ಅನುದಿನ ಕವನ-೨೨೭. ಕವಿ: ಎ. ಎನ್ ರಮೇಶ್ ಗುಬ್ಬಿ, ಕೈಗಾ ಕವನದ ಶೀರ್ಷಿಕೆ: ಪೂರ್ಣ ಶರಣಾಗತಿ…!

ನೀವು ತಪ್ಪದೇ ಓದಲೇಬೇಕಾದ ಕವಿತೆ.. ಏಕೆಂದರೆ ಇಂತಹವರನ್ನು ನಿಮ್ಮ ಬದುಕಿನಲ್ಲಿ ನೋಡೇ ಇರುತ್ತೀರ…”

ಮೋಡದ ಮರೆಯಿಂದಲೇ ಜಗ ಬೆಳಗುವ ಸೂರ್ಯನಂತೆ, ಎಲೆ ಮರೆಯ ಕಾಯಿಯಂತೆ ಇದ್ದು ಲೋಕಕೆ ಬೆಳಕಾಗುವ, ಇತರರಿಗೆ ಸ್ಫೂರ್ತಿಯಾಗುವ ಸಾಧಕರ ಕುರಿತಾದ ಕವಿತೆಯಿದು. ಇಂದಿಗೂ ನಿಜಸಾಧನೆಗೆ ನೆಲೆ, ಬೆಲೆ, ಸೆಲೆ ಇಂತಹವರಿಂದಲೇ. ಇವರೆದುರು ಕೈಜೋಡಿಸಿ ಸಂಪೂರ್ಣ ಶರಣಾಗುವುದೇ ಇಂತಹ ಮೇರುವ್ಯಕ್ತಿತ್ವಗಳಿಗೆ ನಾವು ಸಲ್ಲಿಸುವ ಗೌರವ. ಏನಂತೀರಾ.?”.
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ👇

ಪೂರ್ಣ ಶರಣಾಗತಿ..!
ಎಲ್ಲ ತಿಳಿದೂ ಏನೂ ಅರಿಯದಂತಿರುವ
ಸಕಲವನೂ ಸಾಧಿಸಿ ಸಾಮಾನ್ಯರಂತಿರುವ
ಮೇರುಶೃಂಗವೇರಿ ಶಿರ ತಿರುಗದಂತಿರುವ
ಶಿಖರದಲಿದ್ದರೂ ಶಿರಬಾಗಿ ನಡೆಯುವ
ಸಾಧಕ ಮಹಾನುಭಾವರ ಕಂಡಾಗಲೆಲ್ಲಾ…

ಸಹಸ್ರಕೋಟಿ ಪ್ರಭೆಗಳ ಸೂರ್ಯನೆದುರು
ನಾಚಿ ನಿಲ್ಲುವ ಅತಿಸಣ್ಣ ಕಿರುಹಣತೆಯಂತೆ
ಅಪಾರ ಜಲರಾಶಿಯ ಅಂಬುಧಿಯೆದುರು
ಬೆರಗಾಗುವ ಸಣ್ಣದೊಂದು ಮಳೆಹನಿಯಂತೆ
ನಿಬ್ಬೆರಗಾಗಿ ಕುಬ್ಜನಾಗಿ ಕಣ್ಣರಳಿಸಿ ನಿಲ್ಲುವೆ.!

ಸುದ್ದಿಯಾಗಲು ಬಡಿದಾಡುತ ಹಾರಾಡುವ
ಬೀಗಿ ಬಡಬಡಿಸುವ ಖಾಲಿಕೊಡಗಳ ನಡುವೆ
ಸದ್ದಿಲ್ಲದೆ ಸಾಧನೆ ಮಾಡುತಲಿ ಮುನ್ನಡೆವ
ತುಳುಕದೇ ಸಾಗುವ ತುಂಬುಬಿಂದಿಗೆಗಳೆದುರು
ಅಕ್ಷರಶಃ ದಂಗಾಗಿ ಅಚ್ಚರಿಯಲಿ ಮೂಕನಾಗುವೆ.!

ಪ್ರತಿಬಾರಿ ನಿಜಸಾಧಕರೆದುರು ನಿಂತಾಗಲೆಲ್ಲಾ
ವಿನಯ ವಿನಮ್ರತೆಯಲಿ ಮುದುಡಿಬಿಡುತ್ತೇನೆ
ಒಳಗೊಳಗೆ ತಡಬಡಿಸಿ ತಲ್ಲಣಗೊಳ್ಳುತ್ತೇನೆ
ಬಾನೆತ್ತರ ಬೆಳೆದರೂ ಬಾಗುವ ವ್ಯಕ್ತಿತ್ವದೆದುರು
ಮಾತುಗಳಿರದೆ ಮೌನವಾಗಿ ಶರಣಾಗುವೆ.!

ಕಲಿತಷ್ಟೂ ಕಲಿಕೆಯಲೇ ಬಾಳ ಕಳೆಯುವ
ಜಗ ಬೆಳಗಿಯೂ ಕತ್ತಲಲ್ಲೇ ಉಳಿಯುವ
ಪ್ರಚಾರ ಹೆಸರುಗಳ ಹಂಗಿಲ್ಲದೇ ಹೊಳೆವ
ನಿತ್ಯ ಸತ್ಯ ಸಾಧಕರ ಭವ್ಯದಿವ್ಯ ಪ್ರಭೆಯೆದುರು
ಭ್ರಾಂತಿ ಭ್ರಮೆ ಕಳೆದುಕೊಂಡು ಶುಭ್ರವಾಗುವೆ.!

-ಎ.ಎನ್.ರಮೇಶ್. ಗುಬ್ಬಿ. ಕೈಗಾ

*****