ಹಂಪಿ ನೋಡಲು ಬಂದ ಉಪರಾಷ್ಟ್ರಪತಿಗಳಿಗೆ ಜಿಲ್ಲಾಡಳಿತದಿಂದ ಸ್ವಾಗತ: ತುಂಗಭದ್ರಾ ಜಲಾಶಯದ ಸೌಂದರ್ಯ ಕಣ್ತುಂಬಿಕೊಂಡ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಮತ್ತು ಕುಟುಂಬ

ಹೊಸಪೇಟೆ(ವಿಜಯನಗರ), ಆ.20: ತುಂಗಾಭದ್ರಾ ಜಲಾಶಯ,ಹಂಪಿಯ ವಿಶ್ವ ಪಾರಂಪರಿಕ ತಾಣಗಳನ್ನು ವೀಕ್ಷಿಸಲು ದೇಶದ ಗೌರವಾನ್ವಿತ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹಾಗೂ ಅವರ ಧರ್ಮಪತ್ನಿ ಎಂ.ಉಷಾ ಅವರು ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯ ಮುನ್ಸಿಪಲ್ ಮೈದಾನಕ್ಕೆ ವಾಯುಪಡೆಯ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಶುಕ್ರವಾರ ಸಂಜೆ ಬಂದಿಳಿದರು.
ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರಿಗೆ ಪರಿಸರ,ಜೀವಿಶಾಸ್ತ್ರ,ಪ್ರವಾಸೋದ್ಯಮ ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಸ್ವಾಗತಿಸಿದರು.
ಕೊಪ್ಪಳ ಸಂಸದ ಸಂಗಣ್ಣ ಕರಡಿ,
ಕಲಬುರಗಿ ವಿಭಾಗೀಯ ಪ್ರಾದೇಶಿಕ ಆಯುಕ್ತ ಎನ್.ವಿ.ಪ್ರಸಾದ್, ಐಜಿಪಿ ಮನಿಷ್ ಖರ್ಬಿಕರ್, ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ,ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಮತ್ತಿತರರು ಇದ್ದರು.
ತುಂಗಭದ್ರ ಜಲಾಶಯ ಕಣ್ತುಂಬಿಕೊಂಡರು: ಬಳಿಕ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ತಮ್ಮ ಧರ್ಮಪತ್ನಿ ಎಂ.ಉಷಾ ಮತ್ತು ಕುಟುಂಬದ ಸದಸ್ಯರೊಂದಿಗೆ ಸಮೀಪದ ತುಂಗಾಭದ್ರಾ ಜಲಾಶಯ ವೀಕ್ಷಿಸಿದರು. ಜಲಾಶಯದ ಸೌಂದರ್ಯ ಮತ್ತು ಜಲಧಾರೆ ಕಣ್ತುಂಬಿಕೊಂಡು ಹರ್ಷಿಸಿದರು.
ಉಪರಾಷ್ಟ್ರಪತಿಗಳು ಭೇಟಿ ಹಿನ್ನೆಲೆ ಹೊಸಪೇಟೆ ನಗರದಾದ್ಯಂತ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ.
ವರುಣನ ಸ್ವಾಗತ: ಉಪರಾಷ್ಟ್ರಪತಿಗಳು ಬರುವ ಅರ್ಧಗಂಟೆ ಮುಂಚೆ ತುಂತುರು ಹನಿಗಳ ಮೂಲಕ ವರುಣ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಉಪರಾಷ್ಟ್ರಪತಿಗಳು ರಸ್ತೆ ಮಾರ್ಗವಾಗಿ ತುಂಗಭದ್ರಾ ಜಲಾಶಯಕ್ಕೆ ತೆರಳುತ್ತಿರುವುದನ್ನು ರಸ್ತೆಯುದ್ದಕ್ಕೂ
ಸಾರ್ವಜನಿಕರು‌ ನಿಂತು ವೀಕ್ಷಿಸಿದರು ಮತ್ತು ಅನೇಕರು ವಿಡಿಯೋ ಮಾಡಿಕೊಂಡರು ಹಾಗೂ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಗಮನ ಸೆಳೆಯಿತು.
*****