ಅನುದಿನ ಕವನ-೨೧೧, ಕವಯತ್ರಿ:ಆಶಾ ದೀಪ, ಬೆಂಗಳೂರು ಕವನದ ಶೀರ್ಷಿಕೆ: ನಿಶಬ್ಧ

ನಿಶಬ್ಧ

ಸ್ವಲ್ಪ ಹೊತ್ತು ನಿಶಬ್ಧವಾಗಿರೋಣ
ಅಲ್ಲಿ ಯಾರೊ ಬಣ್ಣಗಳನ್ನು
ಕಲಿಸುತ್ತಿದ್ದಾರೆ
ಆ ಚಿತ್ರವನ್ನು ಪೂರ್ತಿಯಾಗಿಸೋಣ

ಸ್ವಲ್ಪ ಹೊತ್ತು ನಿಶಬ್ಧವಾಗಿರೋಣ
ಅವನು ಯಾರೋ
ಉಳಿಯನ್ನು ಕೈಯಲ್ಲಿ ಹಿಡಿದ್ದಿದ್ದಾನೆ
ಬಂಡೆಕಲ್ಲನ್ನು ಶಿಲ್ಪವಾಗಿಸೋಕೆ
ಆ ಶಿಲ್ಪವನ್ನು ಕೆತ್ತಿಸೋಣ

ಸ್ವಲ್ಪಹೊತ್ತು ನಿಶಬ್ಧವಾಗಿರೋಣ
ಆ ಅನಂತ ಸಾಗರವೂ
ಆಕಾಶದೊಂದಿಗೆ ತನ್ನ
ಅಲೆಗಳೊಂದಿಗೆ ಮೊರೆ ಇಡುತ್ತಿದೆ
ಆ ಮೊರೆಯನ್ನು
ಕೇಳೋಣ

ಸ್ವಲ್ಪಹೊತ್ತು ನಿಶಬ್ಧವಾಗಿರೋಣ
ಕಲ್ಲು ಬಂಡೆಗಳನ್ನು
ಸೀಳಿಕೊಂಡು ಜಲಪಾತವು
ಪ್ರವಹಿಸುತ್ತಿದೆ
ಆ ಜುಳು ಜುಳು ನಾದವನ್ನು
ಮನಸ್ಸಿನ ಕಿವಿಕೊಟ್ಟು ಕೇಳೊಣ

ಸ್ವಲ್ಪಹೊತ್ತು ನಿಶಬ್ಧವಾಗಿರೋಣ
ಕಾಡಿನ ತುಂಬಾ ಬೆಳದಿಂಗಳು
ಚೆಲ್ಲುತ್ತಿದೆ
ಆ ಬೆಳದಿಂಗಳನ್ನು ಬೊಗಸೆ ಹಿಡಿದು
ತುಂಬಿಸಿಕೊಳ್ಳೋಣ

ಸ್ವಲ್ಪಹೊತ್ತು ನಿಶಬ್ಧವಾಗಿರೋಣ
ಅಲ್ಲಿ ಯಾವುದೋ ಬೀಜ
ಮೊಳಕೆಯೊಡೆಯುತ್ತಿದೆ
ಆ ಚಿಗುರನ್ನು
ಕಾಯೋಣ

ಸ್ವಲ್ಪಹೊತ್ತು ನಿಶಬ್ಧವಾಗಿರೋಣ
ಅಲ್ಲಿ ಯಾರೋ
ವಿಮುಕ್ತಿ ಗೀತೆಯನ್ನು
ಹಾಡುತ್ತಿದ್ದಾರೆ
ಮನಸ್ಸಿನ ಕಿವಿ ಕೊಟ್ಟು
ಹೃದಯದಿಂದ ಕೇಳೋಣ

-ಆಶಾದೀಪಾ, ಬೆಂಗಳೂರು
*****