ಹೊಸಪೇಟೆ, ಜು. 25: ವಿಜಯನಗರ ಸಾಮ್ರಾಜ್ಯದ ಹಿರಿಮೆ ಗರಿಮೆ, ಆಡಳಿತ ಸೇರಿದಂತೆ ದಕ್ಷಿಣದ ರಾಜ್ಯಾಡಳಿತವನ್ನು ಉತ್ತರದ ವಿದ್ವಾಂಸರು ಕಡೆಗಣಿಸಿದ್ದರು ಎಂದು ಹಿರಿಯ ಇತಿಹಾಸ ತಜ್ಞರೂ ಆದ ಎಮಿರೇಟ್ಸ್ ಹಾಗೂ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಲಕ್ಷ್ಮಣ ತೆಲಗಾವಿ ಅವರು ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಬಹುಜನ ಸಾಹಿತ್ಯ ಅಕಾಡೆಮಿ ರಾಜ್ಯ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಹತ್ತು ಹಲವು ಯೋಜನೆಗಳನ್ನು ಕೈ ಗೆತ್ತಿಕೊಂಡು ವಿಜಯನಗರ ಸಾಮ್ರಾಜ್ಯದ ಕೀರ್ತಿಯನ್ನು ಪಸರಿಸುವಲ್ಲಿ ಶ್ರಮಿಸಿದೆ. ತಾವು ಸೇರಿದಂತೆ ವಿವಿಯ ಹಲವು ಸಂಶೋಧಕರು ವಿಶೇಷ ಮಾಹಿತಿಗಳನ್ನು ಸಂಶೋಧಿಸಿ ಪುಸ್ತಕಗಳನ್ನು ಪ್ರಕಟಿಸಿದೆವು ಎಂದು ತಿಳಿಸಿದರು.
ಉತ್ತಮ ವಿಚಾರಧಾರೆಗಳೊಂದಿಗೆ ಬಹುಜನ ಸಾಹಿತ್ಯ ಅಕಾಡೆಮಿ ಪ್ರತಿಭಾನ್ವಿತರನ್ನು ಗುರುತಿಸಿ ಪುರಸ್ಕರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ ಆದ ಬಹುಜನ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ.ಸಿದ್ದಗಂಗಮ್ಮ ಅವರು ಮಾತನಾಡಿ ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ.ಪ್ರತಿಭಾನ್ವಿತರನ್ನು ಗುರುತಿಸುವ ಅಕಾಡೆಮಿಯ ಯೋಜನೆಗಳ ಸದುಪಯೋಗವನ್ನು ಈ ಭಾಗದವರು ಪಡೆಯ ಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಹುಜನ ಸಾಹಿತ್ಯ ಅಕಾಡೆಮಿಯ ಮಹಿಳಾ ಘಟಕದ
ಅಧ್ಯಕ್ಷೆ ಶ್ರೀಮತಿ ಎನ್.ಡಿ.ವೆಂಕಮ್ಮ ಅವರು ಮಾತನಾಡಿ ಅಕಾಡೆಮಿಯ ರಾಜ್ಯಾಧ್ಯಕ್ಷ ಸ್ಥಾನ ನೂತನ ವಿಜಯನಗರ ಜಿಲ್ಲೆಗೆ ಅರಸಿ ಬಂದಿದೆ. ಅಕಾಡೆಮಿ ಈ ಭಾಗದ ಕಾಲೇಜುಗಳು ಹಾಗೂ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಕಾಡೆಮಿಯ ರಾಜ್ಯಾಧ್ಯಕ್ಷ ಡಾ.ಎ ವೆಂಕಟೇಶ್ ಅವರು ಮಾತನಾಡಿ ಬಹುಜನ ಸಾಹಿತ್ಯ ಅಕಾಡೆಮಿಯ ಧ್ಯೇಯೋದ್ದೇಶಗಳು ಹಾಗೂ ಕಾರ್ಯಯೋಜನೆಯ ಕುರಿತು ಮಾಹಿತಿ ನೀಡಿದರು.
ಭರತ್ ಗುಂಡಿ ಸಂಗಡಿಗರು ಪ್ರಾರ್ಥಿಸಿದರು.ಡಾ ಅಮರೇಶ ಯತಗಲ್ ಸ್ವಾಗತಿಸಿದರು. ಕನ್ನಡ ವಿವಿಯ ಸಂಗೀತ ವಿಭಾಗದ ಮುಖ್ಯಸ್ಥ ಡಾ.ಗೋವಿಂದ ಅವರು ನಿರೂಪಿಸಿದರು. ಡಾ.ಗುರುರಾಜ್ ವಂದಿಸಿದರು.
*****