ಅನುದಿನ ಕವನ-೨೧೫, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕಾವ್ಯ ಪ್ರಕಾರ: ಗಜಲ್ ರಾಗ ಸಂಯೋಜನೆ& ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ

ಗಝಲ್

ಎನ್ನ ಹೃದಯದಲ್ಲಿ ಪ್ರೀತಿ ಅರಳಿ ಮೂಡಿದಾಗ
ಮೊದಲು ಕಂಡ ಕನ್ಯೆಯು ನೀನಲ್ಲವೇ?                      ನನ್ನ ಗೆಳತಿ //

ಮನಸ್ಸು – ಮನಸ್ಸುಗಳು ಒಂದಾಗಿ ಸಮ್ಮತಿಸಿ
ಎನ್ನ ಕೈಯ ತಾಳಿಗೆ ಕೊರಳೊಡ್ಡಿದವಳು ನೀನಲ್ಲವೇ ?    ನನ್ನ ಸತಿ //

ಮನೆ – ಮನದ ಬಾಗಿಲು ತೆರೆದು ಬಲಗಾಲಿಟ್ಟು
ಒಳಬಂದು ದೀಪ ಬೆಳಗಿದವಳು ನೀನಲ್ಲವೇ ? ನನ್ನಸಂಗಾತಿ //

ಭವಿಷ್ಯದಲ್ಲಿ ಭದ್ರ ಭರವಸೆಗಳ ತುಂಬಿ
ಕರದಲ್ಲಿ ಕರವಿಟ್ಟು ನಡೆಯೋಣವೆಂದವಳು ನೀನಲ್ಲವೇ ? ನನ್ನ ಸುಮತಿ //

ಏಳು – ಬೀಳುಗಳ ಅರ್ಥೈಸಿಕೊಂಡು ಸರಿಯಾದ ದಾರಿಯಲ್ಲಿ
ನಡೆಯಲು ಸಹಕರಿಸಿದವಳು ನೀನಲ್ಲವೇ ?                 ನನ್ನ ಮನೆಯೊಡತಿ //

ಮಕ್ಕಳ ಬೇಕು ಬೇಡಗಳೊಂದಿಗೆ ನನ್ನನ್ನೂ ಮಗುವಿನಂತೆ ಪೋಷಿಸಿ, ಸಹಿಸಿಕೊಂಡವಳು ನೀನಲ್ಲವೇ ?                ನನ್ನ ಮನದೊಡತಿ //

ಕರದಲ್ಲಿ ಕರವಿಟ್ಟು ನೀನಿಡುವ ಹೆಜ್ಜೆಗೆ ಜೊತೆ –    ಜೊತೆಯಲ್ಲಿ
ನಾನೂ ಬರುವೆ ಎಂದು ಭರವಸೆ ತುಂಬಿದವಳು  ನೀನಲ್ಲವೇ? ನನ್ನ ಹೆಂಡತಿ //

👆ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ