ಕವಯತ್ರಿ ಪರಿಚಯ:
ಹೊಸಪೇಟೆಯ ಕವಯತ್ರಿ ಡಾ. ಕೃಷ್ಣವೇಣಿ ಅವರು ಎಂ.ಎ, ಪಿ ಎಚ್, ಡಿ ಪದವೀಧರರು. ಹುಲಿಗೆಮ್ಮ: ಜಾನಪದದಲ್ಲಿ ಮಹಿಳಾ ಪ್ರತಿನಿಧೀಕರಣ. ಕುರಿತ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿವಿ ಪಿಎಚ್.ಡಿ ಪದವಿ ನೀಡಿದೆ.
ಬೆಂಗಳೂರಿನ ಎಸ್.ಆರ್.ಜೆ ಕಾಲೇಜ್ ,ಸಿರುಗುಪ್ಪ ಪದವಿ ಕಾಲೇಜ್ ಹಾಗೂ ಹೊಸಪೇಟೆಯ ಪಿಡಿಐಟಿ ಇಂಜಿನಿಯರ್ ಕಾಲೇಜ್ ಗಳಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಹಲವು ಲೇಖನ ಮತ್ತು ಕವಿತೆಗಳು ಹಲವು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.
ಲೇಖನಗಳು:ಆಧುನಿಕ ಜಗತ್ತು ಮತ್ತು ತಳಸಮುದಾಯಗಳು,ಬೇಡರ ಮೂಲ
ವಿಚಾರ ಸಂಕಿರಣಗಳು: ವಾಲ್ಮೀಕಿ ಸಮುದಾಯದ ಮಹಿಳೆ, ಜಾನಪದ ಮತ್ತು ಜಾಗತಿಕರಣ, ಸಮುದಾಯದ ಜೀವನಾವರ್ತನದ ಆಚರಣೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ರಾಷ್ಟ್ರಮಟ್ಟದ ಸೆಮಿನಾರ್ ಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕಂಪ್ಲಿಯ ಸೈ ಗ್ರಂಥಾಲಯದ ನಾಲ್ಕನೇ ವಾರ್ಷಿಕೋತ್ಸವದಲ್ಲಿ ಕವನ ವಾಚನ ವಾಚಿಸಿದ್ದಾರೆ , ಸಾಹಿತ್ಯ ಚಟುವಟಿಕೆ: ಕುವೆಂಪು ಜನ್ಮ ದಿನದ ಪ್ರಯುಕ್ತ ಉಪನ್ಯಾಸ, ರಾಜ್ಯೋತ್ಸವದ ಪ್ರಯುಕ್ತ ಹೊಸಪೇಟೆ ಯಲ್ಲಿ ಭಾಷಣ.
ಜಾನಪದ ಮಹಿಳಾಯಾನದಲ್ಲಿ ‘ಹುಲಿಗೆಮ್ಮ :ಮಹಿಳಾ ಪ್ರತಿನಿಧಿಕರಣ’ ಎನ್ನುವ ಲೇಖನ ಪ್ರಕಟ ಗೊಂಡಿದೆ….
ಇಂದಿನ ಅನುದಿನ ಕವನದ ಗೌರವಕ್ಕೆ ಡಾ.ಕೃಷ್ಣವೇಣಿ ಅವರ ಆಕ್ರೋಶ ಕವಿತೆ ಪಾತ್ರವಾಗಿದೆ.👇
ಆಕ್ರೋಶ
ಮನದೊಳಗಿನ ಮೌನಕ್ಕೆ
ಆಕ್ರೋಶದ ಸಿಡಿಲು,
ತುಟಿ ಬಿಡುವ ಹಂಬಲವಿದ್ದರೂ
ಬಿಡುತ್ತಿಲ್ಲವಲ್ಲ ಸಂಕೋಲೆಯ
ಹಗ್ಗಗಳು(ಬೇಡಿಗಳು ).
ಸುತ್ತಲು ಎತ್ತ ನೋಡಿದರು
ಆಕಾಶದ ಬಿಳಿ ಛಾಯೆ, ಬಾಯಾರಿಕೆಗೆ ಆಯಾಸಗೊಂಡಿವೆ.
ಬಡತನದ ಬವಣೆಗೆ ಶ್ರಿಮಂತರ
ಹುಸಿಮಾತುಗಳು ನೋಡಿ
ನಕ್ಕು ವ್ಯಂಗ್ಯ ಹೊರಸೂಸುತ್ತಿವೆ.
ಹಸಿವಿನ ಹೊಟ್ಟೆಗೆ ಕೊಡಲಿಯ
ಪೆಟ್ಟು, ಹೊಡೆತ ತಿಂದ ಬಡವನಿಗೆ ಇನ್ನೂ ಸಿಗದ ತುತ್ತು..
ತುತ್ತು ರೊಟ್ಟಿಗೆ ವರ್ಷಗಟ್ಟಲೆ
ಕಾರ್ಖಾನೆಗಳಲ್ಲಿ ದುಡಿದ
ಎಷ್ಟೋ ಎಡಗೈ, ಬಲಗೈಗಳು
ನೋವಿಗೆ ನೊಂದು ಮುಗಿಲಿನತ್ತ ತೇಲುವ ಕನಸು.
ಆ ಕನಸಿಗೆ ಸಮಾಜದ ಧ್ವನಿಗಳು ಸ್ಥಬ್ದವಾಗುತ್ತಿವೆ..
ಮಾಲೀಕರ ಸುಳ್ಳು ಆಶ್ವಾಸನೆ, ಬಡ ಬವಣೆಯ ಕಣ್ಣಲ್ಲಿ ಆಕ್ರೋಶದ ಸಿಡಿಮದ್ದು
ಸಿಡಿಲಿನತ್ತ ಸಾಗುತ್ತಿದೆ..
ದಿಗಿಲು ಬಡಿದ ಬಡ ಮನಕ್ಕೆ
ಸಿಗದ ಬೆಂಗಾವಲು,
ಮನುಷ್ಯನ ಮನಸ ಕಡಲು
ಒಂದು ಕಡೆಯಿಂದ ಮತ್ತೊಂದರೆಡೆಗೆ ಉಸುಗಿನ ಹಾಗೆ ಜಾರಿ ಹೋಗುತ್ತಿದೆ……
-ಡಾ. ಕೃಷ್ಣವೇಣಿ. ಆರ್. ಗೌಡ
ಕನ್ನಡ ಉಪನ್ಯಾಸಕರು, ಹೊಸಪೇಟೆ
*****
(ಪ್ರಕೃತಿ ಚಿತ್ರ: ಶಿವಶಂಕರ ಬಣಗಾರ, ಹೊಸಪೇಟೆ)