ಕವಿ, ಅಧ್ಯಾಪಕ ಸೈಯದ್ ಹುಸೇನ್ ಅವರ ಎಂ.ಎ ಸಹಪಾಠಿ, ಆತ್ಮೀಯ ಗೆಳೆಯ ಉಪನ್ಯಾಸಕ ಹೊಸಪೇಟೆಯ ಡಾ. ದಯಾನಂದ ಕಿನ್ನಾಳ್ ಅವರು ಸೈ ಕುರಿತು ರಚಿಸಿದ ಕವನವನ್ನು ಭಾನುವಾರ ಹೊಸಪೇಟೆಯಲ್ಲಿ ಆಯೋಜಿಸಿದ್ದ ಸೈ ನುಡಿನಮನ ಕಾರ್ಯಕ್ರಮದಲ್ಲಿ ವಾಚಿಸುತ್ತಿದ್ದಾಗ ನೆರೆದಿದ್ದ ಸಭಿಕರ ಕಣ್ಣುಗಳು ತೇವಗೊಂಡಿವೆ. ಕೆಲವರು ಬಿಕ್ಕಳಿಸಿದ್ದಾರೆ.
ಈ ‘ಹೇಗೆ ಮರೆಯಲಿ ಸೈ ನಿನ್ನ…’ ಕವಿತೆ ಇಂದಿನ ‘ಅನುದಿನ ಕವನ’ ದಲ್ಲಿ ‘ಅಕ್ಷರ ನಮನ’ದ ರೂಪದಲ್ಲಿ ಪ್ರಕಟವಾಗಿದೆ.👇
ಹೇಗೆ ಮರೆಯಲಿ ಸೈ ನಿನ್ನ…
ಕೊರೊನಾ ಪರೀಕ್ಷೆಯಲಿ ಫೇಲಾದೆಂದು ಸೈ ಎನ್ನಲೆ
ಸೈನ ಸೋಲಿಸಿ ಕೊರೊನಾ ಗೆದ್ದಿತೆಂದು ಸಹಿ ಹಾಕಲೆ
ಮಗಳ ಕರೆಗೆ ಕರುವಿನಂತೆ ಓಡೋಡಿ ತಾ ಬಂದೆನು
ಆಸ್ಪತ್ರೆಲಿ ಕೂತಿದ್ದೆ ಹೇದುಸಿರು ಬಿಟ್ಟು ಚೆಲ್ಲಿ ಕೈಗಳನು
ಬಾ ಅಣ್ಣ ಎಂದು ಕೈಜೋಡಿಸಿದ ನಿನ್ನ ನಮನವನು
ಹೇಗಾದರು ಮಾಡು ಎಂದು ಗೋಗರೆದ ಕಣ್ಗಳನು
ಹೇಗೆ ಮರೆಲಿ ನಿನ್ನ ನಿನ್ನನು ಕಾಡಿದ ಕೊರನಾವನು
ಶರಣು ಎಂದಿದ್ದಕ್ಕೆ ನಾ ಶರಣುಶರಣಾರ್ಥಿ ಎನಬೇಕಿತ್ತು
ಹೇಳಲು ನಿನ್ನ ಅವಸ್ಥೆ ಕಂಡ ನನಗೆ ಪುರಸೊತ್ತೆಲ್ಲಿತ್ತು
ತಡಬಡಿಸಿ ಫೋನಾಯಿಸಿದೆ ಕಂಡಕಂಡವರಿಗೆ ಸತ್ತು
ವೆಂಟಿಲೇಷನ್ ಬೆಡ್ಗಾಗಿ ಅಲೆದೆ ಹತ್ತಿಪ್ಪತ್ತು ಸುತ್ತು
ಹೇಗೆ ಮರೆಲಿ ನಿನ್ನ ನಿನ್ನನು ಕಾಡಿದ ಕೊರೊನಾವನು
ಏನು ಮಾಡಿದ್ರೂ ನಿನ್ನನ್ನು ಕಳೆದುಕೊಂಡುಬಿಟ್ಟೆನಲ್ಲ
ಮುಖದೋರದೆ ಬಾರದೂರಿಗೆ ಹೋಗೆ ಬಿಟ್ಟೆಯಲ್ಲ
ಮನೆ ಕಟ್ಟಿ ಅಂದದ ಸಂಸಾರ ಹೂಡಬೇಕೆಂದಿದ್ದೆಲ್ಲ
ಮಕ್ಕಳೀರ್ವರ ಓದು ಮದುವೆ ಮುಗಿಸುವುದಿತ್ತಲ್ಲ
ಹೇಗೆ ಮರೆಲಿ ನಿನ್ಮ ನಿನ್ನನು ಕಾಡಿದ ಕೊರೊನಾವನು
ನಗುತ್ತ ದೋಸ್ತ್ ಬುಕ್ ಪ್ರಕಟಿಸಬೇಕೆಂದಿದ್ದೇನೆಂದೆ
ಮುಖಪುಟ ಮುನ್ನುಡಿ ಮುದ್ರಣಕೆಲ್ಲ ತಂದಿರಿಸಿದೆ
ಕಣ್ತುಂಬಿಕೊಳಲು ಅಳಿಯಮಾವ ಇಬ್ಬರೂ ಇಲ್ಲೊ
ಮಡದಿ ಮಕ್ಕಳ ಕಣ್ಣಲ್ಲಿ ನೀರು ತರಿಸಿದೆಯಲ್ಲೊ
ಹೇಗೆ ಮರೆಲಿ ನಿನ್ನ ನಿನ್ನನು ಕಾಡಿದ ಕೊರೊನಾವನು
ಸೈ ಗ್ರಂಥಾಲಯ ಕಟ್ಡಿ ಕಲಾಂರ ಹೆಸರು ಮೆರೆಸಿದೆ.
ಜೋಳಿಗೆ ಕಟ್ಟಿ ಜಂಗಮನಂತೆ ಊರೂರು ಅಲೆದೆ
ಪುಸ್ತಕ ಪ್ರೀತಿ ಎಂದರೇನೆಂಬುದ ಮನನ ಮಾಡಿದೆ
ಎಂತೆಂಥವರನು ಕರೆದು ಮಾನಸಮ್ಮಾನ ಮಾಡಿಸಿದೆ
ಹೇಗೆ ಮರೆಲಿ ನಿನ್ನ ನಿನ್ನನು ಕಾಡಿದ ಮಾರಿಯನು
-ಡಾ.ದಯಾನಂದ ಕಿನ್ನಾಳ್
ಹೊಸಪೇಟೆ
*****