ತಾಯಿ ತುಂಗಭದ್ರೆ
(ಭಾಮಿನಿ ಷಟ್ಪದಿಯಲ್ಲಿ)
ತಾಯಿ ತುಂಗಾ ಭದ್ರೆ ಹರಿದಳು
ಬಾಯಿ ಬಿಡುತಲಿ ನಿಂದು ನೋಡಲು
ಮಾಯಿ ಸುಂದರವಾಗಿ ಹರಿದಳು ದೃಶ್ಯ ಕಣ್ತುಂಬಿ|
ತಾಯಿ ಗಂಗೆಯ ಪೂಜೆ ಮಾಡಲು
ಕಾಯುತಿರುವಳು ನಮ್ಮ ನಾಡನು
ಜಾಯಮಾನಕು ಜನರು ಕುಡಿಯಲು ಜಲವ ದೊರಕಿಸುತ||
ವರುಷಧಾರೆಗೆ ಹಿಗ್ಗಿ ಕುಣಿಯುತ
ಮೆರೆದು ಸಂತಸದಿಂದ ನಲಿದಳು
ವರಿಸಿ ಭೂರಮೆ ನಲ್ಲನಪ್ಪಗೆಯಲ್ಲಿ ಮಿಂದಿರಲು|
ಸುರಿದ ಮುತ್ತಿನಹನಿಯರಾಶಿಯ
ಭರದಿಸೆರಗಲಿ ಪಿಡಿದುಕೊಂಡಳು
ಹರಿಸಿಹೊಳೆಯನು ಖುಷಿಯ ಪಟ್ಟಳು ತಾಯಿ ನಗುನಗುತ|
ನಾಡ ಜನತೆಗೆ ನೀರು ಕೊಡುತಲಿ
ನೋಡ್ವ ಮನದಲಿ ನೆನಪನುಳಿಸುತ
ಕೂಡಿ ಬಾಳುವ ಪಾಠಕಲಿಸುತ ಸೊಬಗನೀಡುತಲಿ|
ಕಾಡಿಬೇಡದೆ ವರವನೀಡುತ
ಬಾಡಿನಿಂದಿಹ ಫಸಲಬದುಕಿಸಿ
ಹಾಡಿಹೊಗಳುವತೆರದಿ ಗಂಗೆಯು ಹಾಲ ಹೊಳಪಂತೆ||
– ಧರಣೀಪ್ರಿಯೆ ದಾವಣಗೆರೆ
*****