ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಕವಿ, ಸಂಘಟಕ, ಪುಸ್ತಕ ಪ್ರೇಮಿ ಸೈಯದ್ ಹುಸೇನ್ ಅವರು ಎರಡು ತಿಂಗಳ ಹಿಂದೆ ಕೋವಿಡ್ ಗೆ ಜೀವ ತೆತ್ತರು. ಇವರ ಸಹೃದಯಕ್ಕೆ ಮಾರು ಹೋಗದವರೇ ಇಲ್ಲ…ಜಾತ್ಯಾತೀತ ಮನಸಿನ ಸೈಯದ್ ಅವರಿಗೆ ಜು. 25 ರಂದು ಹೊಸಪೇಟೆಯಲ್ಲಿ ಸೈ ಅವರ ಸಾಹಿತ್ಯ ಮಿತ್ರರು, ಶಿಕ್ಷಕ ಬಂಧುಗಳು ನುಡಿ ನಮನ ಕಾರ್ಯಕ್ರಮ ಆಯೋಜಿಸಿದ್ದರು. ಹಲವರು ಕವಿತೆಗಳ ಮೂಲಕ ಅಕ್ಷರ ನಮನ ಸಲ್ಲಿಸಿದರು. ಕವಯತ್ರಿ, ಸಮಾಜ ಸೇವಕಿ ನೂರ್ ಜಹಾನ್ ಅವರು ‘ಸೈ’ ಎನ್ನುವ ನನ್ನ ಸ್ನೇಹಿತ ಪದ್ಯ ಓದುವ ಮೂಲಕ ನಮನ ಸಲ್ಲಿಸಿದರು.
ಕರ್ನಾಟಕ ಕಹಳೆ ಡಾಟ್ ಕಾಮ್ ನ ಕವಿ ಬಳಗದಲ್ಲಿದ್ದ ಕವಿ ಸೈಯದ್ ಹುಸೇನ್ ಅವರ ಕವಿತೆಗಳು ಅನುದಿನ ಕವನ ಕಾಲಂ ನಲ್ಲಿ ಪ್ರಕಟವಾಗಿದ್ದವು….ಇಂದಿನ ‘ಅನುದಿನ ಕವನ’ಕ್ಕೆ ಸೈ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ನೂರ್ ಜಹಾನ್ ಅವರ ‘ಸೈ ಎನ್ನುವ ನನ್ನ ಸ್ನೇಹಿತ’ ಕವನ ಪ್ರಕಟಿಸುವ ಮೂಲಕ ನಮ್ಮ ಕರ್ನಾಟಕ ಕಹಳೆಯೂ ಕವಿ, ಅಧ್ಯಾಪಕ ಸೈಯದ್ ಹುಸೇನ್ ಅವರಿಗೆ ಗೌರವ ಸೂಚಿಸುತ್ತಿದೆ.
(ಸಂಪಾದಕರು)
‘ಸೈ’ ಎನ್ನುವ ನನ್ನ ಸ್ನೇಹಿತ….
ಸ್ನೇಹಕ್ಕೆ ಮರು ಹೆಸರು ನನ್ನ ಈ ಸ್ನೇಹಿತ
ಸ್ನೇಹವನ್ನು ಗೌರವ ಭಾವದಿಂದ ಕಾಣುತ್ತಿದ್ದವರು
ಯಾರಿಗಾದರೂ ಪ್ರಶಸ್ತಿ ಸಮ್ಮಾನ ಸಿಕ್ಕಿದರೆ
ತಮಗೇ ಸಿಕ್ಕಿದಂತೆ ಸಂತೋಷ ಪಡುತ್ತಿದ್ದರು
ಸಾಹಿತ್ಯ ಸೇವೆ ಮಾಡುತಲೇ ಜೀವನದ ಸಾರ್ಥಕತೆಯನ್ನು ಕಂಡವರು
ತಮ್ಮ ವಿದ್ಯಾರ್ಥಿಗಳಲ್ಲಿ ಆದರ್ಶವನ್ನು ಬೆಳೆಸಿದವರು
ಆದರ್ಶ ಶಿಕ್ಷಕನಾಗಿ ಹೊರಹೊಮ್ಮಿದವರು
ಸಂಬಂಧಗಳನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದವರು
ತಮ್ಮ ಮಾವನನ್ನು ತಂದೆಯಂತೆ ಕಾಣುತ್ತಿದ್ದವರು
ಅವರನ್ನೇ ತಮ್ಮ ಗುರುಗಳಂತೆ ಭಾವಿಸಿದವರು
ಅವರ ಸಾಧನೆಯನು ಕಂಡು ಉಬ್ಬಿಹೋದವರು
ಸಾಹಿತ್ಯ ಅಂದರೆ ಎಲ್ಲಿಲ್ಲದ ಉತ್ಸಾಹ ಅವರಿಗೆ
ಸಾಹಿತ್ಯವನ್ನು ತುಂಬಾ ಪ್ರೀತಿಸುತ್ತಿದ್ದರು
ಬೇರೆಯವರ ಕವನಗಳನ್ನು ಕೇಳಿ ತಲೆದೂಗುತ್ತಿದ್ದರು
ಕವಿಗೋಷ್ಠಿಗಳಲ್ಲಿ ವಾಚಿಸಿ ತಮ್ಮ ಕವನ ಸಂತೋಷಪಡುತ್ತಿದ್ದರು
ಪುಸ್ತಕಗಳನ್ನು ಜೀವನವೆಂದೇ ಕಾಣುತ್ತಿದ್ದರು
ಎಲ್ಲಿ ಪುಸ್ತಕಗಳನ್ನು ಕಂಡರೂ ಎತ್ತಿ ಎದೆಗೊತ್ತಿಕೊಳ್ಳುತ್ತಿದ್ದರು
ಪುಸ್ತಕವನ್ನು ಓದಿ ಅವರ ಭಾವನೆಗಳನ್ನು ತೋರ್ಪಡಿಸುತ್ತಿದ್ದರು
ಪುಸ್ತಕಗಳ ಮೇಲಿನ ತಮ್ಮ ಅಭಿಮಾನವನ್ನು ತೋರ್ಪಡಿಸಲು
ಸಂಸಾರ ಸಹಿತ ಪುಸ್ತಕಗಳ ಸೇವೆಯನು ಮಾಡಿದರು
ಅಬ್ದುಲ್ ಕಲಾಂರವರ ಹೆಸರನ್ನು ಆ ಗ್ರಂಥಾಲಯಕ್ಕೆ ಹೆಸರಿಸಿ ಗ್ರಂಥಾಲಯದ ಗೌರವನು ಹೆಚ್ಚಿಸಿದರು
ಹೀಗಿದ್ದರು ನನ್ನ ಸ್ನೇಹಿತ ಸೈಯ್ಯದ್ ಹುಸೇನ್
ಸೈ ಎಂದೇ ಹೆಸರಾಗಿದ್ದರು ಅವರು
ನನ್ನ ಎಲ್ಲಾ ಸಾಧನೆಗಳನು ಕಂಡು ನನಗಿಂತ ತಾವೇ
ಹೆಚ್ಚು ಸಂತೋಷಪಡುತ್ತಿದ್ದರು
ಇಂತಹ ಸ್ನೇಹಿತರಿಗೆ ನನ್ನ ಈ ಕವನದ ಮೂಲಕ ಭಾವಪೂರ್ಣ ನಮನ…..ಅಕ್ಷರ ನಮನ
-ನೂರ್ ಜಹಾನ್, ಹೊಸಪೇಟೆ
👆ಸೈ ಮತ್ತಿತರ ಗಣ್ಯರ ಜತೆ ಕವಯತ್ರಿ ನೂರ್ ಜಹಾನ್
👆ಸಹೃದಯಿ ಕವಿ ದಿ. ಸೈಯದ್ ಹುಸೇನ್
*****