡೆಸುತ್ತಿವೆ!”
ನನ್ನದು ಪಿ.ಯು. ಶಿಕ್ಷಣ ಮುಗಿಯಿತು. ಅದೇ ವರ್ಷ ಸಾಲಿ ಮಾಮಾನ ಮದುವೆ ಮಲ್ಲಿಕಾ ಅವರೊಂದಿಗೆ ಆಯಿತು. ಮಲ್ಲಿಕಾ ಅವರನ್ನು ತಾನು ನೌಕರಿ ಮಾಡುತ್ತಿದ್ದ ಹುಲಕೋಟಿಗೆ ತನ್ನೊಂದಿಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ನನ್ನನ್ನೂ ಕರೆದುಕೊಂಡು ಬಂದರು! ಗದಗ ಕಾಲೇಜೊಂದರಲ್ಲಿ ಪದವಿ ಶಿಕ್ಷಣ ಪಡೆದೆ. ಈ ದಿನಮಾನ ಹಾಗೂ ಪರಿಸರ ನನ್ನಲ್ಲಿ ಅಕ್ಷರ ಅರಿವು, ಸಂಸ್ಕಾರವನ್ನು ಉಂಟುಮಾಡಿದವು. ನಾನು ಪೂರಾ ಪೂರಾ ಬದಲಾದೆ. ಸಾಹಿತ್ಯದ ಬಗ್ಗೆ ಒಲವು, ಸೃಜನಾತ್ಮಕ ಅಭಿವ್ಯಕ್ತಿ ನನ್ನಲ್ಲಿ ಹೊಸ ಚೈತನ್ಯ ತುಂಬಿದವು. ಮುಂದೆ ಬಿ.ಈಡಿ, ಎಂ.ಎ, ಪಿಎಚ್.ಡಿ ನೆಟ್ -ಇತ್ಯಾದಿ ಪಡೆದುಕೊಂಡೆ. ಬದುಕಿನ ಅನುಭವವನ್ನು ಇಷ್ಟು ಗಟ್ಟಿಯಾಗಿ ಬರೆಯಲು ಕಾರಣವಾದ್ದದ್ದು, ಅವರು ನನಗೆ ನೀಡಿದ ಭಿಕ್ಷೆ-ಅಕ್ಷಯ ಪಾತ್ರೆಯಾಗಿದೆ! ಅವರೊಂದಿಗಿನ ಸುಮಾರು ಇಪ್ಪತ್ತು, ಇಪ್ಪತ್ತೈದು ವರ್ಷದ ಒಡನಾಟದ ಬಲದಿಂದ ಅವರ ವ್ಯಕ್ತಿತ್ವ ಕಣ್ಣ ಮುಂದಿನ ಬೆಳಕಿನಂತಿದೆ, ಬೆಳಕಾಗಿದೆ.
-ಡಾ. ಸದಾಶಿವ ದೊಡಮನಿ
ಕನ್ನಡ ಸಹಾಯಕ ಪ್ರಾಧ್ಯಾಪಕರು,
ಇಲಕಲ್ಲ.
*****
👆ಡಾ.ಅರ್ಜುನ ಗೊಳಸಂಗಿ
🖕ಡಾ.ಸದಾಶಿವ ದೊಡ್ಡಮನಿ