ಅನುದಿನ‌ ಕವನ-೨೨೯, ಕವಯತ್ರಿ: ರಂಹೋ (ರಂಗಮ್ಮ ಹೊದೇಕಲ್), ಕವನದ ಶೀರ್ಷಿಕೆ: ಅವ್ವ ದೇವರಲ್ಲಿಗೆ ಹೋದಮೇಲೆ…!!

ಅವ್ವ ದೇವರಲ್ಲಿಗೆ ಹೋದಮೇಲೆ…!!

ಎಳವೆಯಲ್ಲೇ
ತನ್ನವ್ವನನ್ನು ಕಳೆದುಕೊಂಡ ಅವ್ವ
ಬಂಧುಗಳ ಮಗಳಾದಳು!
ದನ ಕುರಿಗಳ ಹಿಂದೆ
ಬೆಟ್ಟ-ಗುಡ್ಡ ಸುತ್ತಿ ಸುತ್ತಿ
ಕಲ್ಲಾಗುವ-ಹೂವಾಗುವ-ಹರಿವ ನೀರಾಗುವ
ಕಲೆಯನ್ನೂ ಸಿದ್ಧಿಸಿಕೊಂಡಳು!

ಅನಿವಾರ್ಯಕ್ಕೆ ಕೊರಳೊಡ್ಡಿ
ಕತ್ತಲಾಳುತ್ತಿದ್ದ ಮನೆಗೇ
ಕಾಲಿಟ್ಟು ಬಂದಳು!
ಬಡತನ,ಗಂಡನ ಉಡಾಳತನ ಒಪ್ಪುತ್ತಲೇ
ಬದುಕ ಒಪ್ಪ ಮಾಡಲು
ಟೊಂಕ ಕಟ್ಟಿ ನಿಂತಳು!

ತನಗೆ ತಾನೇ ಬಸಿರು,ಬಾಣಂತನಗಳನ್ನು
ನಿಭಾಯಿಸಿಕೊಂಡವಳು
ಮಕ್ಕಳ ಹಸಿವ ನೀಗಿಸಲು
ಗಂಡನ ಹಿಂದೆ ಊರೂರು ಸುತ್ತಿ
ಕೆರೆ ಕಟ್ಟೆ ಗಳಿಗೆ ಮಣ್ಣು ಹೊತ್ತಳು!

ಯಾರದೋ ಜಮೀನಿಗೆ
ಬೆವರು ಹನಿಸಿದಳು
ಯಾರದೋ ದನಗಳನ್ನು
ಕಣ್ಣಿಗೊತ್ತಿಕೊಂಡು ಕಾದಳು!
ಅಳು,ಅವಮಾನಗಳನ್ನೆಲ್ಲ
ತುಟಿ ಕಚ್ಚಿ ನುಂಗುವುದನ್ನು
ಸಲೀಸಾಗಿ ಪಾಲಿಸಿದಳು!

ಶಾಲೆಯ ಮಕ್ಕಳಿಗೆ
ಉಪ್ಪಿಟ್ಟು ಮಾಡುತ್ತಿದ್ದ ಅವ್ವ
ಮಿಕ್ಕಿದ್ದನ್ನು ಕೇರಿ ಮಕ್ಕಳಿಗೆ ಉಣಿಸಿದಳು!
ತಂಗಳು ಮುದ್ದೆಯನ್ನು ಮಿದ್ದು
ಹಿತದ ನಿಜ ಅರ್ಥ ಬರೆದವಳು!

ಬೆಳಕಾದಳು ಅವ್ವ
ಬೆಳಕ ಹಂಚಿದಳು
ಮಕ್ಕಳು ಗಳಿಸಿದ ನೆಲದ ತುಂಬಾ
ಹಸಿರಾದಳು..ಹೂವಾದಳು..ಫಲವಾದಳು!
ತನ್ನವೇ ದನಕರುಗಳ ಮೈದಡವಿ ಸುಖವಾದಳು!

ಪ್ರತಿ ಮೊದಲ ತುತ್ತು
ನಾಯೆಂಬೊ ನಾರಾಯಣನಿಗೆ!
ಹಸಿದು ಬಂದವರಿಗೂ ಪಾಲು
ಕಾಗೆಗಳಿಗಿಷ್ಟು ಅಗುಳು..
ಅವ್ವ ಎಷ್ಟೊಂದು ‘ಗುರು’!

ಈಗ
ದೇವರಂತಹ ಅವ್ವ
ದೇವರಲ್ಲಿಗೇ ಹೋಗಿದ್ದಾಳೆ!
ಸುತ್ತ ಕಾಣುವ ಅವ್ವಂದಿರಲ್ಲಿ
ನಾನೀಗ ದೇವರನ್ನು ಹುಡುಕುತ್ತಿದ್ದೇನೆ!

-ರಂಹೊ (ರಂಗಮ್ಮ ಹೊದೇಕಲ್)
ತುಮಕೂರು ಜಿ.
*****