ನಾನೀಗ ಹಿರಿಯ ನಾಗರಿಕನಂತೆ!
ನಾನೀಗ ಹಿರಿಯ ನಾಗರಿಕನಂತೆ!
ವೃತ್ತಿಯಿಂದ ಹಿಂದಕ್ಕೆ ಸರಿಯಬೇಕಂತೆ
ಬಸ್ಸು ರೈಲಿನಲಿ ರೊಕ್ಕಕಮ್ಮಿಯಂತೆ
ಆದರೇನಂತೆ
ಅರವುಮರವೆಂದು ಪ್ರಯಾಣ ಬೆಳಸದೆ ಮನೆಯಲಿರಬೇಕಂತೆ ,
ಬದುಕು ಸಾಗಿಸಬೇಕಂತೆ ಸಂತನಂತೆ||
ಜಾತ್ರೆಯ ಗದ್ದಲದಲಿ ತೇರನೆಳೆದವನು ನಾನು,
ಕಾಲು ಮುರಿದವನಂತೆ ಬಿದ್ದಿರಬೇಕಂತೆ,
ಚಾಳೀಸಿಲ್ಲದೆ ಸೂಜಿ ಪೋಣಿಸುವವ,
ಮಸಕಾಗಿದೆ ಕಣ್ಣಿಗೆ ಆಪರೇಷನ್ ಬೇಕಂತೆ,
ಮಂದಾದ ಕಿವಿಯೆಂದು ನನ್ನೆದುರೇ
ನೂರೆಂಟು ವೃದ್ಧಾಶ್ರಮಗಳ ಚರ್ಚೆ,
ನಾನೀಗ ಹಿರಿಯ ನಾಗರೀಕನಂತೆ||
ಗೊಣಗುಟ್ಟುವೆನೆಂದು ದೂರವಿಡುವರಂತೆ
ಕುಡಿಯುವುದು,ಕುಣಿಯುವುದು ತಪ್ಪೆಂದರೆ,
ದುರುಗುಟ್ಟಿ ಹೇಳುವರು
ನಾ ಈ ಜಮಾನದವನಲ್ಲವಂತೆ||
ಮಲ್ಲಸಜ್ಜನಂತೆ ಮಲ್ಲಯುದ್ಧದಿ ಪಳಗಿ , ಬಾಳಿದವನಿಂದು
ಬಳಲಿ ನರಳುತಿವೆ,
ಕರುಳು ಬಳ್ಳಿಯವರೂ ಸೇರಿ
ಕುರುಡಾದ ಜಗವಿಂದು ಕೂಗಿ ಕೂಗಿ
ಸಾರುತಿದೆ ಹಿರಿಯ ನಾಗರಿಕರು
ಹಿಂದೆ ಸರಿಯಿರೆನುತ
ತಳ್ಳುತಿಹರು ಖಿನ್ನತೆಯೆಡೆಗೆ||
-ಜ್ಯೋತಿಪ್ರಿಯ
(ಡಾ. ಅರವಿಂದ ಪಟೇಲ್, ಬಳ್ಳಾರಿ)
*****