ನೋವಿಗೆ ಮಿಡಿದ ಅಪೂರ್ವ ಸಾಹಿತಿ ಡಾ|| ಎಚ್.ಗಿರಿಜಮ್ಮ

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯವಾದ ಕಾಣ್ಕೆ ನೀಡಿರುವ ಖ್ಯಾತ ಲೇಖಕಿ, ಜನಪ್ರಿಯ ವೈದ್ಯರು ಆದ ಡಾ.ಎಚ್.ಗಿರಿಜಮ್ಮ ಅವರು ಆ. 17 ರಂದು ಮಂಗಳವಾರ ಹೃದಯಾಘಾತದಿಂದ ನಿಧನರಾಗಿರುವುದು ಕನ್ನಡನಾಡು -ನುಡಿಗೆ ತುಂಬಲಾರದ ನಷ್ಟವಾಗಿದೆ.
ಡಾ|| ಗಿರಿಜಮ್ಮ ಅವರ ಸಾಹಿತ್ಯ: ಸ್ತ್ರೀ ಸಂವೇದನೆಯ ನೆಲೆ’’ ವಿಷಯ ಕುರಿತು ಕುವೆಂಪು ವಿವಿಯ ಕನ್ನಡ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರ ಮಾರ್ಗದರ್ಶನದಲ್ಲಿ ಗುಲ್ಬರ್ಗಾದ ಬಲಭೀಮ ಅವರ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ೨೦೧೮ರಲ್ಲಿ ಪಿಎಚ್.ಡಿ. ಪದವಿ ನೀಡಿದೆ. ಮೂಲತಃ ಅವಿಭಜಿತ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ಪ್ರಸಿದ್ಧ ಸಾಹಿತಿ ಡಾ. ಎಚ್. ಗಿರಿಜಮ್ಮ ಅವರು ನನ್ನ ರಕ್ತ ಸಂಬಂಧಿಕರು ಎನ್ನುವುದು ಹೆಮ್ಮೆ. ಇವರ ಸಾಹಿತ್ಯ ಸೇವೆ, ವೈದ್ಯಕೀಯ ಸೇವೆ ಮತ್ತು ಸಮಾಜ ಸೇವೆ ಮಾದರಿಯಾದುದು.
ಕರ್ನಾಟಕ‌ ಕಹಳೆ ಡಾಟ್ ಕಾಮ್ ಹಿರಿಯ ಸಾಹಿತಿ ಡಾ. ಗಿರಿಜಮ್ಮ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತದೆ. ಹಾಗೂ ಸಾಹಿತಿ ಡಾ.‌ನೆಲ್ಲಿಕಟ್ಟೆ ಸಿದ್ದೇಶ್ ಅವರ ವಿಶೇಷ ಲೇಖನದ ಮೂಲಕ ಅಕ್ಷರ ನಮನ ಸಲ್ಲಿಸುತ್ತದೆ.
– ಸಿ.ಮಂಜುನಾಥ್
ಸಂಪಾದಕರು: ಕರ್ನಾಟಕ ಕಹಳೆ ಡಾಟ್ ಕಾಮ್, ಬಳ್ಳಾರಿ 👇

 

ನೋವಿಗೆ ಮಿಡಿದ ಅಪೂರ್ವ ಸಾಹಿತಿ ಡಾ. ಎಚ್.ಗಿರಿಜಮ್ಮ

ಸಾಹಿತ್ಯ ಮನುಕುಲದ ಸಾರ್ಥಕ ಬದುಕಿಗೆ ನಿರ್ದೇನ ಮಾಡುತ್ತದೆ. ಕನ್ನಡಸಾಹಿತ್ಯಕ್ಕೆ ಅಪೂರ್ವವಾದ ಪರಂಪರೆಯಿದೆ. ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಎಂಬ ಕಾಲಘಟ್ಟಗಳಲ್ಲಿ ಕನ್ನಡಸಾಹಿತ್ಯ ಬಹು ಬೆಳೆದಿದೆ. ಬೆಳಗಿದೆ. ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ , ಅರ್ಥಶಾಸ್ತ್ರ , ಅಪರಾಧಶಾಸ್ತ್ರ, ಮನೋವಿಜ್ಞಾನ, ಶಿಕ್ಷಣಶಾಸ್ತ್ರ, ತರ್ಕಶಾಸ್ತ್ರ, , ತತ್ವಶಾಸ್ತ್ರ, ವೈದ್ಯಶಾಸ್ತ್ರ, ಮೊದಲಾದ ಅನ್ಯಶಿಸ್ತುಗಳಿಗೆ ಸಾಹಿತ್ಯವು ಪ್ರಮುಖ ಆಕರವಾದಂತೆಯೇ, ಸಾಹಿತ್ಯಕ್ಕೆ ಇವುಗಳೆಲ್ಲ ಪರಿಕರಗಳಾಗಿರುತ್ತವೆ. ಇವುಗಳ ಜೊತೆಗೆ ಸಾಹಿತ್ಯವು ಅವಿನಾಭಾವ ಸಂಬಂಧವನ್ನು ಹೊಂದಿದೆ. ವ್ಯಷ್ಟಿ ಮತ್ತು ಸಮಷ್ಟಿಯನ್ನು ಸುಧಾರಿಸುವ ಮತ್ತು ಆದರ್ಶವಾಗಿ ಬಾಳಿ, ಬೆಳಗಿಸುವ ಕಾಳಜಿ ಸಾಹಿತ್ಯಕ್ಕಿರುತ್ತದೆ. ಜ್ಞಾನ ಸಂಪಾದನೆಗೆ ಈ ಜ್ಞಾನಶಿಸ್ತುಗಳ ಅಧ್ಯಯನಕ್ಕೆ ಪ್ರೇರೇಪಿಸುವ ಸಾಹಿತ್ಯ ಸದಾ ವ್ಯಕ್ತಿ ಮತ್ತು ಸಮಾಜವನ್ನು ಜಾಗೃತವಾಗಿಡುತ್ತದೆ.
ಕಾವ್ಯ, ಕತೆ, ಕಾದಂಬರಿ, ನಾಟಕ, ಪ್ರಬಂಧ ಮೊದಲಾದ ಪ್ರಕಾರಗಳಲ್ಲಿರುವ ಆಧುನಿಕ ಕನ್ನಡ ಸಾಹಿತ್ಯವು ಬಹುಮುಖಿಯಾದುದು. ವೈವಿದ್ಯಮಯವಾದ ವಸ್ತುಗಳನ್ನು ಅನಾವರಣಗೊಳಿಸಿದೆ. ಹುಲುಸಾಗಿ ಬೆಳೆದಿದೆ. ಸಾಹಿತ್ಯ ಮನುಷ್ಯನ ಬದುಕಿನ ವಿವಿಧ ನೆಲೆಗಳಿಗೆ ಕನ್ನಡಿ ಹಿಡಿಯುತ್ತವೆ. ಭಾರತೀಯ ಸಾಮಾಜಿಕ ವ್ಯವಸ್ಥೆ ಮನುಷ್ಯತ್ವದ ಮನುಷ್ಯನನ್ನು ದಿಗಿಲುಗೊಳಿಸುತ್ತದೆ. ಹಸಿವು ಮತ್ತು ಶೋಷಣೆ ವಿಶ್ವವ್ಯಾಪಿ. ನೊಂದವರ-ಬೆಂದವರ ಬದುಕಿನ ಪ್ರಸಂಗಗಳು ಸಾಹಿತ್ಯದ ವಸ್ತುಗಳಾಗಿವೆ. ಸಾಹಿತ್ಯದೊಳಗೆ ಸ್ತ್ರೀ ಸಂವೇದನೆಯನ್ನು ಕೇಂದ್ರ ಕಾಳಜಿಯಾಗಿಸಿಕೊಂಡು ರಚನೆಯಾಗಿದ್ದು ಬದುಕನ್ನು ಮಾದರಿಯಾಗಿಸುತ್ತದೆ. ಕನ್ನಡ ಸಾಹಿತ್ಯವನ್ನು ಮುಗಿಲೆತ್ತರಕ್ಕೆರಿಸಿದ ಸಾಹಿತಿಗಳಲ್ಲಿ ಡಾ.ಎಚ್.ಗಿರಿಜಮ್ಮ ಅವರು ಪ್ರಮುಖರು. ಕನ್ನಡಸಾಹಿತ್ಯ ಚರಿತ್ರೆಯಲ್ಲಿ ಡಾ.ಎಚ್.ಗಿರಿಜಮ್ಮ ಅವರ ಸಾಹಿತ್ಯಕ್ಕೆ ಅನುಪಮವಾದ ಅನನ್ಯತೆಯಿದೆ.
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಮೂಗಬಸಪ್ಪ-ಚನ್ನಬಸಮ್ಮ ದಂಪತಿಗಳ ಮಡಿಲಲ್ಲಿ ೧೯೫೧ರ ಮಾರ್ಚ್ ೦೩ ರಂದು ಜನಿಸಿದವರು ಗಿರಿಜಮ್ಮನವರು. ಇವರ ತಂದೆ ಬಿ.ಎ. ಪದವಿ ಪಡೆದುಕೊಂಡು ಸಬ್‌ರಿಜಿಸ್ಟ್ರಾರ್ ಆಗಿ ಸೇವೆ ಅನುಪಮ ಸೇವೆ ಸಲ್ಲಿಸಿದವರು. ಗಿರಿಜಮ್ಮನವರು ಬಾಲ್ಯವನ್ನು ಕಡುಬಡತನದಲ್ಲಿ ಕಳೆದವರು. ಅಪ್ಪ-ಅಮ್ಮ ಅವರ ಸಮಾಜ ಸೇವೆಯ ಪ್ರಭಾವಕ್ಕೊಳಗಾದವರು. ಜೀವನ ಪ್ರೀತಿಯನ್ನಿಟ್ಟುಕೊಂಡು ಬಾಳಿದವರು. ಪ್ರಾಥಮಿಕ ಶಿಕ್ಷಣವನ್ನು ಕಲ್ಲೂರಿನಲ್ಲಿ, ಪ್ರೌಢಶಿಕ್ಷಣವನ್ನು ಪಾವಗಡದಲ್ಲಿ, ಪದವಿಪೂರ್ವ ಶಿಕ್ಷಣವನ್ನು ದಾವಣಗೆರೆಯಲ್ಲಿ, ಮೈಸೂರಿನಲ್ಲಿ ಎಂ.ಬಿ.ಬಿ.ಎಸ್ ವೈದ್ಯಕೀಯ ಪದವಿಯನ್ನು ಪಡೆದವರು. ಜೊತೆಗೆ ಎಸ್.ಎಂ.ಡಿ. ಹಾಗೂ ಡಿ.ಜಿ.ಒ ಪದವಿಗಳನ್ನು ದಾವಣಗೆರೆಯಲ್ಲಿ ಪಡೆದವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು, ಪತ್ರಿಕೋದ್ಯಮದಲ್ಲಿ ಡಿಪ್ಲೊಮೊವನ್ನು ಪಡೆದವರು. ಗಿರಿಜಮ್ಮ ಸ್ವಭಾವತಃ ಅಂತರ್ಮುಖಿಯಾಗಿದ್ದವರು. ಓದುವ ಹವ್ಯಾಸವನ್ನು ಬಾಲ್ಯದಲ್ಲೇ ರೂಢಿಸಿಕೊಂಡಿದ್ದವರು. ಅವರು ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದಾಗಲೇ ಸುಧಾ ವಾರಪತ್ರಿಕೆಯಲ್ಲಿ ಅವರ ಮೊದಲ ಕಥೆ “ಹೂ ಬಳ್ಳಿಗೆಲ್ಲಿ ಆಸರೆ” ಪ್ರಕಟಗೊಂಡಿತು. ಓದು ಬರವಣಿಗೆಯ ಹವ್ಯಾಸ ಅವರನ್ನು ಸಾಹಿತ್ಯ ಲೋಕದಲ್ಲಿ ಕಥೆಗಾರರಾಗಿ, ಕಾದಂಬರಿಗಾರರಾಗಿ, ನಾಟಕರರಾಗಿ, ಅಂಕಣ ಬರಹಗಾರರಾಗಿ, ವೈದ್ಯಸಾಹಿತಿಯಾಗಿ, ನಿರ್ದೇಶಕರಾಗಿ ಬೆಳೆಸಿತು.
ಗಿರಿಜಮ್ಮನವರು ಹೂಬನ, ಮುಡಿದ ಮಲ್ಲಿಗೆ ಮೇಘ ಮಂದಾರ ಸ್ಪಂದನ, ಚಲನ ಚಿತ್ರವಾಗಿರುವ ಗಾಜಿನ ಮನೆ, ಸಾಧನಾ, ಕಿರು ಚಿತ್ರವಾಗಿರುವ ಬೆಂಕಿ ಹೂ, ಸಾಗರ ಸೇರದ ನದಿ, ಅರ್ಧಾಂಗಿನಿ, ಅಂಬರ ತಾರೆ, ಮರೀಚಿಕೆ ,ಅಂಕುರ, ಸಂಜೆ ಮಲ್ಲಿಗೆ, ತಮಸೋಮಾ.. .ಜ್ಯೋತಿರ್ಗಮಯ, ಪರಿಣೀತಾ, ಚಂದ ಮಾಮ ಮೊದಲಾದ ಇಪ್ಪತ್ತೇಳು ಕಾದಂಬರಿಗಳನ್ನು ಬರೆದಿರುವರು. ಬಿರುಕು, ಮಂದಾರ ಹೂವು, ಪೋಸ್ಟ್ ಮಾರ್ಟಂ ಮೊದಲಾದ ಎಂಟು ಕಥಾ ಸಂಕಲನಗಳನ್ನು ಪ್ರಕಟಿಸಿರುವರು.


ಮೂಲತಃ ವೈದ್ಯರಾಗಿದ್ದ ಗಿರಿಜಮ್ಮ ಅವರಿಗೆ ನ ಬಂಜೆತನದ ಬವಣೆಗಳು, ಪ್ರಸವ, ಗರ್ಭಿಣಿ, ದೇಹದ ಜೀವನದಿ ರಕ್ತ, ಮಿತಸಂತಾನಕ್ಕೆ ಸರಳ ಮಾರ್ಗಗಳು, ಶಿಶುಪಾಲನೆ, ರಕ್ತದ ಕಾಯಿಲೆಗಳು, ಗರ್ಭಧಾರಣೆ, ಸಂತಾನೋತ್ಪತ್ತಿಯ ಸಂಕಟ, ಬಸಿರು, ಮಕ್ಕಳ ಮಾನಸ ಲೋಕ, ಗರ್ಭಕೋಶದ ಕಾಯಿಲೆಗಳಿಗೆ ಚಿಕಿತ್ಸೆ, ನಿಮ್ಮ ಮಗು, ವೈದ್ಯ ವಿಜ್ಞಾನಿಗಳು, ಬಂಜೆತನ ಮತ್ತು ಪರಿಹಾರೋಪಾಯಗಳು, ಬಂಜೆತನ, ಹದಿಹರೆಯ, ಗರ್ಭಿಣಿಯರ ಕಾಡುವ ಗಂಡಾಂತರದ ಗಳಿಗೆಗಳು, ಮನುಷ್ಯ ದೇಹ, ಆರೋಗ್ಯವಂತ ಮಗು, ಪ್ರಥಮ ಚಿಕಿತ್ಸೆ, ಸ್ತ್ರೀ ರೋಗಗಳು, ಮಕ್ಕಳ ಮನಸ್ಸು ಮತ್ತು ಬೆಳವಣಿಗೆ, ವೃತ್ತಿನಿರತ ದಾದಿಯರ ಮಾರ್ಗದರ್ಶಿ, ಕ್ಯಾನ್ಸರ್, ಸ್ತ್ರೀ ದೇಹ, ಗರ್ಭಧಾರಣೆ, ಮಕ್ಕಳು, ಮನಸ್ಸು ಮತ್ತು ಬೆಳವಣಿಗೆ, ಸ್ತ್ರೀ ದೇಹ ಮೊದಲಾದ ವೈದ್ಯಕೀಯ ಕೃತಿಗಳನ್ನು ಪ್ರಕಟಿಸಿರುವರು.
ಡಿ.ಲಿಟ್ ಪದವಿ: ಇವರ `ಮಕ್ಕಳ ಮಾನಸಲೋಕ’ ಎಂಬ ಕೃತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ.
ಸ್ತ್ರೀರೋಗಚಿಕಿತ್ಸಾ ಮತ್ತು ಪ್ರಸೂತಿ ತಜ್ಞರಾದ ಗಿರಿಜಮ್ಮನವರು ಅಪ್ಪಟ ಮಾನವೀಯತೆಯನ್ನು ಹೃದಯಸ್ಥವಾಗಿಸಿಕೊಂಡವರು. ಸ್ಪಂದನ, ಪ್ರತಿಬಿಂಬ, ಆವಿಷ್ಕಾರ, ಅಂಕುರ ಮೊದಲಾದವುಗಳು ಧಾರವಾಹಿಯಾಗಿ ಪ್ರಸಾರಗೊಂಡಿವೆ. ಸುಪ್ತ ಮನಸ್ಸಿನ ಸಪ್ತಸ್ವರಗಳು, ಕುಷ್ಠರೋಗ, ಏಡ್ಸ್, ಕ್ಯಾನ್ಸರ್, ಆಸ್ಪತ್ರೆಗಳು ನಡೆದು ಬಂದ ದಾರಿ ಮೊದಲಾದವುಗಳು ಸಾಕ್ಷ್ಯ ಚಿತ್ರಗಳಾಗಿವೆ. ಗಿರಿಜಮ್ಮನವರು ಮಲೇರಿಯಾ, ಆಂದೋಲನ ಎಂಬ ನಾಟಕಗಳನ್ನು ಬರೆದವರು. ವೃತ್ತಿಯಿಂದ ವೈದ್ಯರು. ಪ್ರವೃತ್ತಿಯಿಂದ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಅಮೂಲ್ಯ ಕೊಡುಗೆ ನೀಡಿದವರು.
ತಿರಸ್ಕೃತ ಛಲವಾದಿ ಸಮುದಾಯದಲ್ಲಿ ಜನಿಸಿದ ಗಿರಿಜಮ್ಮನವರು ಈ ಸಾಮಾಜಿಕ ವ್ಯವಸ್ಥೆಯ ಪೆಡಂಭೂತ ಜಾತಿ ರಕ್ಕಸದ ಸುಳಿಗೆ ಸಿಕ್ಕು ಅವಮಾನ, ಅಗೌರವಗಳಿಂದ ನರಳಿದರೂ ಎದೆಗುಂದದೆ ಬೆಳೆದವರು. ಅಂಬೇಡ್ಕರ್ ಅವರನ್ನು ಅಧ್ಯಯನ ಮಾಡುವ ಮೂಲಕ ಸ್ವಾಭಿಮಾನವನ್ನು ರೂಢಿಸಿಕೊಂಡವರು. ಇವರು ದಲಿತ ಮಹಿಳೆಯ ನೋವುಗಳಿಗೆ, ಸ್ತ್ರೀ ಶೋಷಣೆಯ ಬಗ್ಗೆ ಸ್ಪಂದಿಸಿ ಕೃತಿಗಳನ್ನು ರಚಿಸಿದವರು. ಕುಷ್ಟರೋಗಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದ ಗಿರಿಜಮ್ಮನವರ ಜನಪರಕಾಳಜಿಯಿಂದ ಜನಪ್ರಿಯ ವೈದ್ಯರಾದವರು. ಪ್ರಜಾವಾಣಿ, ಕನ್ನಡಪ್ರಭ ದಿನಪತ್ರಿಕೆಗಳಲ್ಲಿ, ಸುಧಾ, ತರಂಗ ಎಂಬ ವಾರ ಪತ್ರಿಕೆಗಳಲ್ಲಿ, ಮಯೂರ ಮಾಸಪತ್ರಿಕೆಯಲ್ಲಿ ಅಂಕಣಕಾರರಾಗಿ ಬರೆದವರು.
ಬಡವರಿಗೆ, ರೋಗಿಗಳಿಗೆ ಅಮೂಲ್ಯ ಸಲಹೆ ನೀಡಿದವರು. ವೈದ್ಯಕೀಯ ಸೇವೆಯನ್ನು ಪವಿತ್ರ ಕರ‍್ಯವೆಂದು ಭಾವಿಸಿ, ನಿಸ್ವಾರ್ಥ ಸೇವೆ ಸಲ್ಲಿಸಿದವರು. ಕನ್ನಡ ಸಾಹಿತ್ಯದ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದ ಗಿರಿಜಮ್ಮನವರು ತಮ್ಮ ವೈದ್ಯಕೀಯ ಕ್ಷೇತ್ರದ ಅನುಭವವನ್ನು ಸಾಹಿತ್ಯ ಕ್ಷೇತ್ರಕ್ಕೆ ತಂದರು. ಅವರೇ ಹೇಳುವಂತೆ “ನಾನು ಕಂಡ ವಸ್ತು, ವಿಷಯ, ಭೂಮಿಕೆ ಮತ್ತು ಪಾತ್ರಗಳು ಸತ್ಯ. ಅವುಗಳನ್ನು ಆಧರಿಸಿಯೇ ಕಥೆ, ಕಾದಂಬರಿ, ನಾಟಕಗಳು ಹೊರಹೊಮ್ಮಿವೆ. ಹೀಗೆ ಪ್ರಾಕೃತಿಕ ಸತ್ಯವನ್ನು ಸಾಹಿತ್ಯವನ್ನಾಗಿ ಮಾರ್ಪಡಿಸುವಾಗ ಜೀವನ ಚಿತ್ರಣವನ್ನು, ಜೀವನ ದರ್ಶನವನ್ನಾಗಿ ಪರಿವರ್ತಿಸಲು ಪ್ರಯತ್ನಿಸಲಾಗಿದೆ. ಅಸತ್ಯದ ಅಡಿಗಲ್ಲಿನ ಮೇಲೆ ಕೃತಿ ರಚನೆ ಸಲ್ಲದು ಎಂಬುದು ನನ್ನ ಧೃಡವಾದ ನಂಬಿಕೆ” ಎನ್ನುವರು.
ಎಂ.ಕೆ.ಇಂದಿರಾ, ತ್ರಿವೇಣಿ, ಅನುಪಮ ನಿರಂಜನ ಮೊದಲಾದವರ ಕೃತಿಗಳಿಂದ ಪ್ರೇರೇಪಿತರಾದವರು. ಸುಧಾ, ತರಂಗ, ತುಷಾರ, ಮಯೂರ, ಮೊದಲಾದ ಮಾಸಿಕ ಪತ್ರ‍್ರಿಕೆಗಳಲ್ಲಿ ಧಾರವಾಹಿಯಾಗಿ ಇವರ ಕಾದಂಬರಿಗಳು ಪ್ರಕಟವಾಗಿವೆ. ಬಹು ಓದುಗರನ್ನು ಸಂಪಾದಿಸಿಕೊಂಡಿದ್ದ ಸಾಹಿತಿ ಗಿರಿಜಮ್ಮನವರು. ಅವರ ಕಾದಂಬರಿಗಳಲ್ಲಿ, ಕಥೆಗಳಲ್ಲಿ ಸ್ತ್ರೀಯರ ನೋವು-ನಲಿವುಗಳು, ದಾಂಪತ್ಯ ವಿರಸ, ದಾಂಪತ್ಯಸರಸ, ಸಾಮಾಜಿಕ ಸಂಬಂಧ, ಕೌಟುಂಬಿಕ ಸಂಬಂಧ, ಮಹಿಳಾ ಸಮಸ್ಯೆಯ ಚಿತ್ರಣಗಳು, ಸ್ತ್ರೀ ಪುರುಷರ ಬದುಕಿನ ಸಂಕಟಗಳನ್ನು ಮತ್ತು ಸ್ತ್ರೀಯ ಬದುಕಿನ ವಿವಿಧ ಮುಖಗಳು ಅನಾವರಣಗೊಂಡಿವೆ. ಕೆ.ವಿ. ಜಯರಾಂ ಅವರ ನಿರ್ದೇಶನದಲ್ಲಿ ಇವರ ‘ಗಾಜಿನಮನೆ’ ಕಾದಂಬರಿಯು ‘ಗಾಜಿನಮನೆ’ ಚಲನಚಿತ್ರವಾಗಿ ಅಪಾರ ಜನಮೆಚ್ಚುಗೆಯನ್ನು ಪಡೆದುಕೊಂಡಿತು. ವೈದ್ಯಕೀಯ ಸಾಹಿತ್ಯಕ್ಕೆ ಡಾ|| ಎಚ್.ಗಿರಿಜಮ್ಮ ಅವರು ನೀಡಿದ ಕೊಡುಗೆ ಅಪಾರವಾದುದು. ಇವರು ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯಕ್ಕೆ ಒಂದು ಹೊಸ ಮಾರ್ಗವನ್ನು ನೀಡಿದವರು. ಸುಖಿ ಕುಟುಂಬ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ, ಸುಖಿ ದಾಂಪತ್ಯ ಜೀವನಕ್ಕಾಗಿ ‘ದಾಂಪತ್ಯ ಜೀವನ’ ಎಂಬ ಮಾಸಪತ್ರ‍್ರಿಕೆಯ ಸಂಪಾದಕರಾಗಿ ಐದು ವರ್ಷಗಳ ಕಾಲ ಅನನ್ಯವಾದ ಸೇವೆ ಸಲ್ಲಿಸಿದವರು.
ಗಿರಿಜಮ್ಮನವರ ಸಾಹಿತ್ಯ ಸಾಧನೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ದತ್ತಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸಿ, ಡಾ. ಬಿ.ಸಿ.ರಾಯ್ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದ ವರ್ಷದ ಲೇಖಕಿ ಪ್ರಶಸ್ತಿ, ವನಿತಾ ಸಾಹಿತ್ಯ ಶ್ರೀ, ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಶಂಕರ ಪ್ರತಿಷ್ಠ್ಠಾನ ಪ್ರಶಸ್ತಿ, ದೂರದರ್ಶನ ಚಿತ್ರದ ಉತ್ತಮ ನಿರ್ದೇಶನಕ್ಕಾಗಿ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಕವಿ ಮಹಲಿಂಗರಂಗ ಪ್ರಶಸ್ತಿ, ಅನುಪಮಾ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿರುವರು. ಗಿರಿಜಮ್ಮನವರು ತಮ್ಮ ತಾಯಿ ಆಸೆಯಂತೆ ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗಿ ಬಡರೋಗಿಗಳ ಆರೋಗ್ಯ ಸೇವೆಯಲ್ಲಿ ನಿರತರಾಗಿ ಸಂತೃಪ್ತ ಸೇವೆಯನ್ನು ಸಲ್ಲಿಸಿದವರು. ರೋಗಿಯ ಸಮಸ್ಯೆಯನ್ನು ಅರಿಯುವಲ್ಲಿ, ಚಿಕಿತ್ಸೆ ನೀಡುವುದರಲ್ಲಿ ಅವರು ತೋರುತ್ತಿದ್ದ ಉತ್ಸಾಹ ಶ್ಲಾಘನೀಯ. ನ್ಯಾಯ ನೀತಿಯನ್ನು ಮೈಗೂಡಿಸಿಕೊಂಡಿದ್ದ ಗಿರಿಜಮ್ಮನವರ ಹೃದಯಶ್ರೀಮಂತಿಕೆ ಅಪೂರ್ವವಾದುದು. ತಾವು ನೋವುಂಡು ಬೆಳೆದವರು. ನೊಂದು-ಬೆಂದವರಿಗೆ ಮಿಡಿಯುವ ಸಾಹಿತಿ, ವೈದ್ಯ ಗಿರಿಜಮ್ಮ ತಮ್ಮ ಸೇವೆ ಮತ್ತು ಸಾಹಿತ್ಯ ಕೃಷಿಯ ಮೂಲಕ ಅಮರರಾಗಿರುವರು. ಅವರ ಬದುಕು ಮತ್ತು ಬರಹ ಅನುಪಮವಾದುದು.

-ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಎಂ.ಎ.,ಎಂ.ಇಡಿ.,ಪಿಜಿಡಿಜೆ.,ಪಿಎಚ್.ಡಿ.
ಸಹಾಯಕ ಪ್ರಾಧ್ಯಾಪಕರು,
ಕನ್ನಡಭಾರತಿ, ಕುವೆಂಪು ವಿಶ್ವವಿದ್ಯಾನಿಲಯ,
ಜ್ಞಾನಸಹ್ಯಾದ್ರಿ, ಶಂಕರಘಟ್ಟ, ಶಿವಮೊಗ್ಗ:ಜಿ.
ಜಂಗಮವಾಣಿ:೯೪೮೧೪೧೬೯೮೯
*****