ಕವಯತ್ರಿ ಪರಿಚಯ:
ಭಾರತಿ ಕೇದಾರಿ ನಲವಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮಂಗಳವಾಡ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಅಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಥೆ, ಕವನ, ಚುಟುಕು, ಹಾಯ್ಕು, ರುಬಾಯಿ ರಚಿಸುವುದು ಇವರ ಪ್ರವೃತ್ತಿ.
ಭಾರತಿ ಅವರ 2 ಕವನ ಸಂಕಲನಗಳಾದ ಸಂಕಲ್ಪ ಮತ್ತು ಕಾವ್ಯಕನಸು ಈಗಾಗಲೇ ಬಿಡುಗಡೆಗೊಂಡು ಕಾವ್ಯಪ್ರಿಯರ ಮನಸೂರೆ ಗೊಂಡಿವೆ.
ತಾಲೂಕು,ಜಿಲ್ಲಾ,ರಾಜ್ಯಮಟ್ಟದ ಕವಿಗೋಷ್ಠಿ ಗಳಲ್ಲಿ ಭಾಗವಹಿಸಿ ಕವನ ವಾಚಿಸಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಳಿಯಾಳ ಘಟಕದ ಅಧ್ಯಕ್ಷರಾಗಿ
ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವುದರ ಜತೆಗೆ ವಿವಿಧ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಗಳಲ್ಲಿ ಸಂಘಟಕರಾಗಿ ಗಮನ ಸೆಳೆದಿದ್ದಾರೆ.
ಪ್ರಶಸ್ತಿಗಳು: ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸೇರಿದಂತೆ ರಾಜ್ಯಮಟ್ಟದ ಗುರುಭೂಷಣ,
ಕಮಲಾ ಹಂಪನಾ ಸಾಹಿತ್ಯ ಪುರಸ್ಕಾರ, ಸಾಧನಾ ಪ್ರಶಸ್ತಿ, ಶಿಕ್ಷಕ ಶ್ರೀ ಪ್ರಶಸ್ತಿ, ಪರಿಸರಮಿತ್ರ ಪ್ರಶಸ್ತಿ
ಸಾಹಿತ್ಯ ಮಂದಾರ,ಉತ್ತಮ ನಾಗರೀಕ ಪ್ರಶಸ್ತಿ, ಕಾರುಣ್ಯ, ಸಾಹಿತ್ಯ ಚೇತನ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ
ನಲಿಕಲಿ ಇಂಗ್ಲೀಷ್ ತರಬೇತಿ, ತಾಲೂಕಾ ಮಟ್ಟದ ಬ್ರಿಟಿಷ್ ಕೌನ್ಸಿಲ್ ತರಬೇತಿ ನೀಡಿದ್ದಾರೆ.
ಧಾರವಾಡ ಮತ್ತು ಕಾರವಾರ ಆಕಾಶವಾಣಿ ಕೇಂದ್ರಗಳಲ್ಲಿ ಕವನ ವಾಚಿಸಿದ್ದಾರೆ ಮತ್ತು ಇವರ ಸಂದರ್ಶನವೂ ಪ್ರಸಾರವಾಗಿರುವುದು ಹೆಗ್ಗಳಿಕೆ.
ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಇದರ ರಾಜ್ಯ ಸಹಕಾರ ಸಮಿತಿಯ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಭಾರತಿ ಕೇದಾರಿ ನಲವಡಿ ಅವರ ಭಾವವೀಣೆ ಕವಿತೆ ಪಾತ್ರವಾಗಿದೆ.👇
ಭಾವವೀಣೆ
ಮಾತು ಮೌನಗಳ ನಡುವೆ ನಿನ್ನ ಸವಿನೆನಪು
ಕಳೆದ ಅನು ಕ್ಷಣವು ಚಿತ್ತದಲಿ ಮೂಡಿ ಅಚ್ಚಾಗಿದೆ
ನಿನ್ನ ಹೂ ನಗೆಯ ಮುತ್ತಿನಹಾರ ಸೆಳೆದಿದೆ
ಓಲೈಸುತಿದೆ ಭಾವಲಹರಿಯ ತೆರದಿ ಇಂದು//
ಕಳೆದ ಸುಂದರ ಕ್ಷಣಗಳೀಗ ನನಸಾಗಬೇಕಿದೆ
ಕಾದಿಹೆನು ನಿನ್ನ ನೋಡಲು ಸೊಗಸಿಲ್ಲ ಬದುಕಿಗೆ
ಕಾರ್ಮುಗಿಲಿನಂತೆ ಮತ್ತೆ ಇಳೆಯ ಮಿಲನ
ಬಯಸಿದೆ ಮನವಿಂದು ನಿನ್ನಮುಂಗಾರಿನ ಪುಳಕವಾಗಿ//
ದ್ವಂದ್ವಗಳ ನಡುವೆ ಮತ್ತೆ ಅಮರವಾಗುವ ನಾವು
ಪ್ರೇಮಕಾವ್ಯದಿ ಉನ್ಮತ್ತರಾಗಿ ನಲಿಯುತ
ಬಾ ಸಖಿಯೇ! ಬೇಡ ಹುಸಿಮುನಿಸು ನಮಗೀಗ
ಸವಿಗನಸಲಿ ಒಲವ ಪಲ್ಲಕ್ಕಿಯಲಿ ಕುಳಿತು//
ಹೃದಯದರಮನೆಯ ಯುವರಾಣಿ ನೀನು ಬಾ ಒಲಿದು
ಕುಡಿನೋಟದಿ ಬಾಣ ಬೀಸಿ ಸೂಜಿಗಲ್ಲಂತೆ ಸೆಳೆದೆ
ಭಾವವೀಣೆಯ ತಂತಿ ಮೀಟಿ ಬಾಳ ನೌಕೆಗೆ
ಜೊತೆಯಾಗು ಮನದರಸಿಯೇ ಸಹಿಸೆನು ವಿರಹ ವೇದನೆ//
. -ಭಾರತಿ ಕೇದಾರಿ ನಲವಡೆ ಹಳಿಯಾಳ. *****