🖕ಧರಣೀಪ್ರಿಯೆ, ದಾವಣಗೆರೆ
ಜು.12ರಂದು ಹಿರಿಯ ಪೊಲೀಸ್ ಅಧಿಕಾರಿ, ಸಾಹಿತಿ ಶ್ರೀ ಮನಂ(ಎಂ.ನಂಜುಂಡಸ್ವಾಮಿ, ಐಪಿಎಸ್) ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಮನಕಲುಕುವ ಭಾವಚಿತ್ರ ಗಮನಿಸಿದ ಕವಯತ್ರಿ ದಾವಣಗೆರೆಯ ಧರಣೀಪ್ರಿಯೆ ಅವರು ಭಾಮಿನಿ ಷಟ್ಪದಿಯಲ್ಲಿ “ಹೊಟ್ಟೆಪಾಡು” ಹೆಸರಿನಲ್ಲಿ ಅರ್ಥಪೂರ್ಣ ಕವಿತೆ ರಚಿಸಿದ್ದಾರೆ.
ಹೊಟ್ಟೆಪಾಡು ಕವಿತೆ ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಪಾತ್ರವಾಗಿದೆ.👇
ಹೊಟ್ಟೆ ಪಾಡು
(ಭಾಮಿನಿ ಷಟ್ಪದಿಯಲ್ಲಿ)
************
ಹಸಿದ ಹೊಟ್ಟೆಯ ತುಂಬಿಕೊಳ್ಳಲು
ಬಿಸಿಲಬೇಯ್ಗೆಯ ಲೆಕ್ಕವಿಲ್ಲದೆ
ಹಸುವ ಸಿಂಗರ ಮಾಡಿ ಮಾನಿನಿ ತಾನು ತಿರುಗುತಲಿ|
ಬೆಸೆದು ಜೋಳಿಗೆ ಹೆಗಲಿಗೇರಿಸಿ
ಹೊಸೆದು ಬಂಧವ ಪದವ ಪಾಡುತ
ನಸುಕುಸಮಯದಿ ಬೇಡಿ ನಿಂದಳು ಮನೆಯ ಮುಂದಣದಿ||
ಜನರು ಕೇಳುತ ಕಷ್ಟವರಿತರು
ಮನೆಯಲಿರುವುದ ತಂದು ಹಾಕುತ
ಮನದಿ ನೆನೆದರು ಬದುಕು ಘೋರವು ಕಷ್ಟ ವಿದೆಯೆಂದು|
ದಿನವ ನೂಕುತ ಹೊಟ್ಟೆಹೊರೆಯಲು
ಧನಿಕರೆದುರಲಿ ಕೈಯಚಾಚುತ
ಬೆನಕನಿರುವನು ನಮ್ಮಕಾಯಲು ಜನಕ ಶಿವನಿರುವ||
ಕೆಲವು ವೇಳೆಯು ಸಿಗದೆ ಭಿಕ್ಷೆಯು
ನಲುಗಿಹೋಗಲು ಹಸುವು ಸಂಗಡ
ಬಲುವೆ ಸೊರಗಲು ನೋಡಿ ಮರುಗುತ ಚಿಂತೆ ಮಾಡುತಲಿ|
ಕಳೆಯಗುಂದಿದ ಮೊಗದಿ ಕುಳಿತಳು
ಬಳಿಯಲಿರದಲೆ ಕಾಸು ಕಳವಳ
ಮುಳುಗಿಹೋಗುವ ಸೂರ್ಯಕಾಂತಿಯ ನೋಡಿ ಬೆದರುತಲಿ||
-ಧರಣೀಪ್ರಿಯೆ
ದಾವಣಗೆರೆ
*****