ಬಳ್ಳಾರಿ, ಜು.30: ಪತ್ರಿಕಾ ದಿನಾಚರಣೆಯನ್ನು ಸಮಾಜ, ಸಂಘ ಸಂಸ್ಥೆಗಳು ಆಯೋಜಿಸಿ ಪತ್ರಕರ್ತರನ್ನು ಗೌರವಿಸಬೇಕು ಎಂದು ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾಭವನದಲ್ಲಿ ಬಳ್ಳಾರಿ ಜಿಲ್ಲಾ ಪತ್ರಕರ್ತರು ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹೆಚ್ಚಿನ ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ. ಇವರಿಗೆ ಸರಕಾರದ ಸೌಲಭ್ಯಗಳು ದೊರೆಯಬೇಕು. ಸರಕಾರ ಇವರಿಗೆ ನಿವೇಶನ ನೀಡಬೇಕು. ಆರೋಗ್ಯ ವಿಮೆಯನ್ನು ಒದಗಿಸ ಬೇಕು ಎಂದು ಹೇಳಿದರು.
ಯುವ ಪತ್ರಕರ್ತರು ಧೈರ್ಯದಿಂದ ಅನ್ಯಾಯ, ಅಕ್ರಮಗಳ ವಿರುದ್ಧ ಬರೆಯಬೇಕು. ಶ್ರದ್ಧೆ,ಪರಿಶ್ರಮದಿಂದ ಕಾರ್ಯನಿರ್ವಹಿಸಬೇಕು. ಸತ್ಯವನ್ನೇ ಹೇಳ ಬೇಕು ಎಂದ ಮಂಜಮ್ಮ ಈಚೆಗೆ ತಾವು ಬಳ್ಳಾರಿಯಲ್ಲಿ ನೀಡದ ಹೇಳಿಕೆಯನ್ನು ತಿರುಚಿ ಕೆಲವು ಪತ್ರಕರ್ತರು ವರದಿ ಮಾಡಿರುವುದನ್ನು ಆಕ್ಷೇಪಿಸಿದರು.
ತಾವು ಯಾವುದೇ ಪ್ರಶಸ್ತಿ, ಅಧಿಕಾರಕ್ಕೆ ಬೆನ್ನು ಹತ್ತಿಲ್ಲ, ನನಗೆ ಪ್ರಶಸ್ತಿಗಳ ಹಮ್ಮು ಬಿಮ್ಮು ಇಲ್ಲ. ಈಗಲೂ ಸರಳ ಜೀವನ ನಡೆಸುತ್ತಿರುವೆ. ಸಾಮಾಜಿಕಜಾಲ ತಾಣದಲ್ಲಿ ಗಣ್ಯರೊಬ್ಬರು ತಮ್ಮ ಕುರಿತು ಆಡಿದ ಮಾತುಗಳು ನೋವನ್ನುಂಟು ಮಾಡಿದವು ಎಂದು ಗದ್ಗಿತರಾದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ್ ಅವರು ಮಾತನಾಡಿ, ಸಮಾಜವನ್ನು ತಿದ್ದುವುದಕ್ಕೆ ಹುಟ್ಟಿಕೊಂಡ ಪತ್ರಿಕೆಗಳು ಬದಲಾದ ಕಾಲ ಘಟ್ಟದಲ್ಲಿ ಉದ್ಯಮವಾಗಿ ವಿಭಿನ್ನವಾಗಿ ರೂಪುಗೊಂಡಿವೆ. ಅನೇಕ ಸವಾಲುಗಳ ಮಧ್ಯೆ ಜನರಿಗೆ ಮಾಹಿತಿಯನ್ನು ನೀಡುವ ಕಾರ್ಯ ಪತ್ರಿಕೆಗಳು ಮುಂದುವರೆಸಿವೆ ಎಂದು ಶ್ಲಾಘಿಸಿದರು.
ವರದಿಗಳು ಸತ್ಯ, ನಿಖರತೆಯಿಂದ ಕೂಡಿರಬೇಕು, ಪತ್ರಕರ್ತರು ಸಮಾಜ ಮುಖಿಯಾಗಿರಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎ. ರಾಮಲಿಂಗಪ್ಪ ಅವರು ಮಾತನಾಡಿ, .
ಮಾಧ್ಯಮಗಳಲ್ಲಿ ಪ್ರಕಟವಾಗುವ ಕುಂದು ಕೊರತೆ, ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ವರದಿಗಳನ್ನು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ವಾರ್ತಾ ಇಲಾಖೆ ತಂದು ಪರಿಹಾರಕ್ಕೆ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.
ಜಿಲ್ಲೆಯ 250 ಕ್ಕೂ ಹೆಚ್ಚು ವರದಿಗಾರರಿಗೆ ಕೋವಿಡ್ ಲಸಿಕೆ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಪತ್ರಿಕೆಗಳ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ನಿಂದಾಗಿ ಪತ್ರಿಕೆಗಳನ್ನು ನಡೆಸಿಕೊಂಡು ಹೋಗುವುದು ಸಾಹಸವೇ ಸರಿ. ಸಂಕಷ್ಟಗಳ ನಡುವೆಯೂ ಪತ್ರಿಕೆಗಳು ನಡೆಸಿಕೊಂಡು ಹೋಗುವುದು ಶ್ಲಾಘನೀಯ ಕಾರ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತಾಡಿದ ಹಿರಿಯ ವರದಿಗಾರ ಎನ್ ವೀರಭದ್ರಗೌಡ ಅವರು ಮಧ್ಯಮ ಕ್ಷೇತ್ರ ಇಂದು ವಿಭಿನ್ನ ಆಯಾಮಗಳನ್ನು ಕಂಡುಕೊಂಡಿದ್ದರೂ ಮುದ್ರಣ ಮಾಧ್ಯಮಕ್ಕೆ ತನ್ನದೇ ಆದ ಮಹತ್ವವಿದೆ. ಪತ್ರಿಕೆಗಳಲ್ಲಿ ವಿವರವಾದ ವರದಿಯನ್ನು ಓದಿದಾಗಲೇ ಓದುಗರಿಗೆ ಸಂತೃಪ್ತಿ ಎಂದರು.
ಹಿರಿಯ ಪತ್ರಕರ್ತ ಎಂ.ಅಹಿರಾಜ್ ಮಾತನಾಡಿ ಪತ್ರಿಕಾ ದಿನಾಚರಣೆಯನ್ನು ‘ನಮ್ಮ ಹಬ್ಬ’ ವಾಗಿ ಪತ್ರಕರ್ತರು ತಮ್ಮ ಕುಟುಂಬದ ಸದಸ್ಯರೆಲ್ಲ ಸೇರಿ ಆಚರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವರದಿಗಾರರು ಬೆತ್ತಲಾಗಿರಬೇಕು ಅಂದರೆ ಯಾವುದೇ ಮುಲಾಜುಗಳುಗೆ ಒಳಗಾಗದೆ ವರದಿಗಳನ್ನು ಪ್ರಕಟಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಶಶಿಧರ ಮೇಟಿ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ. ಕನ್ನಡ ಪ್ರಭದ ಹಿರಿಯ ವರದಿಗಾರ ಕೆ.ಎಂ.ಮಂಜುನಾಥ್ ಮಾತನಾಡಿದರು. ಪತ್ರಕರ್ತ ಸಂಗನಕಲ್ಲು ವೆಂಕೋಬಿ ಸೇರಿದಂತೆ ಹಿರಿಯ ಕಿರಿಯ ಪತ್ರಕರ್ತರು ಉಪಸ್ಥಿತರಿದ್ದರು. ಕಲಾವಿದ, ಗಾಯಕ ಜಡೇಶ್ ಅವರು ಪ್ರಾರ್ಥಿಸಿದರು, ಸುವರ್ಣ ಟಿವಿ ಜಿಲ್ಲಾ ವರದಿಗಾರ ನರಸಿಂಹಮೂರ್ತಿ ಕುಲಕರ್ಣಿ ಸ್ವಾಗತಿಸಿದರು ಕನ್ನಡ ಪ್ರಭದ ಛಾಯಚಿತ್ರಗಾರ, ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ನಿರೂಪಿಸಿದರು.