ಬಳ್ಳಾರಿ ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗಮಂದಿರಕ್ಕೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರು ಹೆಸರು ನಾಮಕರಣ

ಬಳ್ಳಾರಿ, ಜು.16: ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಬಯಲು ರಂಗಮಂದಿರಕ್ಕೆ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್ ಅವರ ಹೆಸರು ನಾಮಕರಣ ಕಾರ್ಯಕ್ರಮ ಶುಕ್ರವಾರ ಸಂಜೆ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಮಾತನಾಡಿ
ಹಿರಿಯ ರಂಗಕಲಾವಿದೆ ನಾಡೋಜ ಡಾ.ಸುಭದ್ರಮ್ಮ ಅವರು ತಮ್ಮ ರಂಗ ಸಾಧನೆಯಿಂದ ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ಹಿರಿಯ ಕಲಾವಿದರ ಕಲೆ, ಕೊಡುಗೆ, ಹೋರಾಟಗಾರರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಬಳ್ಳಾರಿ
ನಗರದಲ್ಲಿ ಹಲವು ಸಾಧಕರ ಪುತ್ಥಳಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಗೆ ಹಿರಿಯ ಕಲಾವಿದರು ನೀಡಿದ ಸೇವೆ ಅನನ್ಯ. ನಗಾರಾಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯ ಹಿರಿಯ ಕಲಾವಿದರಾದ ಡಾ.ಜೋಳದರಾಶಿ ದೊಡ್ಡನೌಡ, ಪೈಲ್ವಾನ್ ರಂಜಾನ್ ಸಾಬ್, ಬಹದ್ದೂರ್ ಶೇಷಗಿರಿ ರಾವ್ ಅವರ ಪುತ್ಥಳಿ ನಿರ್ಮಿಸಲು ಉದ್ದೇಶಿಸಲಾಗಿದೆ. ಜತೆಗೆ ನಗರದ 21 ಪಾರ್ಕ್ ಗಳಿಗೆ ಸಾಹಿತಿ, ಕಲಾವಿದರ ಹೆಸರು ಇಡಲು ನಿರ್ಣಯಿಸಲಾಗಿದೆ. ನಾಟಕ, ಜಾನಪದ ಗೀತೆಗಳು,ಹಗಲುವೇಷ, ಸಂಗೀತ, ಸಾಹಿತ್ಯ ಒಳಗೊಂಡಂತೆ ಅಪಾರ ಸಂಸ್ಕೃತಿ ಹೊಂದಿದ ನಾಡು, ದೇಶ ನಮ್ಮದು ಎಂದು ಹರ್ಷಿಸಿದರು.
ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ
ಮಂಜಮ್ಮ ಜೋಗತಿ ಅವರು ಮಾತನಾಡಿ‌, ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗಮಂದಿರಕ್ಕೆ ನಾಡೋಜ ಸುಭದ್ರಮ್ಮ ಮನ್ಸೂರ್ ಅವರ ಹೆಸರು ನಾಮಕರಣ ಮಾಡಿರುವುದು ನಮ್ಮ ಜಿಲ್ಲೆಯ ಇಡೀ ಕಲಾವಿದರಿಗೆ ಸಲ್ಲುವ ಗೌರವ, ಡಾ. ಸುಭದ್ರಮ್ಮ ಅವರ ಶ್ರಮ‌, ಭಕ್ತಿ, ನಯ ವಿನಯ , ನುಡಿ ಮತ್ತು ವಾಕ್ಚಾತುರ್ಯ ಅವರ ಬೆಳವಣಿಗೆಗೆ ಕಾರಣ ಎಂದರು.
ನಾಟಕದಲ್ಲಿ ಎಲ್ಲರಿಗೂ ಸಮಾನವಾದ ಪ್ರಾಮುಖ್ಯತೆ ಇದೆ. ನಾವು ಮಾಡುವ ಕೆಲಸದಲ್ಲಿ ಭಕ್ತಿ ಮತ್ತು ಶ್ರದ್ಧೆ ಇದ್ದರೆ ಯಶಸ್ಸು ನಮ್ಮನ್ನು ಹಿಂಬಾಲಿಸುತ್ತದೆ. ಕಲೆಯ ಬಗ್ಗೆ ಇಂದಿನ ಯುವಪೀಳಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗಭೂಮಿಗೆ ಬರುವ ಯುವಕರು ಹವ್ಯಾಸ ಕಲಾವಿದರಾಗಿ, ರಂಗಕಲೆಯ ಜೊತೆಗೆ ಮತ್ತೊಂದು ಕೆಲಸವನ್ನು ಸಂಪಾದಿಸಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಟಿ.ಕೆ. ಗಂಗಾಧರ್ ಪತ್ತಾರ್ ಅವರ “ಅಭಿವ್ಯಕ್ತಿ ವ್ಯಕ್ತಿ ಚಿತ್ರಣ” ಕವನ ಸಂಕಲನ ಬಿಡುಗಡೆ ಮಾಡಲಾಯಿತು.
ಹಿರಿಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರುನೂರು ಕೊಟ್ರಪ್ಪ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣನವರ್, ಈರಮ್ಮ, ಹಿರಿಯ ರಂಗ ಕಲಾವಿದರಾದ ರಮೇಶ್ ಗೌಡ ಪಾಟೀಲ್, ಬಿ. ಸುಜಾತಮ್ಮ, ಪುರುಷೋತ್ತಮ ಹಂದ್ಯಾಳ್, ಡಾ. ಸುಭದ್ರಮ್ಮ ಅವರ ಕುಟುಂಬದ ಸದಸ್ಯರು ಸೇರಿದಂತೆ ಇತರರು ಇದ್ದರು.
*****