ವಿಶ್ವ ಛಾಯಾಗ್ರಹಣ ದಿನಾಚರಣೆಯ ಹಿನ್ನಲೆಯಲ್ಲಿ ಕೊಪ್ಪಳದ ಪತ್ರಿಕಾ ಛಾಯಾಗ್ರಾಹಕ ಪ್ರಕಾಶ್ ಕಂದಕೂರು ಅವರು ಫೋಟೋಗ್ರಾಫರ್ ಆದ ರೋಚಕ ಮಾಹಿತಿಯನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಹಂಚಿಕೊಂಡಿದ್ದಾರೆ….ಓದಿ
ನಾನು ಛಾಯಾಗ್ರಾಹಕನಾಗಿದ್ದು….ಹೀಗೆ!
-ಪ್ರಕಾಶ್ ಕಂದಕೂರು, ಕೊಪ್ಪಳ
ಆಗ 90 ರ ದಶಕ. ಫೋಟೋ ತೆಗೆಯುವುದು ಕಲಿಯಬೇಕು ಎಂಬ ಮಹದಾಸೆಯಿಂದ ನಾನು ಕೊಪ್ಪಳದ ಸ್ಟಾರ್ ಟಾಕೀಜ್ ಪಕ್ಕದಲ್ಲಿದ್ದ ಸುಂದರಂ ಸ್ಟುಡಿಯೋದಲ್ಲಿ ಕೆಲಸಕ್ಕೆ ಸೇರಿದೆ. ಸ್ಟುಡಿಯೋದ ಕಸ ಗುಡಿಸುವುದು, ಪರಿಕರಗಳನ್ನು ಒರೆಸುವುದು, ಬಂದ ಗ್ರಾಹಕರಿಗೆ, ಅತಿಥಿಗಳಿಗೆ ಚಹಾ ತಂದುಕೊಡುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತ ಹೀಗೆ ಸುಮಾರು 6 ವರ್ಷ ಕಳೆದೆ. ಆದರೆ ಛಾಯಾಗ್ರಹಣಕ್ಕೆ ಸಂಬಂಧಿಸಿದ ಏನನ್ನೂ ನನಗೆ ಕಲಿಯಲು ಆಗಲೇ ಇಲ್ಲ. 1996ರಲ್ಲಿ ಮಾವ ಮಂಜುನಾಥ ಕಾಳೆ ಅವರು `ಧರ್ಮಸ್ಥಳದ ರುಡ್ಸೆಟ್ ಸಂಸ್ಥೆಯಲ್ಲಿ ಛಾಯಾಗ್ರಹಣ ತರಬೇತಿ ನೀಡುತ್ತಿದ್ದಾರೆ ಎಂಬ ಸುದ್ದಿ ಪತ್ರಿಕೆಯಲ್ಲಿ ಬಂದಿದೆ. ಅದಕ್ಕೆ ನೀನೊಂದು ಅರ್ಜಿ ಹಾಕು’ ಅಂದರು. ಅಲ್ಲದೆ ನನ್ನ ಜೊತೆಗಿದ್ದೇ ಅರ್ಜಿನೂ ಹಾಕಿಸಿದರು.
ಸುಮಾರು 10 ದಿನಗಳ ಬಳಿಕ ಧಾರವಾಡದಿಂದ ಸಂದರ್ಶನಕ್ಕೆ ಆಯ್ಕೆಯಾಗಿರುವ ಪತ್ರ ಬಂತು. ಛಾಯಾಗ್ರಹಣ ಕಲಿಯಬೇಕು ಎಂಬ ನನ್ನ ಮಹತ್ವಾಕಾಂಕ್ಷೆಗೆ ಕಸುವು ಬಂದಂತಾಯಿತು. ಕೊಪ್ಪಳದ ಸಿಂಡಿಕೇಟ್ ಬ್ಯಾಂಕಿನಲ್ಲಿ ಸಂದರ್ಶನ ನಡೆದು, ಅಂತಿಮವಾಗಿ ತರಬೇತಿಗೆ ಆಯ್ಕೆಯಾದೆ. ಅಷ್ಟು, ಇಷ್ಟು ಹಣ ಒಗ್ಗೂಡಿಸಿ ತರಬೇತಿಗೆ ಧಾರವಾಡಕ್ಕೆ ಹೋದೆ. ಆ ಸಂಸ್ಥೆ ವಿದ್ಯಾಗಿರಿಯಲ್ಲಿತ್ತು. ನನ್ನಂತೆಯೇ ಬೇರೆ ಬೇರೆ ಜಿಲ್ಲೆಗಳ ಸುಮಾರು 150 ಜನ ಅಭ್ಯರ್ಥಿಗಳು ಅಲ್ಲಿಗೆ ಬಂದಿದ್ದರು. ಅಲ್ಲಿ ನಮಗೆ ಉಳಿದುಕೊಳ್ಳಲು 10 ಜನರಿಗೆ ಒಂದೊಂದು ಕೋಣೆಗಳನ್ನು ನೀಡಿದರು. ಊಟ, ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿದ್ದ 13 ದಿನಗಳ ಆ ತರಬೇತಿಯನ್ನು ನಮಗೆ ನೀಡಿದರು.
ಛಾಯಾಗ್ರಹಣ, ವಿಡಿಯೋಗ್ರಫಿ, ವ್ಯಾವಹಾರಿಕ ಜ್ಞಾನ, ಸಾಂಸ್ಕೃತಿಕ ಮಾಹಿತಿ, ಜೀವನ ಮೌಲ್ಯ ಹೀಗೆ ಹತ್ತು ಹಲವು ವಿಷಯಗಳನ್ನು ನಮಗೆ ತರಬೇತಿಯಲ್ಲಿ ಕಲಿಸಿಕೊಡಲಾಯಿತು. ನನ್ನ ಜೀವನದಲ್ಲಿ ರೂಢಿಸಿಕೊಂಡಿರುವ ಬಹಳಷ್ಟು ವಿಷಯಗಳು ಅಲ್ಲಿ ಕಲಿತಿರುವವೇ ಆಗಿವೆ. ಅಲ್ಲಿ ನನಗೆ ಇಂತಹ ಉತ್ಕೃಷ್ಟ ತರಬೇತಿ ನೀಡಿದ ಅಂತರಾಷ್ಟ್ರೀಯ ಖ್ಯಾತ ಛಾಯಾಗ್ರಾಹಕ ಶಶಿ ಸಾಲಿ ಅವರು, ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಎಲಿಗಾರ್ ಅವರು ಮತ್ತು ಸಹಾಯಕ ವ್ಯವಸ್ಥಾಪಕ ಗೋಪಾಲ ಬಂಡಿವಾಡ ಅವರನ್ನು ಜೀವನದಲ್ಲಿ ಎಂದಿಗೂ ಮರೆಯಲ್ಲ.
ತರಬೇತಿ ಬಳಿಕ ಕೊಪ್ಪಳಕ್ಕೆ ವಾಪಾಸಾದೆ. ನನ್ನ ಗೆಳೆಯ ಅರುಣನ ಸಹಾಯದಿಂದ ಒಂದು ಸೆಕೆಂಡ್ ಹ್ಯಾಂಡ್ ಕ್ಯಾಮೆರಾ ಕೊಂಡುಕೊಂಡು ವೃತ್ತಿ ಜೀವನ ಆರಂಭಿಸಿದೆ. ಆಗ ಅಣ್ಣ ಯಂಕಪ್ಪ ಕಂದಕೂರ ಅವರ ಸೈಕಲ್ ಅಂಗಡೀನೇ ನನ್ನ ಸ್ಟುಡಿಯೋ ಆಗಿತ್ತು. ಕೆಲ ದಿನ ಹೀಗೇ ನಡೀತು. ಬಳಿಕ ತರಬೇತಿಯಿಂದ ದೊರೆತ ಪ್ರಮಾಣ ಪತ್ರದಿಂದ ಸಿಂಡಿಕೇಟ್ ಬ್ಯಾಂಕಿನಲ್ಲಿ ರೂ.15 ಸಾವಿರ ಸಾಲ ದೊರೆಯಿತು. ಆಗ ಹೊಸ ಕ್ಯಾಮೆರಾವೊಂದನ್ನು ಕೊಂಡುಕೊಂಡೆ (ನಿಕಾನ್ ಎಫ್ಎಮ್10). ಮುಂದೆ ಎರಡು ವರ್ಷಗಳ ಕಾಲ ಹೊರಾಂಗಣ ಛಾಯಾಗ್ರಹಣ ಮಾಡುತ್ತ, 1998ರಲ್ಲಿ ಸ್ಟುಡಿಯೋ ಮಾಡಿದೆ. ಆಗ ಸ್ಟುಡಿಯೋಗಳು ಬಹಳ ಕಡಿಮೆ ಇದ್ದವು. ಹಾಗಾಗಿ ವ್ಯಾಪಾರ ಚೆನ್ನಾಗಿ ನಡೀತಾ ಇತ್ತು.
ಪತ್ರಿಕಾ ಛಾಯಾಗ್ರಹಣಕ್ಕೆ ನನ್ನನ್ನು ಪರಿಚಯಿಸಿದವರು ಮಿತ್ರರಾದ ಚಾಮರಾಜ ಸವಡಿ, ಆನಂದ್ ತೀರ್ಥ ಪ್ಯಾಟಿ, ಮಂಜುನಾಥ ಡೊಳ್ಳಿನ್, ಬಸವರಾಜ್ ಕರುಗಲ್, ಬಸವರಾಜ್ ಮೂಲಿಮನಿ. ಇವರೆಲ್ಲ ಪತ್ರಿಕೆಗಳಿಗೆ ಛಾಯಾಚಿತ್ರಗಳನ್ನು ತೆಗೆಯಲು ನನ್ನನ್ನು ಕರೆದುಕೊಂಡು ಹೋಗ್ತಾ ಇದ್ರು. ಆಗೆಲ್ಲ ಸೈಕಲ್ ಮೇಲೆಯೇ ಎಷ್ಟೋ ಹಳ್ಳಿಗಳನ್ನು ಸುತ್ತಿದ್ದಿದೆ. ಒಮ್ಮೆ ಬೆಂಗಳೂರಿಗೆ ಭೇಟಿ ಕೊಟ್ಟಾಗ ಪ್ರಜಾವಾಣಿ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖ್ಯಾತ ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆ ಅವರು ಅಂತರಾಷ್ಟ್ರಿಯ ಸುದ್ದಿಸಂಸ್ಥೆಗಳಾದ ರಾಯಿಟರ್ಸ್, ಎಎಫ್ಪಿ, ಎಪಿ, ಪಿಟಿಐ ಗಳ ಚಿತ್ರಗಳನ್ನು ನನಗೆ ತೋರಿಸುತ್ತಿದ್ದರು. ಆಗೆಲ್ಲ ಚಿತ್ರಗಳ ಕುರಿತು ಚರ್ಚೆ ಸಹ ನಡೀತಾ ಇತ್ತು. ಇಂದು ಛಾಯಾಗ್ರಹಣ ಕ್ಷೇತ್ರದಲ್ಲಿ ನನಗೆ ನಾಲ್ಕಾರು ಪ್ರಶಸ್ತಿಗಳು ಬಂದಿದ್ದರೆ ಅದಕ್ಕೆ ಕಾರಣ ನನ್ನ ಸನ್ಮಿತ್ರರೇ.
ಬಿ.ಎಸ್. ಯಡಿಯೂರಪ್ಪನವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ `ಭಾಗ್ಯ ಲಕ್ಷ್ಮೀ’ ಯೋಜನೆ ಕುರಿತು ಏರ್ಪಡಿಸಲಾಗಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ನನ್ನ ಚಿತ್ರವೊಂದನ್ನು `ವಿಶ್ವ ಛಾಯಾಗ್ರಹಣ’ ದಿನದ ಅಂಗವಾಗಿ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. 👇
👆ಪ್ರಕಾಶ ಕಂದಕೂರ,
ಪತ್ರಿಕಾ ಛಾಯಾಗ್ರಾಹಕರು, ಕೊಪ್ಪಳ
*****