ಹೊಸಪೇಟೆ(ವಿಜಯನಗರ),ಆ.21: ನಮ್ಮ ಪುರಾತನ ಸಂಸ್ಕೃತಿ, ಶ್ರೀಮಂತ ಪರಂಪರೆ ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸಲು ವೈಭವದಿಂದ ಮೆರೆದಿದ್ದ ವಿಜಯನಗರ ಸಾಮ್ರಾಜ್ಯ ಮತ್ತು ಶ್ರೀಕೃಷ್ಣದೇವರಾಯ ಹಾಗೂ ಅವರ ಆಡಳಿತದ ಶೈಲಿ ಪಠ್ಯಕ್ರಮದ ಭಾಗವಾಗಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಹೇಳಿದರು.
ಶನಿವಾರ ಹಂಪಿಯ ವಿಶ್ವಪಾರಂಪರಿಕ ಸ್ಮಾರಕಗಳನ್ನು ವೀಕ್ಷಿಸಿದ ನಂತರ ಅವರು ವಿಜಯ ವಿಠ್ಠಲ ಮಂದಿರ ಆವರಣದಲ್ಲಿರುವ ಕಲ್ಲಿನ ರಥದ ಎದುರುಗಡೆ ಅವರು ಮಾತನಾಡಿದರು.
ಶ್ರೀ ಕೃಷ್ಣ ದೇವರಾಯ ಅವರು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಸಂಸ್ಕೃತಿ,ಸಂಗೀತ,ಶಿಕ್ಷಣ ಮತ್ತು ಉತ್ತಮ ಆಡಳಿತಕ್ಕೆ ಒತ್ತು ನೀಡಿದ್ದರು ಎಂದು ತಿಳಿಸಿದರು.
ದೇಶದ ಯುವ ಸಮೂಹ, ವೈಭವದಿಂದ ಮೆರೆದಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಗೆ ಭೇಟಿ ನೀಡಬೇಕು ಎಂದರು.
ಶ್ರೀಕೃಷ್ಣದೇವರಾಯ ಮತ್ತು ವಿಜಯನಗರ ಸಾಮ್ರಾಜ್ಯದ ಬಗ್ಗೆ ಬಗ್ಗೆ ಇತಿಹಾಸಕಾರರು ಹೆಚ್ಚಿನ ಒತ್ತು ನೀಡುವ ಮೂಲಕ ಬೆಳಕು ಚೆಲ್ಲಬೇಕು ಎಂದು ಹೇಳಿದರು.
ಹಂಪಿ ಹಾಗೂ ಸುತ್ತಮುತ್ತಲಿನ ಸ್ಮಾರಕಗಳನ್ನು ಸಂರಕ್ಷಿಸುವುದಕ್ಕೆ ಸಾರ್ವಜನಿಕರು ಕೈಜೋಡಿಸಬೇಕು;ಅದರಲ್ಲೂ ವಿಶೇಷವಾಗಿ ಹಂಪಿ ಭಾಗದ ಜನರು ಸ್ಮಾರಕಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಲ್ಲರೂ ಎಎಎಸ್ಐ ಜೊತೆ ಕೈಜೋಡಿಸಬೇಕು ಎಂದರು.
ವಿಜಯನಗರ ಸಾಮ್ರಾಜ್ಯದ ವಿಶ್ವಪಾರಂಪರಿಕ ತಾಣಗಳನ್ನು ನೋಡಿ ತುಂಬಾ ಸಂತಸವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಎಂ.ಉಷಾ ಮತ್ತಿತರರು ಇದ್ದರು.
*****