ಅನುದಿನ ಕವನ-೧೯೨ ಕವಿ: ಟಿಪಿ.ಉಮೇಶ್, ಹೊಳಲ್ಕೆರೆ. ಕವನದ ಶೀರ್ಷಿಕೆ: ಕವಿತೆಯೇ….

 

ಕವಿತೆಯೇ…

ಹೊಗಳಿಕೆ ನೆಪದಲ್ಲಿನ ಬರೀ ಸುಳ್ಳು;
ಸುಳ್ಳಿನ ಮುಸುಕಿನಲ್ಲಿಹ ಉರಿ ಸತ್ಯ!
*
ಬರೆದಾಗ
ಮನದ ಒತ್ತಡ ದಿಗಿಲುಗಳು ಸ್ಖಲನಗೊಂಡಂತಾಗಿ ಮೈಮನಗಳು ಅರ್ಧ ಮುದ;
ಓದಿಕೊಂಡ ನೀನು
ನಡು ಬಗ್ಗಿಸಿ ಕೆಳ ತುಟಿ ಕಚ್ಚಿ
ಬಿರುಗಣ್ಣಲಿ ಗದರಿಸಿದಾಗಲೇ ಪೂರ್ಣ ಹದ!
*
ವರ್ಣನೆ
ಉಪಮೆ ರೂಪಕಗಳ ಕಲೆಹಾಕಿ
ಚಂದ್ರ ತಾರೆಗಳ ಒಟ್ಟಾಕಿ
ಗಂಧ ಸುಗಂಧಗಳ ಚಿಮುಕಿಸಿ
ಜಗದೆಲ್ಲ ಹೂವುಗಳಿಂದ ಅಲಂಕರಿಸಲಾದ ಕನಸು;
ಒಂದು ಗಾಳಿಯಲೆ ಮುತ್ತಿಗೆ
ತುಂಬು ತೋಳಿನ ಗಿಲ್ಲಿಗೆ
ಮೊಣಕೈ ಸಣ್ಣ ತಿವಿತಕೆ
ಬಿಲ್ಲುಬ್ಬ ಏರು ಹೊಡೆತಕೆ
ಇಷ್ಟೆಲ್ಲ ಪದಹೊಸೆ ಕಸರತ್ತು ಮಾಡುವ ಮನಸು!
*
ವಿರಾಮ
ಕವಿ ಅಪ್ರಿಯ ಸತ್ಯಗಳ ಪ್ರಿಯವಾದ ಸುಳ್ಳುಗಳಲಿ ಹಾಡುವ ಅರ್ಧಸತ್ಯದ ದಲ್ಲಾಳಿ;
ಒಂದೇ ರಾಗವ ನೂರು ಕಡೆ ಹಾಡುವ ಸುಂದರ ಗಯ್ಯಾಳಿ!
*
ಗೊತ್ತಿದ್ದು
ಕವಿತೆ ನೀನು ನುಲಿದೆ;
ಕಣಿವೆ ಕಂದರಗಳಲಿ ಓಡಿದೆ;
ಕಾಡು ಕತ್ತಲೆಗಳಲಿ ಅಡಗಿದೆ;
ದಿಕ್ ದಿಗಂತಗಳಲಿ ತೋರಿದೆ;
ಬಿಡದೆ
ಜಡೆಯ ಸವರಿ ಕುಚ್ಚು ಹೆಣೆದೆ;
ಕೆಂಪು ಪಾದಗಳ ಹಿಡಿದು ಒತ್ತಿದೆ;
ಹಣೆಯ ಬೆವರು ಒರೆಸಿ ನೀವಿದೆ;
ಗಲ್ಲಕೊಂದು ದೃಷ್ಟಿಯಿಟ್ಟು ಸರಿದೆ….
ನಿತ್ಯ
ಎನ್ನ ಎದೆಯ ಮೇಲೆ;
ನಿನ್ನ
ಅಮರ ಕಾವ್ಯ ಲೀಲೆ!
*
ಕವಿತೆ
ನೀನು ನನ್ನ ಗೆಲಿದೆ!
ನಾನು ನಿನ್ನ ಒಲಿದೆ!!

-ಟಿಪಿ.ಉಮೇಶ್
ಹೊಳಲ್ಕೆರೆ
*****

👆ಟಿಪಿ.ಉಮೇಶ್