ಅನುದಿನ ಕವನ: ೨೩೩, ಕವಿ:ವಿ.ಬಿ.ಕುಳಮರ್ವ, ಕುಂಬ್ಳೆ , ಕವನದ ಶೀರ್ಷಿಕೆ: ರಕ್ಷಾ ಬಂಧನ

 

 

 

 

 

ಕರ್ನಾಟಕ‌ ಕಹಳೆ ಡಾಟ್ ಕಾಮ್ ನ ಜನಪ್ರಿಯ ಸಾಹಿತ್ಯ ಸಂಸ್ಕೃತಿ ಕಾಲಂನ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಗಡಿನಾಡ ಕನ್ನಡಿಗ, ಹಿರಿಯ ಕವಿ ವಿ.ಬಿ.ಕುಳಮರ್ವ, ಕುಂಬ್ಳೆ ಅವರ ‘ರಕ್ಷಾ ಬಂಧನ’ ಮಕ್ಕಳ ಕವಿತೆ ಪಾತ್ರವಾಗಿದೆ….👇

ರಕ್ಷಾ ಬಂಧನ….
(ಮಕ್ಕಳ ಕವನ)

ರಕ್ಷೆಯ ಕಟ್ಟಲು
ಬಂದಳು ತಂಗಿಯು
ಅಣ್ಣನ ಕೈಗಳಿಗೆ ||

ಬಲಗೈ ಹಿಡಿಯುತ
ಮುಂದಕೆ ಸೆಳೆಯುತ
ರಾಖಿಯ ತೋರಿದಳು||

ಕರವನು ಪಿಡಿಯುತ
ಕಟ್ಟಿಯೆ ಬಿಟ್ಟಳು
ಮಮತೆಯ ಸೂತ್ರವನು ||

ತಲೆಯನು ಎತ್ತುತ
ಹಣೆಯನು ಮುಟ್ಟುತ
ತಿಲಕವನಿರಿಸಿದಳು ||

ಅಣ್ಣನ ಪ್ರೀತಿಯ
ಉಡುಗೊರೆ ಪಡೆಯುತ
ತಂಗಿಯು ನಮಿಸಿದಳು ||

ಕಣ್ಮನ ಸೆಳೆಯುವ
ಸುಂದರ ರಾಖಿಯು
ಪ್ರೀತಿಯ ದ್ಯೋತಕವು||

ಇರಲೀ ಪ್ರೀತಿಯು
ಅನಂತ ಕಾಲಕು
ಕರುಳಿನ ಸಂಬಂಧ ||

ಹಗೆತನ ಮರೆಯುತ
ಜಗವನೆ ಗೆಲ್ಲಲು
‌‌ ರಾಖಿಯೆ ಸೋಪಾನ ||

-ವಿ.ಬಿ.ಕುಳಮರ್ವ, ಕುಂಬ್ಳೆ ,
ಕಾಸರಗೋಡು ಜಿಲ್ಲೆ, ಕೇರಳ✍
*****

ಹಿರಿಯ ಕವಿ ವಿ.ಬಿ.ಕುಳಮರ್ವ, ಕುಂಬ್ಳೆ ಅವರ ಪರಿಚಯ ಮಾಹಿತಿ:

ಹೆಸರು:- ವಿ.ಬಿ.ಕುಳಮರ್ವ, ಕುಂಬ್ಳೆ
ತಂದೆ:ಶಂಕರನಾರಾಯಣ ಭಟ್ಡ
ತಾಯಿ:ವೆಂಕಟೇಶ್ವರಿ ಯಸ್.ಭಟ್ಟ
ವಿಳಾಸ:-“ಶ್ರೀನಿಧಿ”
ನಾರಾಯಣ ಮಂಗಲ
ಅಂಚೆ:- ಕುಂಬಳೆ.
ಪಿನ್ :- 671 321
ಮಂಜೇಶ್ವರ ತಾಲ್ಲೂಕು
ಕಾಸರಗೋಡು ಜಿಲ್ಲೆ.
ಕೇರಳ ರಾಜ್ಯ.
ಮೊಬೈಲ್:- *9446484585*
ವಿದ್ಯಾರ್ಹತೆ:- *ಎಂ,ಎ., ಬಿ.ಇಡಿ*
ನಿವೃತ್ತ ಮುಖ್ಯೋಪಾಧ್ಯಾಯ.

ಗಳಿಸಿದ ರಾಜ್ಯ ಮಟ್ಟದ ಪ್ರಶಸ್ತಿಗಳು—

*೧ ಕೇರಳ ಸರಕಾರದ ರಾಜ್ಯೋತ್ಸವ ಪ್ರಶಸ್ತಿ*
*೨ .ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ಪ್ರಶಸ್ತಿ* (ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ ಸೇವೆಗಾಗಿ)
*೩.ಬೀದರಿನ ದೇಶಪಾಂಡೆ ಪ್ರತಿಷ್ಠಾನದ ” ಸಾಹಿತ್ಯ ಚೂಡಾಮಣಿ ರತ್ನ”* (ವ್ಯಾಕರಣ ಮತ್ತು ಛಂದಸ್ಸು ಕ್ಷೇತ್ರಕ್ಕೆ ಸಂಬಂಧಿಸಿ)
*೪.” ಕರ್ನಾಟಕ ಹೊರನಾಡ ರತ್ನ”*(ಸಾಹಿತ್ಯ ಮತ್ತು ಶಿಕ್ಷಣದ ಜೀವಮಾನದ ಸಾಧನೆಗಾಗಿ)
*೫.” ಕಾವ್ಯಶ್ರೀ ” ಪ್ರಶಸ್ತಿ* (ಮಂಡ್ಯದ ಜೀ.ಶಂ.ಪ.ವೇದಿಕೆಯಿಂದ)
*೬.”ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ”*(ಕಾಸರಗೋಡಿನ ನಾಡಗೀತೆಗೆ)
*೭”ಡಾ.ಕೆ.ಯಸ್.ನ.ನೆನಪಿನ ಪ್ರೇಮಕವಿ ಪ್ರಶಸ್ತಿ* ( ಮಡದಿಯು ತವರಿಗೆ ಹೋದಾಗ” ಎಂಬ ಪ್ರೇಮ ಕಾವ್ಯಕ್ಕೆ)
*೮”ಚುಟುಕು ಸಾಹಿತ್ಯ ಪ್ರಶಸ್ತಿ* “(ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ತಿನಿಂದ)
*೯.ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ವಿದ್ವತ್ ಸನ್ಮಾನ ೨೦೧೦ರಲ್ಲಿ*.
*೧೦.” ವಿಷು ವಿಶೇಷ ” ಕಾವ್ಯ ಪ್ರಶಸ್ತಿ* (ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದಿಂದ)
*೧೧.”ಬನ್ನಿ ಕೇರಳ ನಾಡಿಗೆ” ಕವನಕ್ಕೆ ರಾಷ್ಟ್ರ ಮಟ್ಟದ ಪುರಸ್ಕಾರ*. (ಹೈದರಾಬಾದಿನ ತೆಲುಗು ವಿಶ್ವವಿದ್ಯಾಲಯದಲ್ಲಿ)
*೧೨.ತಿಪಟೂರಿನ ರಂಗಾಪುರ ಸುಕ್ಷೇತ್ರದಿಂದ “ಶಿಕ್ಷಣ ತಜ್ಞ” ಬಿರುದು*
*೧೩.ಭಾರತ ಕಾವ್ಯ ರತ್ನ ಪ್ರಶಸ್ತಿ* ( ಬಳ್ಳಾರಿಯ ಸಾಹಿತ್ಯ ಸಮ್ಮೇಳನದಲ್ಲಿ)
*೧೪.ಕರ್ಣಾಟಕ ರಾಜ್ಯೋತ್ಸವ ಪುರಸ್ಕಾರ* ( ಕೆ.ಜಿ.ಯಫ್.ನ “ಬೆಮೆಲ್” ಕನ್ನಡ ಮಿತ್ರರು ಸಂಸ್ಥೆಯಿಂದ)
*೧೫.ಕೇರಳ-ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಬಿರುದು* ( ಕೋಲಾರ ಸಮ್ಮೇಳನದಲ್ಲಿ)
*೧೬.ಬೆಂಗಳೂರಿನ ಅರಮನೆ ಮೈದಾನಿನಲ್ಲಿ ಜರಗಿದ ಎರಡನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ವಿಶೇಷ ಸನ್ಮಾನ* ಇತ್ಯಾದಿ ಇತ್ಯಾದಿ.

ಪ್ರಕಟಿಸಿದ ಪುಸ್ತಕಗಳು-ಒಟ್ಟು ೨೦
*****
*೧. ಕಾರಂಜಿ*(ಕವನ ಸಂಕಲನ)
*೨.ವ್ಯಾಕರಣ ಮತ್ತು ಛಂದಸ್ಸು* (ಹೈಸ್ಕೂಲ್ ತರಗತಿಗೆ)
*೩.ವ್ಯವಹಾರ ಮಾರ್ಗದರ್ಶಿ* (ವಿದ್ಯಾರ್ಥಿ ಕೈಪಿಡಿ.ಒಟ್ಟು *ಐದು* editions)
*೪.ಮರವೇ ವರ*(ನಾಟಕ)
*೫.ಒಳದನಿ* (,ಕವನ ಸಂಕಲನ)
*೬.ಶ್ರೀ ಪಾರ್ಥಸಾರಥಿ* (ಮುಜುಂಗಾವು ಕ್ಷೇತ್ರ ಪರಿಚಯ)
*೭.ಸುಲಭ ರಾಮಾಯಣ* (ಕಥನ ಕವನ- ಖಂಡಕಾವ್ಯ)
*೮.ದೀಪಿಕೆ*( ಸಾಹಿತ್ಯ – ಸಾಂಸ್ಕೃತಿಕ ಲೇಖನಗಳು)
*೯.ಸಂಶೋಧನಾತ್ಮಕ ಲೇಖನಗಳು.೨೪*
*೧೦.ವಿವಿಧ ಸ್ಮರಣ ಸಂಚಿಕೆಗಳಲ್ಲಿ ಸುಮಾರು ೨೦ ಲೇಖನಗಳು* .
*೧೧.ವಿವಿಧ ಅಭಿನಂದನ ಗ್ರಂಥಗಳಲ್ಲಿ ಸುಮಾರು ೨೫ ಲೇಖನಗಳು*
*೧೨- ೨೨ ಸ್ಮರಣ ಸಂಚಿಕೆಗಳ ಪ್ರಧಾನ ಸಂಪಾದಕ*
*೧೩.ಕಂದ,ಷಟ್ಪದಿ, ಸಾಂಗತ್ಯ, ರಗಳೆ,ತ್ರಿಪದಿ,ಚೌಪದಿಗಳಲ್ಲಿ ನೂರಾರು ಕವನಗಳು*

*ಸದ್ಯದಲ್ಲಿಯೇ ಪ್ರಕಟವಾಗಲಿರುವ ಕೃತಿಗಳು-*
*~~~~~~~~~~~~~~~~~~~~~~*
*೧.”,ಹವ್ಯಕ-ಕನ್ನಡ ಪದಕೋಶ “*
*೨.”ಹೆದ್ದೆರೆ”*(ಲೇಖನ ಸಂಕಲನ)
*೩.”ಜೀವನ ದರ್ಪಣ*”(ಪ್ರಬಂಧ ಸಂಕಲನ)
*೪.”ಮೆದುಳಿಗೆ ಹೊದಳು*”(ಸ್ವರಚಿತ ಒಗಟುಗಳ ಸಂಕಲನ)
*೫.”ಇಬ್ಬನಿ*”(ಲಲಿತ ಪ್ರಬಂಧ ಸಂಕಲನ)
*೬.”ವೃಂದಾವನ* “(ಭಾವಗೀತೆಗಳ ಸಂಕಲನ)
*೭.” ಚಿಂತನ ಚಿಲುಮೆ*”(ಆಕಾಶವಾಣಿಯ ಚಿಂತನಗಳು)
*೮.”ಸ್ಥಿತಪ್ರಜ್ಞನ ವಚನಗಳು “*(೧೦೦೮ ಸ್ವತಂತ್ರ ಮುಕ್ತಕಗಳು)”
*೯.ಛಂದೋಬದ್ಧ ಚಿತ್ರಕವನಗಳು* ( ಷಟ್ಪದಿ ,ಸಾಂಗತ್ಯ, ಕಂದ,ರಗಳೆ,ವೃತ್ತಗಳಲ್ಲಿ ಸುಮಾರು ೧೦೦ ಕವನಗಳು)
*೧೦.ಹಾಸ್ಯ ಸುಧಾ* ( ೧೫ ಹಾಸ್ಯ ಲೇಖನಗಳು)

ಹೊಸ ಆವಿಷ್ಕಾರಗಳು
*****
ರಗಳೆಯ ಪ್ರಕಾರಗಳಲ್ಲಿ ಹೊಸದಾಗಿ *ಉಮಲ ರಗಳೆ* ಹಾಗೂ *ವಿಮಲ ರಗಳೆ* ಎಂಬ ವಿಶೇಷ ಪ್ರಕಾರಗಳ ಸಂಶೋಧನೆ.
*ಷಟ್ಪದಿ ಪ್ರಕಾರಗಳಲ್ಲಿ* ಹೊಸದಾಗಿ *ನವನೀತ ಷಟ್ಪದಿ* ಎಂಬ ಛಂದೋ ಪ್ರಕಾರದ ಸಂಶೋಧನೆ.

ಜವಾಬ್ದಾರಿಗಳು
*****
೧ .ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಅಧ್ಯಕ್ಷ.ಹಾಗೂ ಕರ್ನಾಟಕ ರಾಜ್ಯ ಉಪಾಧ್ಯಕ್ಷ.
೨.ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ.
೩.ಕೇಂದ್ರ ಮಕ್ಕಳ ಸಾಹಿತ್ಯ ಸಂಗಮದ (ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆ ಸಹಿತ ಪೂರ್ವಾಧ್ಯಕ್ಷ ಹಾಗೂ ಖಾಯಂ ಆಹ್ವಾನಿತ)
೪.ಸೌಮ್ಯ ಪ್ರಕಾಶನದ ಅಧ್ಯಕ್ಷ.
೫.ಕೇರಳ ರಾಜ್ಯ ಮಟ್ಟದ ಅಧಿಕೃತ ಶಿಕ್ಷಣ ಸಂಪನ್ಮೂಲ ವ್ಯಕ್ತಿ.
೬.ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆಗಳ ಅಂಗೀಕೃತ ತೀರ್ಪುಗಾರ.
೭.ಕೇರಳ ರಾಜ್ಯ ಪಿಂಚಣಿದಾರರ ಸಂಘದ ಕುಂಬ್ಳೆ ಘಟಕದ ಉಪಾಧ್ಯಕ್ಷ.
೮.ಹಲವು ಸಂಘಟನೆಗಳ ಸ್ಥಾಪಕಾಧ್ಯಕ್ಷ , ಪೂರ್ವಾಧ್ಯಕ್ಷ ಇತ್ಯಾದಿ.
೯.ಹೋಲಿ ಫ್ಯಾಮಿಲಿ ಶಾಲೆ , ಹೈಸ್ಕೂಲ್ ಹಾಗೂ ವಿವೇಕಾನಂದ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಪೂರ್ವಾಧ್ಯಕ್ಷ.
*****