ಬೆಲೆಯಿಲ್ಲ ಸುರಿವ ಬೆವರಿಗೆ….
ಜಾತಿ ಅನ್ನುವ ಪೆಡಂಭೂತ
ತಬ್ಬಿಕೊಂಡಿದೆ ಕಬಂಧ ಬಾಹುಗಳ ಚಾಚಿ
ತನ್ನದೇ ಮೇಲು ಕೀಳಿನ ಹಾಸಿಗೆಯ ಹಾಸಿ.
ಮನಸುಗಳ ನಡುವೆ ವೈರುಧ್ಯ
ಹಸಿಮಾಂಸಕ್ಕೆ ಕಚ್ಚಾಡುವ ಹದ್ದುಗಳು
ಹಾಕುತ್ತಿದ್ದಾರೆ ಜಾತಿ ಮರಕ್ಕೆ ತಾರತಮ್ಯದ ಗೊಬ್ಬರ.
ಮಿತಿಮೀರಿದ ಶೋಷಣೆಯ ವರ್ತನೆ
ಘಾತುಕ ಶಕ್ತಿಗಳ ಅಟ್ಟಹಾಸದ ಕ್ರೂರತೆ
ಒಳಗೊಳಗೆ ಕುದ್ದು ದಹಿಸುವ ದ್ವೇಷ್ಯಾಗ್ನಿ.
ಎದೆಹಾಲು ಬೇಡಿ ಅಳುವ ಮಕ್ಕಳು
ಹೊಟ್ಟೆಗನ್ನವಿಲ್ಲದೆ ಎದೆಹಾಲು ಬತ್ತಿದ ತಾಯಿ
ಅಟ್ಟಹಾಸದಿ ಮೆರೆವ ಬಡತನದ ಕೆನ್ನಾಲಿಗೆ.
ಬೆಲೆಯಿಲ್ಲ ಸುರಿವ ಬೆವರಿಗೆ
ದುಡಿದರು ಬದುಕು ಬಲು ಹೀನ
ದುಡಿದು ದೇಹವಾಯಿತು ಅಸ್ಥಿ ಪಂಜರ.
ಹರಿದಂಗಿಯೊಳಗಿಂದ ಇಣುಕುವ ದೇಹ
ಕಟ್ಟಿದ ಕನಸಿನಲ್ಲಿ ನಿರಾಸೆಯ ಕರಿನೆರಳು
ಅವ್ಯವಸ್ಥೆಯ ಹಗ್ಗದಿಂದ ಕಟ್ಟಿದ ಕೈಗಳು.
ಅನ್ನಕ್ಕಾಗಿ ಕೈಯೊಡ್ಡಿ ನಿಂತ ಕರುಳ ಕುಡಿ
ದುಡಿದು ದಣಿದು ಬಂದ ಖಾಲಿ ಕೈಗಳು
ಮನದಲ್ಲೆ ನೋವು ನುಂಗುವ ಅಸಹಾಯಕತೆ.
ಉರಿವ ಜಾತಿ ಭೇದಭಾವ ದಳ್ಳುರಿ
ಬಲಹೀನರ ದಹಿಸಿ ನುಂಗುವ ಕೆನ್ನಾಲಿಗೆ
ಬದುಕು ಸುಟ್ಟು ಬೂದಿ ಮುಚ್ಚಿದ ಕೆಂಡ.
-ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಪ್ರಾಧ್ಯಾಪಕರು, ಸರಕಾರಿ ಪದವಿ ಕಾಲೇಜು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಯಾದಗಿರಿ.
*****