ಗಜಲ್
–
ಅವಳೊಬ್ಬಳೇ ನನಗೆ ಬದುಕಿನ ದಾರಿಯೊಳು ಜೊತೆಯಲಿರುವಳು
ಎಂಥದೇ ಕಷ್ಟದ ಸಮಯದಿ ಕೈಬಿಡದೆ ಅವಳು ಜೊತೆಯಲಿರುವಳು
–
ಯಾವುದೇ ಸಮಯದಿ ಎದೆ ಹಾಲಾಹಲ ದಾವಾನಲವಾಗಿ ಕುದಿದರೂ
ಮನದಿ ಒಲವಿನ ಮಳೆಹನಿಯಾಗಿ ಎದೆಯೊಳು ಜೊತೆಯಲಿರುವಳು
–
ಒಂಟಿ ಪಯಣಿಗನಾಗಿ ನೀರು ನೆರಳಿಲ್ಲದ ಮರುಭೂಮಿಯಲಿ ನಡೆದಿದ್ದೆ
ಪ್ರತಿ ಬೆವರಹನಿಗೆ ತಂಗಾಳಿಯಾಗಿ ಪ್ರತಿ ಹೆಜ್ಜೆಯೊಳು ಜೊತೆಯಲಿರುವಳು
–
ಗಿಡವೊಂದರ ಟೊಂಗೆಯಲಿ ಉಳಿದ ದಿನಗಳನೆಣಿಸುತಲಿತ್ತು ಈ ಜೀವ
ಬಿಸಿಲು ಬಿರುಗಾಳಿಗೂ ನಲುಗದಂತೆ ಉಸಿರಾದವಳು ಜೊತೆಯಲಿರುವಳು
–
ಎಲ್ಲೋ ಬೆಟ್ಟಗುಡ್ಡಗಳ ಮಧ್ಯೆ ಬತ್ತಿ ಬಳಲಿ ಬೆಂಡಾಗಿದ್ದನು ಸಿದ್ಧ
ಚಿಲುಮೆಯ ನದಿಯಾಗಿಸಿ ಸಾಗರಕೆ ಬರಸೆಳೆದವಳು ಜೊತೆಯಲಿರುವಳು
-ಸಿದ್ಧರಾಮ ಕೂಡ್ಲಿಗಿ