ಬೆಂಗಳೂರು: ಕನ್ನಡದಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ತಾರೆ ಜಯಂತಿ ಇಂದು ಮುಂಜಾನೆ ನಿಧನಹೊಂದಿದ್ದಾರೆ.
ಜೇನುಗೂಡು ಚಿತ್ರದ ಮೂಲಕ ಕನ್ನಡ ಚಿತ್ರೋಧ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ಜಯಂತಿ ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಪ್ರತೀ ಕನ್ನಡಿಗರ ಮನೆ ಮಗಳಾಗಿದ್ದ ಜಯಂತಿ ಎಡಕಲ್ಲು ಗುಡ್ಡ, ನಾಗರಹಾವು ಚಿತ್ರದ ಒನಕೆ ಓಬವ್ವ ಪಾತ್ರಗಳ ಮೂಲಕ ಮನೆಮಾತಾಗಿದ್ದರು. ಬಳ್ಳಾರಿ ಮೂಲದ ಎವರ್ ಗ್ರೀನ್ ಹೀರೋಯಿನ್ ಜಯಂತಿಯವರ ನಿಧನ ಕನ್ನಡ ಸಿನಿಲೋಕಕ್ಕೆ ತುಂಬಲಾರದ ನಷ್ಟ.
*ಕಣ್ಮರೆಯಾದ ಮೋಹಕ ತಾರೆ, ಜಯಂತಿ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ*
ಭಾರತೀಯ ಚಿತ್ರರಂಗದ ದಿಗ್ಗಜ ಕಲಾವಿದರಲ್ಲಿ ಒಬ್ಬರಾಗಿದ್ದ ಅಭಿನಯ ಶಾರದೆ ಬಿರುದಾಂಕಿತ ಅಭಿನೇತ್ರಿ ಜಯಂತಿ ಅವರ ನಿಧನಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಜಯಂತಿ ಅವರು ಈ ಶತಮಾನ ಕಂಡ ಅತ್ಯಂತ ಜನಪ್ರಿಯ ಮತ್ತು ಮೋಹಕ ನಟಿ ಎಂದು ಹೆಸರು ಮಾಡಿದವರು ,ಅನೇಕ ಮರೆಯಲಾಗದ ಚಲನ ಚಿತ್ರಗಳಲ್ಲಿ ಅಭಿನಯಿಸಿ ಚಿತ್ರಪ್ರೇಮಿಗಳ ಮನಸೂರೆಗೊಂಡಿದ್ದರು.
ಮೂಲತ: ಬಳ್ಳಾರಿ ಜಿಲ್ಲೆಯವರಾದ ಜಯಂತಿ 1963 ರಲ್ಲಿ ಜೇನುಗೂಡು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ಕಮಲಕುಮಾರಿ ಆಗಿದ್ದ ಅವರು ಜಯಂತಿ ಆಗಿ ಬೆಳೆದು ಕನ್ನಡದ ಚಲನಚಿತ್ರರಂಗದ ಮೇರು ನಟಿಯಾಗಿ ಪರಿವರ್ತನೆಯಾದ ಸಂಗತಿಯೇ ಒಂದು ಅದ್ಭುತ.
ಡಾ.ರಾಜಕುಮಾರ್ ಅವರೊಂದಿಗೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ ಹೆಗ್ಗಳಿಕೆ ಜಯಂತಿ ಅವರದು. ಚಂದವಳ್ಳಿಯ ತೋಟ ದಿಂದ ಬಹದ್ದೂರ್ ಗಂಡು ವರೆಗೆ ಅವರು ರಾಜ್ ಅವರೊಂದಿಗೆ ನಟಿಸಿದ ಚಿತ್ರಗಳು ಸದಾ ಮನದಲ್ಲಿ ಅಚ್ಚಳಿಯದೆ ಉಳಿದಿದೆ.
ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಅವರ ಅಭಿನಯ ಸಾರ್ವಕಾಲಿಕ ಶ್ರೇಷ್ಠ ಎಂದು ಪರಿಗಣಿಸಲ್ಪಟ್ಟಿದೆ.
ಜಯಂತಿ ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅದ್ಭುತ ಕಲಾವಿದೆಯನ್ನು ಕಳೆದುಕೊಂಡಿದೆ, ಅವರು ಮರೆಯಾದರೂ ಅವರ ಚಿತ್ರಗಳ ಮೂಲಕ ಅವರು ಸದಾ ಚಿತ್ರ ಪ್ರೇಮಿಗಳ ಹೃದಯದಲ್ಲಿ ಅಮರ ರಾಗಿರುತ್ತಾರೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
*****